

ತನ್ನ ವಿಸ್ತರಣಾವಾದಿ ಮತ್ತು ಆಕ್ರಮಣಕಾರಿ ನೀತಿಗೆ ಯಾರೂ ವಿರೋಧ ತೋರಿ, ಸಡ್ಡು ಹೊಡೆಯುವುದಿಲ್ಲ ಎಂಬ ಚೀನಾದ ನಂಬಿಕೆ ಧರಾಶಾಯಿಯಾಗಿದೆ. ಜಗತ್ತಿನ ಅನೇಕ ರಾಷ್ಟ್ರಗಳೊಡನೆ ಗಡಿ ತಂಟೆ ತೆಗೆದು, ವಿವಾದಗಳನ್ನು ಸೃಷ್ಟಿಸುತ್ತಿರುವ ಡ್ರಾ್ಯಗನ್ ರಾಷ್ಟ್ರಕ್ಕೆ ಹಲವು ಹಿನ್ನಡೆಗಳಾಗುತ್ತಿದ್ದು, ಆ ರಾಷ್ಟ್ರಕ್ಕೆ ಎಚ್ಚರಿಕೆ ಗಂಟೆಯೇ ಸರಿ.
ಇತ್ತೀಚೆಗೆ ಪೂರ್ವ ಲಡಾಖ್ ಪ್ರದೇಶದ ಗಲ್ವಾನ್ ಕಣಿವೆಯಲ್ಲಿ ಗಡಿತಂಟೆ ತೆಗೆದಿದ್ದ ಚೀನಾ, ವಾಸ್ತವ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಸ್ಥಿತಿ ಸೃಷ್ಟಿಸಿತ್ತು. ಅದರ ಆಕ್ರಮಣಕಾರಿ ಬುದ್ಧಿಯ ಪರಿಚಯ ಇರುವ ಭಾರತ ಈ ಬಾರಿ ತಕ್ಕ ಪ್ರತ್ಯುತ್ತರ ನೀಡಿತಲ್ಲದೆ, ಸೇನೆ ವಾಪಸ್ ಪಡೆಯಲು ಪಟ್ಟು ಹಿಡಿಯಿತು. ರಾಜತಾಂತ್ರಿಕ ಮಾರ್ಗಗಳನ್ನೂ ಸಮರ್ಥವಾಗಿ ಬಳಸಿತು. ಅಂತಿಮವಾಗಿ ಮಣಿದ ಚೀನಾ ತನ್ನ ಸೇನೆಯನ್ನು ವಿವಾದಿತ ಪ್ರದೇಶದಿಂದ ಹಿಂದಕ್ಕೆ ಕರೆಯಿಸಿಕೊಂಡಿತು. ಅಲ್ಲದೆ, ವಾಸ್ತವ ನಿಯಂತ್ರಣ ರೇಖೆಯಲ್ಲಿ ಸೇನೆ ನಿಯೋಜಿಸುವ ಆದೇಶವನ್ನು ಅಧ್ಯಕ್ಷ ಷಿ ಜಿನ್ಪಿಂಗ್ ಅವರೇ ನೀಡಿದ್ದರು ಎಂಬ ಸಂಗತಿ ಬಳಿಕ ಬಹಿರಂಗಗೊಂಡಿತಲ್ಲದೆ, ಆ ರಾಷ್ಟ್ರದ ನಾಯಕರ ಅಪಾಯಕಾರಿ ಮಾನಸಿಕತೆಯನ್ನು ಬಯಲಿಗೆಳೆಯಿತು. ಈ ಬೆಳವಣಿಗೆಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿರುವ ಅಮೆರಿಕ ಈಗ ಬಹಿರಂಗವಾಗಿ ಭಾರತದ ಪರವಾಗಿ ನಿಲ್ಲುವ ಮೂಲಕ, ಚೀನಾಗೆ ಬಿಸಿ ಮುಟ್ಟಿಸಿದೆ.
‘ಭಾರತ ನಂಬಿಕಸ್ಥ ಪಾಲುದಾರ ರಾಷ್ಟ್ರವಾಗಿದೆ. ಚೀನಾ ಆಕ್ರಮಣದ ವೇಳೆಗೆ ಅದರ ನೆರವಿಗೆ ಧಾವಿಸಬೇಕು’ ಎಂಬ ಮಹತ್ವದ ನಿರ್ಣಯವನ್ನು ಅಮೆರಿಕ ಸಂಸತ್ತು ಅಂಗೀಕರಿಸಿರುವುದು, ಮಹತ್ವದ ನಡೆ ಎಂದು ಅಂತಾರಾಷ್ಟ್ರೀಯ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ. ‘ಡಿಫೆನ್ಸ್ ಅಥರೈಸೇಷನ್ ಆಕ್ಟ್’ಗೆ ತಿದ್ದುಪಡಿ ತರುವ ನಿರ್ಣಯವನ್ನು ಭಾರತೀಯ ಮೂಲದ ಸಂಸದ ಅಮಿ ಬೆರಾ ಮತ್ತು ಸ್ಟೀವ್ ಚಲೋಟ್ ಮಂಡಿಸಿದ್ದು, ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದೊಂದಿಗೆ ಬಾಂಧವ್ಯ ವೃದ್ಧಿಸಿಕೊಂಡಿರುವ ಅಮೆರಿಕ ಈ ಮೂಲಕ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ.
ದಕ್ಷಿಣ ಚೀನಾ ಸಮುದ್ರದಲ್ಲೂ ವಿವಾದದ ಅಲೆ ಎಬ್ಬಿಸಿರುವ ಕಮ್ಯುನಿಸ್ಟ್ ರಾಷ್ಟ್ರ ಅಲ್ಲಿನ 10.3 ಲಕ್ಷ ಚದರ ಅಡಿ ಪ್ರದೇಶದ ಸಂಪತ್ತು ತನ್ನದೇ ಎಂದು ಹೇಳಿಕೊಂಡಿದೆ. ಇದರಿಂದ ವಿಯೆಟ್ನಾಂ, ಬ್ರೂನಿ, ಮಲೇಷ್ಯಾ, ತೈವಾನ್ ಸೇರಿ ಹಲವು ರಾಷ್ಟ್ರಗಳು ಅಸಮಾಧಾನಗೊಂಡಿವೆ. ಈ ಆಕ್ರಮಣಶೀಲತೆ ವಿರುದ್ಧ ಪ್ರಬಲ ಸಂದೇಶ ಸಾರುವ ಯತ್ನವಾಗಿ ಅಮೆರಿಕ ಪ್ರಸಕ್ತ ನಿರ್ಣಯ ಕೈಗೊಂಡಿದೆ ಎನ್ನಲಾಗಿದೆ.
ಚೀನಾ ಅಂತಾರಾಷ್ಟ್ರೀಯ ವಲಯದಲ್ಲಿ ಅಕ್ಷರಶಃ ಏಕಾಂಗಿಯಾಗುತ್ತಿದೆ. ಅದರ ಬೆಂಬಲಕ್ಕೆ ಇರುವ ಪಾಕಿಸ್ತಾನ ಸದೃಢ ರಾಷ್ಟ್ರವೇನಲ್ಲ. ಬದಲಾಗಿ ಆಂತರಿಕ ಸಮಸ್ಯೆಗಳಿಂದ ಬಳಲುತ್ತಿರುವ ಅದು ಅಂತಾರಾಷ್ಟ್ರೀಯ ವಲಯದಲ್ಲಿ ಯಾವುದೇ ವರ್ಚಸ್ಸು ಹೊಂದಿಲ್ಲ. ಪಾಕ್ನ್ನು ನಂಬಿಕೊಂಡು ಚೀನಾ ಏನನ್ನೂ ಮಾಡುವಂತಿಲ್ಲ. ಅಲ್ಲದೆ, ಭಾರತದ ಬದಲಾದ ಸ್ವರೂಪ ಮತ್ತು ಶಕ್ತಿಯ ಸ್ಪಷ್ಟ ರೂಪ ಈಗ ಚೀನಾಕ್ಕೆ ಪರಿಚಯ ಆಗಿರಲೇಬೇಕು. ರಾಜತಾಂತ್ರಿಕವಾಗಿ ಮತ್ತಷ್ಟು ಬಲಾಢ್ಯಗೊಂಡಿರುವ ಭಾರತದೊಂದಿಗೆ ಅಮೆರಿಕದ ಸ್ನೇಹ ಉತ್ತಮ ಭವಿಷ್ಯಕ್ಕೆ ಹಾದಿಯಾಗಲಿ.