

ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದಲೂ ಡ್ರಗ್ಸ್ ಮಾಫಿಯಾ ಮತ್ತು ಅದಕ್ಕೆ ಸ್ಯಾಂಡಲ್ವುಡ್ನ ವ್ಯಾಪಕ ನಂಟು ಇರುವ ಕುರಿತಂತೆ ಚರ್ಚೆ ನಡೆಯುತ್ತಿದ್ದು, ತನಿಖೆಯೂ ಪ್ರಗತಿಯಲ್ಲಿದೆ. ಇದೇ ವೇಳೆ, ರಾಜ್ಯ ಮತ್ತು ದೇಶದಲ್ಲಿ ಮಾದಕವಸ್ತು ವ್ಯಸನಿಗಳ ಸಂಖ್ಯೆ ಚಿಂತೆಗೀಡು ಮಾಡುವಷ್ಟು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಅದರಲ್ಲೂ, ಹದಿಹರೆಯದವರು ಮತ್ತು ಯುವಸಮುದಾಯ ಈ ವ್ಯಸನಕ್ಕೆ ಒಳಗಾಗುತ್ತಿರುವುದು, ವ್ಯವಸ್ಥೆಯ ಲೋಪಗಳನ್ನು ಮತ್ತು ಕುಸಿಯುತ್ತಿರುವ ನೈತಿಕತೆಯನ್ನು ಎತ್ತಿ ತೋರಿಸುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಇಂಥ ಜಾಲಗಳು ಬೇರುಬಿಟ್ಟಿರುವುದು, ಡ್ರಗ್ಸ್ ಪಿಡುಗಿನ ವಿರುದ್ಧ ಪ್ರಬಲ ಹೋರಾಟ ಕೈಗೊಳ್ಳುವ ಅಗತ್ಯವನ್ನು ಸಾರಿದೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ರಾಷ್ಟ್ರೀಯ ಮದ್ಯವ್ಯಸನಿಗಳ ಚಿಕಿತ್ಸಾ ಕೇಂದ್ರದ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸಿದ್ಧಪಡಿಸಿರುವ 2019ರ ವರದಿಯು ಬೆಚ್ಚಿಬೀಳಿಸುವ ಅನೇಕ ಸಂಗತಿಗಳನ್ನು ಹೊರಗೆಡವಿದೆ. ದೇಶದಲ್ಲಿ ಮಾದಕವ್ಯಸನಿಗಳ ಸಂಖ್ಯೆ 9.9 ಕೋಟಿ ಇದ್ದರೆ, ಕರ್ನಾಟಕದಲ್ಲಿ ಈ ಸಂಖ್ಯೆ 18 ಲಕ್ಷ. ಪಂಜಾಬ್ ಮೊದಲ ಸ್ಥಾನದಲ್ಲಿದ್ದು, ಅಲ್ಲಿನ ಸ್ಥಿತಿ ಏನಾಗಿದೆ, ಯುವಕರು ಎಷ್ಟೊಂದು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬುದು ಗೊತ್ತೇ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್ನ್ನು ಡ್ರಗ್ಸ್ ಮುಕ್ತಗೊಳಿಸುವ ಆಶ್ವಾಸನೆಯನ್ನೇ ಪ್ರಮುಖ ರಾಜಕೀಯ ಪಕ್ಷಗಳು ನೀಡಿದ್ದವು. ಇಂದಿಗೂ ಪರಿಸ್ಥಿತಿಯಲ್ಲಿ ಹೇಳಿಕೊಳ್ಳುವಂಥ ಬದಲಾವಣೆಗಳೇನೂ ಆಗಿಲ್ಲ.
ಭಾರತದಲ್ಲಿ ಪ್ರತಿನಿತ್ಯ 100 ಕೋಟಿ ಮೌಲ್ಯದ ಹೆರಾಯಿನ್ ಡ್ರಗ್ಸ್ ಮಾರಾಟ ಆಗುತ್ತಿದ್ದರೆ, ಪೊಲೀಸರ ಅಂದಾಜಿನ ಪ್ರಕಾರ ಕರ್ನಾಟಕದಲ್ಲೇ ಮಾದಕವಸ್ತುಗಳ ವಾರ್ಷಿಕ -ಠಿ; 450 ರಿಂದ -ಠಿ; 500 ಕೋಟಿ ವಹಿವಾಟು ನಡೆಯುತ್ತದೆ. ಈ ಅಂಕಿಸಂಖ್ಯೆಗಳೇ ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಇಂಥ ವ್ಯಸನಕ್ಕೆ ಒಳಗಾದವರ ಪೈಕಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಯುವಸಮುದಾಯವನ್ನು ಹಾಳುಗೆಡವುವ, ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ಮಾದಕವಸ್ತುಗಳ ಕರಾಳಜಾಲವನ್ನು ಹತ್ತಿಕ್ಕಲು ಕಠಿಣ ಕಾನೂನು ಇಲ್ಲದಿರುವುದು ವಿಪರ್ಯಾಸ. ಕಳ್ಳಸಾಗಾಣಿಕೆಯ ಪರಿಯಂತೂ ಆಘಾತಕಾರಿ. ವಿದೇಶಗಳಿಂದ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಮಾದಕವಸ್ತುಗಳು ಸಂಬಂಧಿತರ ಕೈಗಳಿಗೆ ಸೇರುವುದಾದರೂ ಹೇಗೆ ಎಂಬುದು ಯಕ್ಷಪ್ರಶ್ನೆ. ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರು ಬಿಗಿಯಾದ ತಪಾಸಣೆಗೆ ಒಳಪಡುತ್ತಾರೆ. ನಿಯಮಗಳಿಗೆ ವಿರುದ್ಧವಾದ ವಸ್ತುಗಳನ್ನು ಇರಿಸಿಕೊಂಡರೆ, ವಿಚಾರಣೆಯೂ ನಡೆಯುತ್ತದೆ. ಆದರೆ, ಹಲವು ದೇಶಗಳಿಂದ ವಿಮಾನಗಳ ಮೂಲಕವೇ ಮಾದಕವಸ್ತುಗಳು ಕರ್ನಾಟಕಕ್ಕೆ, ದೇಶದ ಬೇರೆ, ಬೇರೆ ಭಾಗಗಳಿಗೆ ತಲುಪುತ್ತಿದ್ದು, ಯಾರೆಲ್ಲ ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದನ್ನು ತನಿಖೆ ಮೂಲಕ ಪತ್ತೆ ಹಚ್ಚಬೇಕಿದೆ. ಕರ್ನಾಟಕದಲ್ಲಿ ಡ್ರಗ್ಸ್ ಜಾಲ ನಿಯಂತ್ರಣ ಉದ್ದೇಶದಿಂದ 2019ರಲ್ಲೇ ಡಿಜಿಪಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ, ಅದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಇನ್ನಾದರೂ, ಸರ್ಕಾರ, ಪೊಲೀಸ್ ಇಲಾಖೆ, ನಾಗರಿಕ ಸಮುದಾಯ ಒಟ್ಟಾಗಿ ಈ ಅಪಾಯಕಾರಿ ಪಿಡುಗಿನ ವಿರುದ್ಧ ಹೋರಾಡಿ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಿದೆ.