ಸಂಪಾದಕೀಯ| ಪ್ರವಾಹದ ಆತಂಕ

Flood
Published on

ಕೆಲವೊಮ್ಮೆ ಸಮಸ್ಯೆಗಳು ಒಂದರ ಹಿಂದರಂತೆ ಒಂದು ಬರುತ್ತವೆ. ರಾಜ್ಯ ಸೇರಿ ಇಡೀ ದೇಶ ಕರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಕರೊನಾ ತಂದೊಡ್ಡಿರುವ ತಾಪತ್ರಯಗಳು ಮತ್ತು ಸೃಷ್ಟಿಸಿರುವ ಹಾನಿ ಪ್ರಮಾಣ ಗೊತ್ತಿರುವಂಥದ್ದೇ. ಈ ಮಧ್ಯೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗುವ ಆತಂಕ ತಲೆದೋರಿದೆ. 2019 ಆಗಸ್ಟ್-ಅಕ್ಟೋಬರ್ ಅವಧಿಯಲ್ಲೇ ರಾಜ್ಯ ಭಾರಿ ನೆರೆಯನ್ನು ಎದುರಿಸಬೇಕಾಯಿತು, ಉತ್ತರ ಕರ್ನಾಟಕ ಭಾಗದ ಸಾವಿರಾರು ಕುಟುಂಬಗಳು ಮನೆ, ಇತರ ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟ ಅನುಭವಿಸಿದವು. ಆ ಪ್ರವಾಹದ ಆಘಾತದಿಂದಲೇ ರಾಜ್ಯ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗ ಕೊಡಗು, ಕರಾವಳಿ, ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಲವು ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚಿದೆ. ಕದ್ರಾ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಉತ್ತರ ಕನ್ನಡ, ಹಾಸನ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಅಲ್ಲಲ್ಲಿ ಆಸ್ತಿಪಾಸ್ತಿ ಹಾನಿಯಾಗಿದೆ. ನದಿತೀರದ ಗ್ರಾಮಗಳ ಸ್ಥಿತಿಯಂತೂ ಶೋಚನೀಯ. ಇನ್ನು ಹಲವು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿರುವುದರಿಂದ, ಹಾನಿಯ ಪ್ರಮಾಣ ಮತ್ತಷ್ಟು ಹೆಚ್ಚುವ ಆತಂಕವಿದೆ.

ರಾಜ್ಯ ಸರ್ಕಾರ ಕರೊನಾ ವಿರುದ್ಧ ಹೋರಾಟದತ್ತ ಗಮನ ಕೇಂದ್ರೀಕರಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೊನಾ ಸೋಂಕಿಗೆ ಒಳಗಾಗಿದ್ದರೂ, ಆಸ್ಪತ್ರೆಯಿಂದಲೇ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ. ತುರ್ತು ಕೆಲಸಗಳಿಗೆ, ಅನುಮತಿಗಳಿಗೆ ಕಾಯುವಂತಾಗಬಾರದು ಎಂಬ ಉದ್ದೇಶದಿಂದ ಸಿಎಂ ಆಸ್ಪತ್ರೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಈಗ ಕರೊನಾದ ಜತೆಜತೆಗೆ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ವ್ಯವಸ್ಥೆ ಸನ್ನದ್ಧವಾಗಬೇಕಿದೆ. ಮುಂಗಾರಿನ ಆಗಮನದಿಂದ ಭರ್ಜರಿ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತವಾಗಿದೆ. ಅವರ ಆತ್ಮಸ್ಥೈರ್ಯ ಕುಂದದಂತೆ ಕಾಳಜಿ ತೋರಬೇಕಿದೆ. ಇನ್ನು ಪರಿಹಾರ ಕಾರ್ಯವನ್ನು ತ್ವರಿತವಾಗಿ ಆರಂಭಿಸಬೇಕಿದ್ದು, ಅಪಾಯದಂಚಿನಲ್ಲಿರುವ ಗ್ರಾಮಗಳ ಜನರನ್ನು ಸ್ಥಳಾಂತರಿಸಬೇಕಿದೆ. ಈ ಕೆಲಸಗಳೆಲ್ಲ ಪರಿಣಾಮಕಾರಿಯಾಗಿ ಸಾಗಬೇಕಾದರೆ ಆಯಾ ಜನಪ್ರತಿನಿಧಿಗಳು ಕೂಡ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕಿದೆ. ಸಚಿವರುಗಳು ಅವರ ಉಸ್ತುವಾರಿ ಜಿಲ್ಲೆಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಲಿ. ಅದೇ ರೀತಿ ಶಾಸಕರು ಸ್ವಂತ ಕ್ಷೇತ್ರಗಳಲ್ಲಿ ಶೀಘ್ರ ಸ್ಪಂದಿಸುವ, ನೆರೆಪೀಡಿತರ ಸಮಸ್ಯೆಗಳಿಗೆ ಕಿವಿಯಾಗುವ ಅಗತ್ಯವಿದೆ. ನೆರೆ ನಿರ್ವಹಣೆ ನಿಟ್ಟಿನಲ್ಲಿ ಸರ್ಕಾರ ತ್ರಿಸೂತ್ರಗಳನ್ನು ಅನುಸರಿಸುತ್ತಿರುವುದು ಸೂಕ್ತವಾಗಿದೆ. ಅಣೆಕಟ್ಟುಗಳ ನಿರ್ವಹಣೆಗೆ ಸಮಗ್ರ ವಿಧಾನ, ಪ್ರತಿ ಹಳ್ಳಿಯ ಸಂಪೂರ್ಣ ಮಾಹಿತಿ ಸಂಗ್ರಹ, 826 ಗ್ರಾಪಂಗಳಲ್ಲಿ ಕಾರ್ಯಪಡೆಗಳ ರಚನೆಯ ಕ್ರಮ ಮಹತ್ವದ ಹೆಜ್ಜೆಯೇ. ಕಳೆದ ವರ್ಷದ ಪ್ರವಾಹದ ಹೊತ್ತಲ್ಲಿ ಜನ ಪಟ್ಟ ಕಷ್ಟಗಳು, ಪರಿಹಾರ ನೀಡುವ ಹೊತ್ತಲ್ಲಿ ಎಸಗಿದ ಪ್ರಮಾದಗಳು ಕಣ್ಣೆದುರಿಗೇ ಇವೆ. ಮತ್ತೆ ಇಂಥ ಪ್ರಮಾದಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ. ಪ್ರತಿಪಕ್ಷಗಳು ಕೂಡ ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕೈಚೆಲ್ಲದೆ ಅವರ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿ. ಒಟ್ಟಾರೆ, ಈ ಸವಾಲಿನ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net