

ರೈತರ ಹೋರಾಟವನ್ನು ಮುಂದಿರಿಸಿಕೊಂಡು ಕೆಲ ಶಕ್ತಿಗಳು ಭಾರತವಿರೋಧಿ ಅಭಿಯಾನಕ್ಕೆ ಮುಂದಾಗಿರುವ ಅಂತಾರಾಷ್ಟ್ರೀಯ ಸಂಚು ಈಗ ಬಯಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವುದು ಹಲವು ರಾಷ್ಟ್ರಗಳಿಗೆ, ಸಂಘಟನೆಗಳಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ, ಇಲ್ಲಿನ ಸಮಸ್ಯೆಗಳನ್ನು ಅರ್ಥೈಸಿಕೊಳ್ಳದೆ ಸುಖಾಸುಮ್ಮನೆ ದೊಡ್ಡದನಿಯಲ್ಲಿ ಅಪಪ್ರಚಾರ ಮಾಡಿ, ಸತ್ಯವನ್ನು ಅದುಮುವ ಪ್ರಯತ್ನಗಳು ನಡೆಯುತ್ತಿವೆ. ಕೃಷಿ ಕಾನೂನು ವಿರೋಧಿ ಆಂದೋಲನದ ಹೊತ್ತಲ್ಲೂ ಇದು ಮತ್ತೊಮ್ಮೆ ಸ್ಪಷ್ಟಗೊಂಡಿದ್ದು, ಅಂತಾರಾಷ್ಟ್ರೀಯ ಶಕ್ತಿಗಳ ಕುಮ್ಮಕ್ಕು, ಕೈವಾಡ ಬೆಳಕಿಗೆ ಬಂದಿದೆ. ಟೂಲ್ ಕಿಟ್ ಮೂಲಕ ಭಾರತ ವಿರೋಧಿ ಅಭಿಯಾನ ನಡೆಸಲಾಗುತ್ತಿದ್ದು, ಸ್ವೀಡಿಷ್ ಮೂಲದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ವೆಬ್ಸೈಟ್ವೊಂದು ಸಿದ್ಧಪಡಿಸಿದ ದಾಖಲೆಗನ್ನೂ ಟ್ವೀಟ್ ಮಾಡಿ, ಪೇಚಿಗೆ ಸಿಲುಕಿದ್ದಾರೆ. ಭಾರತ ವಿರೋಧಿ ಅಭಿಯಾನದಲ್ಲಿ ಗ್ರೇಟಾ ಜತೆಗೆ ಅಮೆರಿಕದ ಪಾಪ್ ಗಾಯಕಿ ರಿಹಾನ್ನಾ ಕೂಡ ಶಾಮೀಲಾಗಿರುವುದು ಸ್ಪಷ್ಟವಾಗಿದೆ. ರಿಹಾನ್ನಾ ಟ್ವೀಟ್ ಕೆನಡಾದ ಸಂಸದ ಜಗ್ವಿುೕತ್ ಸಿಂಗ್ ರೀಟ್ವೀಟ್ ಮಾಡಿದ್ದು, ಅವರ ನಂಟನ್ನು ಟ್ವೀಟ್ ಬಹಿರಂಗಗೊಳಿಸಿದೆ. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಪ್ಪುಮಾಹಿತಿ, ಅಪಪ್ರಚಾರ ಹರಡುವ ಕೆಲಸ ನಡೆಯುತ್ತಿದ್ದು, ಭಾರತ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಭಾರತ ಈ ಹಿಂದೆ ಕೂಡ ಇಂಥ ಸವಾಲುಗಳನ್ನು ಯಶಸ್ವಿಯಾಗಿ ಹಿಮ್ಮೆಟಿಸಿದೆ. ಅಷ್ಟಕ್ಕೂ. ಇಂಥ ಅಪಪ್ರಚಾರದಿಂದ, ಸುಳ್ಳು ಮಾಹಿತಿಗಳಿಂದ ಭಾರತದ ಅಖಂಡತೆಗೆ ಧಕ್ಕೆ ತರಲು ಸಾಧ್ಯವಿಲ್ಲ. ಆದರೆ, ರಾಷ್ಟ್ರಘಾತಕ ಶಕ್ತಿಗಳ ಷಡ್ಯಂತ್ರವನ್ನು ಅರ್ಥ ಮಾಡಿಕೊಂಡು, ದೇಶದ ಐಕ್ಯತೆ ಇನ್ನಷ್ಟು ಬಲಗೊಳ್ಳಬೇಕಿದೆ. ಭಾರತವಿರೋಧಿ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಪ್ರತಿಪಕ್ಷಗಳು ಎಲ್ಲವನ್ನೂ ರಾಜಕೀಯ ಲಾಭದಿಂದ ನೋಡದೆ ಭಾರತದ ದನಿಯನ್ನು ಗಟ್ಟಿಗೊಳಿಸಬೇಕಿದೆ.