

ಕರೊನಾ ನಿಯಂತ್ರಣಕ್ಕೆಂದು ವಿಧಿಸಲಾದ ಲಾಕ್ಡೌನ್ ಮತ್ತಿತರ ಕಾರಣದಿಂದಾಗಿ ಇಡೀ ವಿಶ್ವದಲ್ಲಿ ಬಿಕ್ಕಟ್ಟಿನ ಸನ್ನಿವೇಶ ಏರ್ಪಟ್ಟಿದೆ. ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಜಾಗತಿಕವಾಗಿ, ಸಂಘಟಿತ ವಲಯದಲ್ಲಿಯೇ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು, ಅಸಂಘಟಿತ ವಲಯದವರ ಪಾಡಂತೂ ಕೇಳುವಂತಿಲ್ಲ. ಜೀವನೋಪಾಯಕ್ಕೆಂದು ಮೂಲ ಸ್ಥಳದಿಂದ ಬೇರೆ ಬೇರೆ ಕಡೆ ತೆರಳಿದ್ದವರ ಪೈಕಿ ಲಕ್ಷಾಂತರ ಜನರಿಗೆ ಇನ್ನೂ ಪರ್ಯಾಯ ಕೆಲಸ ದಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿಯೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಜಾರಿಗೆ ತರಲು ಕೇಂದ್ರ ಸರ್ಕಾರ ಆಲೋಚನೆ ನಡೆಸುತ್ತಿದೆ.
ಇಂಥ ಇಕ್ಕಟ್ಟು-ಬಿಕ್ಕಟ್ಟಿನ ಸಂದರ್ಭದಲ್ಲಿ ಇದು ಕೆಲಮಟ್ಟಿಗೆ ಪ್ರಯೋಜನಕಾರಿಯಾಗಬಲ್ಲದು. ಏಕೆಂದರೆ ಈಗ ಜನರಿಗೆ ತುರ್ತಾಗಿ ದೈನಂದಿನ ಜೀವನ ನಡೆಸಲು ಅಗತ್ಯವಾದ ಕೆಲಸ ಬೇಕಾಗಿದೆ. ನರೇಗಾ ಯೋಜನೆಯು ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 2005ರಲ್ಲಿ ಬಂದ ಯೋಜನೆ. ಗ್ರಾಮೀಣ ಪ್ರದೇಶಗಳಲ್ಲಿ, ಈ ಯೋಜನೆಯಲ್ಲಿ ನೋಂದಣಿಯಾದವರಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಕೆಲಸದ ಖಾತರಿ ಕೊಡುವುದು ಈ ಯೋಜನೆಯ ಒಟ್ಟಾರೆ ಸಾರಾಂಶವಾಗಿದ್ದು, ದಿನಕ್ಕೆ ಕನಿಷ್ಠ 202 ರೂ. ದಿನಗೂಲಿ ನೀಡಲಾಗುತ್ತದೆ. ಈ ಮೊತ್ತ ರಾಜ್ಯ ರಾಜ್ಯಗಳಲ್ಲಿ ವ್ಯತ್ಯಾಸವಾಗುವುದೂ ಇದೆ. ರಸ್ತೆ, ಕೆರೆ, ಕಾಲುವೆ ಇತ್ಯಾದಿ ಸ್ಥಳೀಯ ಅಗತ್ಯದ ಕಾಮಗಾರಿಗಳನ್ನು ಈ ಮೂಲಕ ಮಾಡಿಸಲಾಗುತ್ತದೆ. ಈ ಯೋಜನೆಯಿಂದ ಗ್ರಾಮೀಣ ಪ್ರದೇಶದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಯೋಜನೆಯಲ್ಲಿ ಅವ್ಯವಹಾರ ನಡೆಯುವ ಬಗ್ಗೆ ಮತ್ತು ಯೋಜನೆ ದುರುಪಯೋಗದ ಬಗ್ಗೆಯೂ ದೂರುಗಳಿವೆ.
ನಗರ ಪ್ರದೇಶಗಳಲ್ಲಿ ನರೇಗಾವನ್ನು ಜಾರಿಗೆ ತರುವುದಾದರೆ ಈವರೆಗಿನ ಅನುಭವದ ಆಧಾರದ ಮೇಲೆ, ಯೋಜನೆಯ ಸದುಪಯೋಗದ ಬಗ್ಗೆ ಮತ್ತು ಅರ್ಹರಿಗೆ ನಿಜವಾಗಿಯೂ ಪ್ರಯೋಜನವಾಗುವ ನಿಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ಜಾರಿಗೊಳಿಸಬೇಕಾಗುತ್ತದೆ. ಏಕೆಂದರೆ, ಒಂದು ರೀತಿಯ ಗೊಂದಲಗೋಜಲು ನಿರ್ವಣವಾಗಿರುವ ಈ ದಿನಗಳಲ್ಲಿ, ಕಟ್ಟುನಿಟ್ಟಾಗಿ ದಾಖಲೆಗಳ ಆಧಾರದ ಮೇಲೇ ಎಲ್ಲ ನಿರ್ಣಯ ಅಸಾಧ್ಯ. ಹಾಗಂತ, ದಾಖಲೆಗಳೇ ಇಲ್ಲದೆ ಬೇಕಾಬಿಟ್ಟಿ ನಿರ್ಧರಿಸುವ ಹಾಗೂ ಇಲ್ಲ. ಇಂಥ ಸಂದರ್ಭದಲ್ಲೇ ದಲ್ಲಾಳಿಗಳು ಯಥೇಚ್ಛವಾಗಿ ಚಿಗಿತುಕೊಳ್ಳುವುದು. ಕರೊನಾ ಕಾಲವು ನಮ್ಮ ಎದುರಿಗೆ ಅನೇಕ ಸವಾಲುಗಳನ್ನು ತಂದಿಟ್ಟಿದ್ದು, ಹೇಗೆ ಎದುರಿಸಬೇಕು ಎಂಬ ಬಗ್ಗೆ ಇನ್ನಷ್ಟು ವ್ಯಾಪಕ ಚಿಂತನೆ ನಡೆಯಬೇಕಿದೆ.
ಅದರಲ್ಲೂ, ಕೆಲಸವಿಲ್ಲದೆ ಖಾಲಿ ಕುಳಿತಿರುವವರಿಗೆ ದುಡಿಯಲು ಆಸ್ಪದ ಸಿಗಬೇಕಾಗಿದೆ. ಇಲ್ಲವಾದಲ್ಲಿ ಕೌಟುಂಬಿಕವಾಗಿ, ಒಟ್ಟಾರೆ ಸಮಾಜದ ಆರೋಗ್ಯದ ಮೇಲೆ ಹಾಗೂ ಕಾನೂನು ಸುವ್ಯವಸ್ಥೆಯ ಮೇಲೆ ಬೇರೆ ಬೇರೆ ರೀತಿಯ ಪರಿಣಾಮಗಳು ಆಗಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ, ನಿಜ. ಆದರೆ ಈ ವಿಷಯದಲ್ಲಿ ಅಧಿಕಾರಶಾಹಿಯ ವಿಳಂಬ ಮತ್ತು ಭ್ರಷ್ಟಾಚಾರದ ನೆರಳು ಸೋಕದಂತೆ ನಿಗಾ ವಹಿಸುವುದು ಮುಖ್ಯ. ಒಟ್ಟಿನಲ್ಲಿ, ಕರೊನೊತ್ತರ ಬದುಕು ಕಟ್ಟಿಕೊಳ್ಳುವಿಕೆಯು ಸಾಮೂಹಿಕವಾಗಿ ನಡೆಯಬೇಕಾದ ಯತ್ನವಾಗಿದ್ದು, ಸರ್ಕಾರದ ಜತೆಗೆ ಖಾಸಗಿ ವಲಯ ಮತ್ತು ಸಮಾಜದ ಪಾತ್ರವೂ ಮುಖ್ಯವಾದುದೇ ಆಗಿದೆ.