

ಈ ವರ್ಷಾಂತ್ಯಕ್ಕೆ ಅವಧಿ ಪೂರ್ಣಗೊಳಿಸಲಿರುವ, ಎರಡನೇ ಅವಧಿಗೆ ಸ್ಪರ್ಧಿಸಿ ಕುತೂಹಲ ಸೃಷ್ಟಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಎರಡು ದಿನಗಳ ಕಾಲ ಕೈಗೊಳ್ಳಲಿರುವ ಭಾರತ ಭೇಟಿ ಹಲವು ನಿರೀಕ್ಷೆಗಳನ್ನು ಮೂಡಿಸಿದೆ. ಈ ಪ್ರವಾಸದ ಬಗ್ಗೆ ಅಮೆರಿಕ ಕೂಡ ಉತ್ಸುಕವಾಗಿದ್ದು, ಎರಡು ಮಹಾಶಕ್ತಿ ರಾಷ್ಟ್ರಗಳ ಮುಂದಿನ ಹಾದಿಯತ್ತ ಎಲ್ಲರ ಗಮನ ನೆಟ್ಟಿದೆ. ಭಾನುವಾರ ಟ್ರಂಪ್ ಕೂಡ ಟ್ವೀಟ್ ಮಾಡಿ ‘ಭಾರತ ಭೇಟಿಯನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ. ‘ಭಾರತ ನಮ್ಮ ಆಪ್ತಮಿತ್ರ’ ಎಂದು ಟ್ರಂಪ್ ಹಿಂದೆಯೇ ಸ್ಪಷ್ಟಪಡಿಸಿದ್ದು, ಅದರಂತೆ ಭಾರತದ ದನಿಗೆ ಮನ್ನಣೆ ನೀಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಎರಡೂ ದೇಶಗಳ ನಡುವಿನ ಬಾಂಧವ್ಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಪ್ರಸಕ್ತ ಭೇಟಿಯಿಂದ ಈ ಹಾದಿ ಮತ್ತಷ್ಟು ವಿಸ್ತಾರವಾಗಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಇದಕ್ಕೂ ಮುನ್ನ, ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ 2010 ಮತ್ತು 2015ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.
ಟ್ರಂಪ್ ಭೇಟಿಯಿಂದ ಏನೆಲ್ಲ ಆಗಬಹುದು, ಅಂತಾರಾಷ್ಟ್ರೀಯ ವಲಯದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಬಗ್ಗೆ ಈಗಾಗಲೇ ಹಲವು ಆಯಾಮಗಳಲ್ಲಿ ಚರ್ಚೆ ನಡೆದಿದೆ. ಮುಖ್ಯವಾಗಿ, ಭಯೋತ್ಪಾದನೆ ವಿರುದ್ಧ ಹೋರಾಟ ತೀವ್ರಗೊಳಿಸುವಿಕೆ, ಈ ಸಂಬಂಧ ಪಾಕಿಸ್ತಾನದ ಮೇಲೆ ಒತ್ತಡ, ಭಾರತದಲ್ಲಿ ಅಮೆರಿಕದಿಂದ ಹೂಡಿಕೆ ಹೆಚ್ಚಳ, ವ್ಯಾಪಾರನೀತಿ ಸರಳ, ದ್ವಿಪಕ್ಷೀಯ ಒಪ್ಪಂದಗಳಿಗೆ ಒತ್ತು ಸೇರಿ ಹಲವು ವಿಷಯಗಳು ಮುನ್ನೆಲೆಗೆ ಬಂದು ಮಹತ್ವದ ತೀರ್ಮಾನ ಆಗುವ ನಿರೀಕ್ಷೆ ಇದೆ. ವಾಣಿಜ್ಯ ರಂಗಕ್ಕೆ ಸಂಬಂಧಿಸಿ ದೊಡ್ಡ ಒಡಂಬಡಿಕೆ ಏರ್ಪಡುವ ಸಾಧ್ಯತೆ ಸದ್ಯಕ್ಕಿಲ್ಲವಾದರೂ, ಆ ನಿಟ್ಟಿನಲ್ಲಿ ಭೂಮಿಕೆ ಸಿದ್ಧವಾಗಲಿದೆ ಎಂಬುದು ತಜ್ಞರ ಅಭಿಪ್ರಾಯ. ಟ್ರಂಪ್ ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಏರಿದರೆ, ಆ ಅವಧಿಯಲ್ಲಿ ಉಭಯ ರಾಷ್ಟ್ರಗಳ ಸಂಬಂಧ ಹೇಗಿರಲಿದೆ ಎಂಬುದಕ್ಕೆ ಈ ಭೇಟಿ ದಿಕ್ಸೂಚಿಯಾಗಲಿದೆ.
ಟ್ರಂಪ್ ಮತ್ತು ಮೋದಿ ಜಾಗತಿಕ ನಾಯಕರಷ್ಟೇ ಅಲ್ಲ; ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದಾರೆ. ಹಲವು ಜಾಗತಿಕ ಶೃಂಗಗಳಲ್ಲಿ ಒಟ್ಟಾಗಿ ಪಾಲ್ಗೊಂಡಿರುವುದು, ಮಾತುಕತೆ ನಡೆಸಿರುವುದು ಹೀಗೆ ಹಲವು ವಿದ್ಯಮಾನಗಳ ಮೂಲಕ ಈ ನಾಯಕರು ಸುದ್ದಿಯಲ್ಲಿದ್ದಾರೆ. ಅಷ್ಟೇ ಅಲ್ಲ, ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮೋದಿ ಜತೆಗೆ ಟ್ರಂಪ್ ವೇದಿಕೆ ಹಂಚಿಕೊಂಡು ಮಾತನಾಡಿದ್ದು, ಅಮೆರಿಕನ್ ಮಾಧ್ಯಮಗಳಲ್ಲಿ ಇದು ಸಂಚಲನ ಸೃಷ್ಟಿಸಿದ್ದು ಗೊತ್ತೇ ಇದೆ. ಅದೇ ಬಗೆಯ ಭವ್ಯ ಸ್ವಾಗತವನ್ನು
ಟ್ರಂಪ್ಗೆ ನೀಡಲು ಕೇಂದ್ರ ಸರ್ಕಾರ ತಯಾರಿ ಮಾಡಿಕೊಂಡಿದೆ. ಮತ್ತು ಈ ಭೇಟಿಯನ್ನು ಅವಿಸ್ಮರಣೀಯವಾಗಿಸುವ ಚಿಂತನೆ ಹೊಂದಿದೆ. ಟ್ರಂಪ್ ಮೋದಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರೆ, ಮೋದಿ ಕೂಡ ಟ್ರಂಪ್ ಕಾರ್ಯವೈಖರಿಯನ್ನು ಹೊಗಳಿದ್ದಾರೆ. ಹಾಗಾಗಿ, ಈ ಜೋಡಿ ಭಾರತದಲ್ಲಿ ಯಾವ ಬಗೆಯ ಮೋಡಿ ಮಾಡಲಿದೆ? ಉಭಯ ರಾಷ್ಟ್ರಗಳ ಸಂಬಂಧ ಯಾವ ಹೊಸ ಸ್ವರೂಪವನ್ನು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕು.