ಸಂಪಾದಕೀಯ: ಅಮೆರಿಕದಲ್ಲಿ ಜನಾಂಗೀಯ ಹಲ್ಲೆ ಪ್ರಕರಣಗಳಿಂದ ಮಾನವೀಯತೆ ಮರೆಯಾಗದಿರಲಿ

racism
Published on

ಎಚ್-1 ಬಿ ವೀಸಾಕ್ಕೆ ಸಂಬಂಧಿಸಿ ಅಮೆರಿಕದ ಬೈಡೆನ್ ಆಡಳಿತ ಮಹತ್ವದ ನಿರ್ಣಯ ತೆಗೆದುಕೊಂಡಿದ್ದು, ಇದರಿಂದ ಭಾರತವೂ ಸೇರಿದಂತೆ ವಿವಿಧ ದೇಶಗಳ ನೌಕರರಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಇದೇ ಸಂದರ್ಭದಲ್ಲಿ, ಅಮೆರಿಕದಲ್ಲಿ ಜನಾಂಗೀಯ ಹಲ್ಲೆಯ ಮತ್ತೊಂದು ಪ್ರಕರಣ ವರದಿಯಾಗಿದ್ದು, ಕಳವಳ ಮೂಡಿಸುವಂತಿದೆ.

ವೀಸಾ ವಿಷಯ ನೋಡುವುದಾದರೆ, ಕರೊನಾ ಸಾಂಕ್ರಾಮಿಕತೆ ಹಿನ್ನೆಲೆಯಲ್ಲಿ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಐಟಿ ಕಂಪನಿಗಳ ತಾತ್ಕಾಲಿಕ ನೌಕರರ ಎಚ್-1ಬಿ ವೀಸಾ ಮೇಲೆ ನಿರ್ಬಂಧ ವಿಧಿಸಿದ್ದರು. ಆಗಿನ ಸನ್ನಿವೇಶದಲ್ಲಿ ಅವರಿಗೆ ಈ ಕ್ರಮ ಅಗತ್ಯವೆನಿಸಿರಬಹುದು. ಇದೀಗ ಆ ನಿರ್ಬಂಧವನ್ನು ಮುಂದುವರಿಸದಿರಲು ಅಧ್ಯಕ್ಷ ಜೋ ಬೈಡೆನ್ ನಿರ್ಧರಿಸಿದ್ದಾರೆ. ಇದರಿಂದ ವಿದೇಶಗಳ ಕೌಶಲಯುತ ನೌಕರರನ್ನು ನೇಮಿಸಿಕೊಂಡಿದ್ದ ಐಟಿ ಕಂಪನಿಗಳಿಗೆ ಸ್ವಲ್ಪ ನಿರಾಳತೆ ಸಿಕ್ಕಿದೆ.

ಈ ನಿರ್ಬಂಧ ವಿಸ್ತರಿಸಿದರೆ ಅಮೆರಿಕದ ಕಂಪನಿಗಳಿಗೆ ಭಾರಿ ಹಾನಿಯಾಗುತ್ತದೆ; ಹೀಗಾಗಿ ನಿರ್ಬಂಧವನ್ನು ಮುಂದುವರಿಸಬಾರದು ಎಂದು ಬೃಹತ್ ಉದ್ಯಮಗಳು ಸರ್ಕಾರದ ಮೇಲೆ ಒತ್ತಡ ತರುತ್ತಲೇ ಇದ್ದವು. ಐಟಿ ಕಂಪನಿಗಳಲ್ಲಿ ಭಾರತದವರು ಸಹ ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ಸಹಜವಾಗಿಯೇ ನಮ್ಮವರಿಗೂ ಅನುಕೂಲವಾಗುತ್ತದೆ. ಅಮೆರಿಕದ ಪೌರತ್ವ ಪಡೆಯಲು ಅಗತ್ಯವಾದ ಗ್ರೀನ್ ಕಾರ್ಡ್ ವಿತರಣೆಗೆ ಸಹ ಕರೊನಾ ಕಾರಣದಿಂದಾಗಿ ಟ್ರಂಪ್ ತಡೆ ನೀಡಿದ್ದರು. ಆ ನಿರ್ಬಂಧವನ್ನು ಸಹ ಬೈಡೆನ್ ಕಳೆದ ತಿಂಗಳು ತೆರವು ಮಾಡಿದ್ದರು.

ಇದೇ ಸಂದರ್ಭದಲ್ಲಿ, ಕಳವಳಕಾರಿ ವರದಿಗಳು ಸಹ ಅಮೆರಿಕದಿಂದ ವರದಿಯಾಗುತ್ತಿವೆ. ರಾಬರ್ಟ್ ಲಾಂಗ್ ಎಂಬ ಶ್ವೇತವರ್ಣೀಯ ವ್ಯಕ್ತಿಯು ಜಾರ್ಜಿಯಾ ರಾಜ್ಯದ ಅಟ್ಲಾಂಟಾ ನಗರದ ಮಸಾಜ್ ಪಾರ್ಲರ್​ಗಳಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಏಷ್ಯಾ ಮೂಲದ ಮಹಿಳೆಯರನ್ನು ಮಾ.16ರಂದು ಗುಂಡಿಕ್ಕಿ ಸಾಯಿಸಿದ್ದ. ಅಧ್ಯಕ್ಷ ಬೈಡೆನ್ ಹಾಗೂ ಇತರ ನಾಯಕರು ಈ ಘಟನೆಯನ್ನು ಖಂಡಿಸಿದ್ದಾರೆ.

ಆದರೆ ಆತನ ಮೇಲೆ ಜನಾಂಗೀಯ ನಿಂದನೆ ಅಪರಾಧದಡಿ ಪ್ರಕರಣ ಹೂಡುವ ಬದಲು ಪೊಲೀಸರು ಕೇವಲ ಸೆಕ್ಸ್ ಅಡಿಕ್ಷನ್ ಪ್ರಕರಣ ದಾಖಲಿಸಿರುವುದು ಜನರನ್ನು ಕೆರಳಿಸಿದ್ದು, ಅಮೆರಿಕದ ವಿವಿಧ ನಗರಗಳಲ್ಲಿ ಪ್ರತಿಭಟನೆಗಳು ಕೂಡ ನಡೆದಿವೆ. ಏಷ್ಯಾ ಮೂಲದ ವ್ಯಕ್ತಿ ಮೇಲೆ ಜನಾಂಗೀಯ ನಿಂದನೆ ನಡೆದ ಮತ್ತೊಂದು ಘಟನೆ ಬುಧವಾರ ವರದಿಯಾಗಿದೆ.

ಮಾದಕವಸ್ತು ಪ್ರಕರಣದಲ್ಲಿ ಪೊಲೀಸರು ಕಳೆದ ವರ್ಷ ಜಾರ್ಜ್ ಫ್ಲಾಯ್್ಡ ಎಂಬ ಕಪು್ಪವರ್ಣೀಯನನ್ನು ಅಮಾನುಷವಾಗಿ ಸಾಯಿಸಿದ್ದರು. ಆ ಘಟನೆಗೂ ವ್ಯಾಪಕ ಆಕ್ರೋಶ ವ್ಯಕ್ತವಾಗಿ, ‘ಚ್ಝಿಚ್ಚk ್ಝಡಛಿಠ ಞಚಠಿಠಿಛ್ಟಿಠ’ ಎಂಬ ಅಭಿಯಾನವೇ ನಡೆದಿತ್ತು. ಹೇಳಿಕೇಳಿ ಅಮೆರಿಕ ವಲಸಿಗರ ದೇಶ. ಜಗತ್ತಿನ ನಾನಾ ದೇಶಗಳ ಜನರು ಅಲ್ಲಿ ಉದ್ಯೋಗಕ್ಕಾಗಿ ಬಂದು ನೆಲೆಸಿದ್ದಾರೆ.

ಆ ದೇಶದ ನಿರ್ವಣದಲ್ಲಿ ಈ ವಲಸಿಗರ ಕೊಡುಗೆ ದೊಡ್ಡದಾಗಿಯೇ ಇದೆ. ಹೀಗಿರುವಾಗ ಅವರನ್ನು ಗೌರವದಿಂದ ಕಾಣುವುದು ಅಪೇಕ್ಷಣೀಯ. ವಸಾಹತುಶಾಹಿ ಕಾಲದಿಂದಲೂ ಅಮೆರಿಕದಲ್ಲಿ ಜನಾಂಗೀಯ ತಾರತಮ್ಯ ಇದೆಯಾದರೂ, ಈಗ ಕಾಲ ಬದಲಾಗಿದೆ. ಜಾಗತೀಕರಣದಿಂದಾಗಿ ಸಾಮಾಜಿಕ, ಆರ್ಥಿಕ ವ್ಯಾಖ್ಯಾನಗಳು ಸಹ ಬದಲಾಗಿವೆ. ಹೀಗಾಗಿ ಜನರು ಮತ್ತು ಸರ್ಕಾರಗಳು ಈ ವಾಸ್ತವಕ್ಕೆ ಹೊಂದಿಕೊಂಡು ಸಾಗಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net