

ತಂತ್ರಜ್ಞಾನ ಲಭ್ಯತೆಯ ವ್ಯಾಪಿ ವಿಸ್ತರಿಸಿದಂತೆಲ್ಲ ಸಾರಿಗೆ/ಸಂಚಾರ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆಗಳಾಗಿವೆ. ಈ ಪೈಕಿ ಪ್ರಮುಖವಾದುದು ಆ್ಯಪ್ ಆಧಾರಿತ ಸೇವೆ ಒದಗಿಸುವ ಟ್ಯಾಕ್ಸಿ ಕಂಪನಿಗಳು. ಬೆಂಗಳೂರಿನಂಥ ಮಹಾನಗರಗಳಲ್ಲಿ ಸಮೂಹಸಾರಿಗೆಯ ನಂತರ ಹೆಚ್ಚು ಬಳಕೆಯಾಗುತ್ತಿರುವುದು ಈ ಬಗೆಯ ಸೇವೆಗಳು. ಯಾವುದೇ ವ್ಯಾಪಾರ-ವ್ಯವಹಾರವನ್ನು ಲಾಭಾಂಶವನ್ನು ಗಮನದಲ್ಲಿ ಇರಿಸಿಕೊಂಡು ಆರಂಭಿಸಲಾಗಿರುತ್ತದೆ ಎಂಬುದು ಸರಿಯೇ. ಆದರೆ, ಆ ಲಾಭಗಳಿಕೆಗಾಗಿ ಗುಣಮಟ್ಟದ ಸೇವೆ ನೀಡಬೇಕೆ ಹೊರತು ವಾಮಮಾರ್ಗಗಳನ್ನು ಅವಲಂಬಿಸಿ, ಪ್ರಯಾಣಿಕರನ್ನು ವಂಚಿಸಬಾರದು.
ಆ್ಯಪ್ ಆಧಾರಿತ ಸಾರಿಗೆ ಸೇವೆ ಒದಗಿಸುವ ಅಗ್ರಿಗೇಟರ್ ಕಂಪನಿಗಳು ಸರ್ಕಾರ ನಿಗದಿಪಡಿಸಿರುವ ಟ್ಯಾಕ್ಸಿ ಮೀಟರ್ ದರಕ್ಕಿಂತ ಮೂರು, ನಾಲ್ಕು ಪಟ್ಟು ಹೆಚ್ಚು ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿದ್ದು, ವಾಷಿರ್ಕ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರಿಗಿಂತ ಅಗ್ರಿಗೇಟರ್ ಕಂಪನಿಗಳೇ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿವೆ. ಬರೀ ಬುಕ್ಕಿಂಗ್ ಸೇವೆ ಒದಗಿಸುವ ಕಂಪನಿಗಳಿಗೆ ಶೇಕಡ 30 ಮತ್ತು ಟ್ಯಾಕ್ಸಿ ಮಾಲೀಕರಿಗೆ ಶೇ.70 ಭಾಗ ಹೋಗುತ್ತಿದೆ. ಈ ಎಲ್ಲ ಅಪಸವ್ಯಗಳ ಕುರಿತಂತೆ ಸಾರಿಗೆ ಅಧಿಕಾರಿಗಳು ತಡವಾಗಿ ಎಚ್ಚೆತ್ತುಕೊಂಡಿದ್ದು, ಬುಧವಾರದಿಂದಲೇ ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಅಗ್ರಿಗೇಟರ್ ಕಂಪನಿಗಳು ಮಾಡುವ ತಪ್ಪಿಗೆ ಟ್ಯಾಕ್ಸಿ ಮಾಲೀಕರ ಮೇಲೆ ಈಗ ಪ್ರಕರಣ ದಾಖಲಿಸಲಾಗುತ್ತಿದ್ದು, ಹೊಸ ಸಮಸ್ಯೆ ಸೃಷ್ಟಿಯಾಗಿದೆ.
ಬುಕಿಂಗ್ಗೆ ವಿಪರೀತ ಬೇಡಿಕೆ ಸಂದರ್ಭದಲ್ಲಿ ಹೆಚ್ಚಿನ ದರ ವಿಧಿಸಿ ಸುಲಿಗೆ, ಒಂದೇ ಸ್ಥಳಗಳಿಗೆ ಬೇರೆಬೇರೆ ಪ್ರಯಾಣಿಕರಿಗೆ ಬೇರೆಬೇರೆ ದರ ವಿಧಿಸುವುದು, ಒಟಿಪಿ ವ್ಯವಸ್ಥೆ ಇಲ್ಲದ ಆ್ಯಪ್ ಬಳಸಿ ಚಾಲಕರೇ ಗ್ರಾಹಕರ ಸುಲಿಗೆ ಮಾಡುವುದು ಹೀಗೆ ಹಲವು ಗಂಭೀರ ಆರೋಪಗಳು ಪ್ರಯಾಣಿಕರಿಂದ ಕೇಳಿಬಂದಿವೆ. ಅಗ್ರಿಗೇಟರ್ ಕಂಪನಿಗಳು ಹಾಗೂ ಟ್ಯಾಕ್ಸಿ ಚಾಲಕರ ವಂಚನೆ ಬಗ್ಗೆ ಹೈಕೋರ್ಟ್ಗೂ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಯುತ್ತಿದೆ. ಪ್ರಕರಣ ಹೈಕೋರ್ಟ್ ಮೆಟ್ಟಿಲು ಏರಿದ ಬಳಿಕವಷ್ಟೇ, ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಿಯಮ ಉಲ್ಲಂಘಿಸುವ, ಪ್ರಯಾಣಿಕರ ಹಿತವನ್ನು ಮರೆತು ವಂಚಿಸುವ ಕಂಪನಿಗಳ ಬಗ್ಗೆ ಆಗಾಗ ಪರಿಶೀಲನೆ ನಡೆಸಿದ್ದರೆ ಹಲವು ವರ್ಷಗಳಿಂದ ನಡೆಯುತ್ತಿರುವ ಈ ಮೋಸದಾಟ ತಡೆಯಬಹುದಿತ್ತು. ಇನ್ನಾದರೂ, ಈ ಪ್ರಕರಣಕ್ಕೆ ತಾಕಿರ್ಕ ಅಂತ್ಯ ದೊರೆತು, ಗ್ರಾಹಕರಿಗೆ ನ್ಯಾಯ ಸಿಗುವಂತಾಗಲಿ.