

ಮೊದಲೇ ಜಾಗತಿಕ ಆರ್ಥಿಕ ಹಿಂಜರಿತದ ಹೊಡೆತದಿಂದ ಭಾರತದ ಆರ್ಥಿಕತೆಯೂ ಇಳಿಮುಖವಾಗುತ್ತ ಸಾಗಿದೆ. ಜಿಡಿಪಿ ಕುಸಿದಿದೆ. ಉತ್ಪಾದನಾ ರಂಗ ಸೇರಿ ಉದ್ಯಮದ ಹಲವು ವಲಯಗಳು ನಷ್ಟ ಅನುಭವಿಸುತ್ತಿವೆ. ಈ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಸರ್ಕಾರ ಯೋಚಿಸುತ್ತಿರುವಾಗಲೇ ಹೊಸದೊಂದು ಸಮಸ್ಯೆ ಉದ್ಭವವಾಗಿದೆ. ಚೀನಾದಲ್ಲಿ ಮಾರಕ ಕರೊನಾ ವೈರಸ್ ಹಾವಳಿಯಿಂದಾಗಿ ಅಲ್ಲಿನ ಷೇರುಪೇಟೆ ಕುಸಿದಿರುವುದಂತೂ ಹೌದು. ಆದರೆ, ಕಚ್ಚಾವಸ್ತುಗಳ ಸರಬರಾಜಿನಲ್ಲಿ ಏರುಪೇರಾಗಿರುವುದರಿಂದ ಭಾರತದ ಹಲವು ಉತ್ಪನ್ನಗಳಿಗೆ ಬೆಲೆಯೇರಿಕೆಯ ಬರೆ ಬಿದ್ದಿದೆ. ಮೊದಲೇ ಹೈರಾಣಾಗಿರುವ ಜನಸಾಮಾನ್ಯರಿಗೂ ಹೊಸದೊಂದು ಸಮಸ್ಯೆ. ಔಷಧ ತಯಾರಿಕೆಯಿಂದ ಹಿಡಿದು ಮೊಬೈಲ್ ಫೋನ್ವರೆಗೆ ಹಲವು ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಕಂಡು ಬಂದಿದೆ.
ಭಾರತದಲ್ಲಿ ನೋವು ನಿವಾರಕವಾಗಿ ಬಳಸಲಾಗುವ ಪ್ಯಾರಾಸಿಟಮಲ್ ಔಷಧ ಬೆಲೆಗಳು ಶೇಕಡ 40 ಏರಿಕೆಯಾಗಿವೆ. ವಿವಿಧ ಬ್ಯಾಕ್ಟಿರಿಯಾ ಸೋಂಕುಗಳ ಚಿಕಿತ್ಸೆಗೆ ಬಳಸುವ ಆಂಟಿಬಯೊಟಿಕ್ ಆದ ಅಜಿತ್ರೊಮೈಸಿನ್ ಬೆಲೆ ಶೇಕಡ 70 ಹೆಚ್ಚಿದೆ. ಮುಂದಿನ ತಿಂಗಳ ಮೊದಲ ವಾರದೊಳಗೆ ಸರಬರಾಜು ಪುನಾರಂಭವಾಗದಿದ್ದರೆ ಔಷಧ ತಯಾರಿಕೆ ಉದ್ಯಮ ತೀವ್ರ ಕೊರತೆ ಎದುರಿಸುವ ಆತಂಕವಿದೆ. ಸೋಂಕಿನಿಂದ ತತ್ತರಿಸಿರುವ ಚೀನಾದಲ್ಲಿ ಉತ್ಪಾದನೆ ಪ್ರಕ್ರಿಯೆ ನಿಧಾನಗೊಂಡಿರುವುದರಿಂದ ಈ ಸಮಸ್ಯೆ ಕಾಣಿಸಿಕೊಂಡಿದೆ. ಕಚ್ಚಾವಸ್ತುಗಳ ಸರಬರಾಜು ಸಮರ್ಪಕವಾಗದಿದ್ದರೆ ಔಷಧ ತಯಾರಿಕೆ ಮಾತ್ರವಲ್ಲ ಇತರ ವಲಯಗಳು ಕೂಡ ಸಂಕಷ್ಟ ಎದುರಿಸಬೇಕಾಗುತ್ತದೆ. ಭಾರತದ ಕೆಲವು ಮೊಬೈಲ್ ತಯಾರಿಕಾ ಕಂಪನಿಗಳು ಕೂಡ ಇದರಿಂದ ಹಿನ್ನಡೆ ಅನುಭವಿಸಿದ್ದು, ಪರಿಸ್ಥಿತಿ ಸುಧಾರಿಸದಿದ್ದರೆ ಉತ್ಪಾದನೆಯನ್ನೇ ನಿಲ್ಲಿಸಬೇಕಾಗುತ್ತದೆ.
ಈ ನಡುವೆ, ಚೀನಾದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಪರಿಸ್ಥಿತಿ ಸದ್ಯಕ್ಕಂತೂ ಚೇತರಿಕೆ ಕಾಣುವ ಲಕ್ಷಣವಿಲ್ಲ. ಆರ್ಥಿಕ ಹಿಂಜರಿತದ ಹೊರೆಯ ಬೆನ್ನಲ್ಲೇ ಈ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಉದ್ಯಮ ವಲಯ ಚಿಂತಾಕ್ರಾಂತವಾಗಿದೆ. ಈ ಪರಿಸ್ಥಿತಿ ಎಷ್ಟು ದಿನ ಮುಂದುವರಿಯಲಿದೆ ಎಂದು ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ. ಹೀಗಾಗಿ, ಪರ್ಯಾಯ ಮಾರ್ಗಗಳನ್ನು ಶೋಧಿಸುವ ಅನಿವಾರ್ಯತೆ ಕೇಂದ್ರ ಸರ್ಕಾರದ ಮುಂದೆ ಇದೆ. ಅನಿವಾರ್ಯವಾಗಿ, ಮುಂದೆ ಕೆಲ ಉತ್ಪನ್ನಗಳ ಉತ್ಪಾದನೆ ಸ್ಥಗಿತಗೊಂಡರೆ ಅಥವಾ ಕಚ್ಚಾವಸ್ತುಗಳ ಪೂರೈಕೆ ನಿಂತುಬಿಟ್ಟರೆ ಸಮಸ್ಯೆ ಗಂಭೀರ ಸ್ವರೂಪವನ್ನು ತಳೆಯುತ್ತದೆ. ಹಾಗಾಗಿ, ಯಾವ ಕ್ರಮಗಳನ್ನು ಕೈಗೊಳ್ಳಬಹುದು, ಸದ್ಯದ ಮಟ್ಟಿಗಾದರೂ ಚೀನಾದ ಅವಲಂಬನೆ ತಪ್ಪಿಸಿ ಬೇರೆ ಯಾವ ಮೂಲಗಳಿಂದ ಕಚ್ಚಾವಸ್ತು ಆಮದು ಮಾಡಿಕೊಳ್ಳಬಹುದು, ಬೆಲೆಯೇರಿಕೆ ಆಗದಂತೆ ನಿಗಾ ವಹಿಸುವುದು ಹೇಗೆ ಎಂಬುದರ ಬಗ್ಗೆ ಈಗಲೇ ಕಾಳಜಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅತ್ಯಂತ ಎಚ್ಚರಿಕೆಯ ಮತ್ತು ಯಾರಿಗೂ ಹಾನಿಯಾಗದಂಥ ಹೆಜ್ಜೆಗಳನ್ನು ಇರಿಸಬೇಕಿದೆ.