ಸಂಪಾದಕೀಯ| ಮಕ್ಕಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಸಲ್ಲ, ಕಾಳಜಿ ಇರಲಿ

bisiyuta
Published on
ಕರೊನಾ ಸಂಕಷ್ಟ ತಂದಿಟ್ಟ ಸಮಸ್ಯೆಗಳು ಅಷ್ಟಿಷ್ಟಲ್ಲ. ಶೈಕ್ಷಣಿಕ ವರ್ಷವೇ ಅಸ್ತವ್ಯಸ್ತವಾಯಿತು. ಒಂಬತ್ತು-ಹತ್ತು ತಿಂಗಳ ಕಾಲ ಶಾಲೆಗಳು ತೆರೆಯಲಿಲ್ಲ. ಈ ಅವಧಿಯಲ್ಲಿ ಚಿಕ್ಕಮಕ್ಕಳು ದುಡಿಯಲು ಹೋದ, ಬಡ ಮತ್ತು ಗ್ರಾಮೀಣ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ನಲುಗಿದ ನಿದರ್ಶನಗಳು ಮನ ಕಲುಕಿದವು. ಕರೊನಾ ಸೋಂಕಿನ ಅಬ್ಬರ ಸ್ವಲ್ಪ ತಗ್ಗಿರುವ ಪರಿಣಾಮ ಶಾಲೆಗಳು ಪುನರಾರಂಭಗೊಂಡಿವೆ. ಮಕ್ಕಳ ಹಾಜರಾತಿಯೂ ಕ್ರಮೇಣ ಹೆಚ್ಚುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಿಸಿಯೂಟ ಯೋಜನೆಗೆ ಗ್ರಹಣ ಕವಿದಿದೆ. 2020 ನವೆಂಬರ್​ನಿಂದ 2021ರ ಮಾರ್ಚ್​ವರೆಗೆ ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲಿಗೆ ಆಹಾರ ಧಾನ್ಯ ವಿತರಿಸಲು ಆದೇಶಿಸಲಾಗಿದ್ದರೂ, ಕಾರ್ಯರೂಪಕ್ಕೆ ಬಂದಿಲ್ಲ. ಸರ್ಕಾರ ಧಾನ್ಯ ಪೂರೈಕೆಗೆ -ಠಿ; 515 ಕೋಟಿ ಅನುದಾನ ಕಲ್ಪಿಸಿದರೂ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ(ಕೆಎಫ್​ಸಿಎಸ್​ಸಿ) ಅಧಿಕಾರಿಗಳ ನಿಷ್ಕಾಳಜಿಯಿಂದ ಟೆಂಡರ್ ಪ್ರಕ್ರಿಯೆ ಆರಂಭವಾಗಿಲ್ಲ. ಈ ಸಮಸ್ಯೆ ಕುರಿತಂತೆ ‘ವಿಜಯವಾಣಿ’ ಸೋಮವಾರ ವಿಶೇಷ ವರದಿ ಪ್ರಕಟಿಸಿದ ಬಳಿಕ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ಧಾನ್ಯ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ಇಲಾಖೆ, ಈ ಸಂಬಂಧ ಟೆಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುವಂತೆ ಕೆಎಫ್​ಸಿಎಸ್​ಸಿಗೆ ಸೂಚಿಸಿದೆ. 132 ದಿನಕ್ಕೆ ವಿತರಿಸಲು ಅಗತ್ಯವಿರುವಷ್ಟು ಆಹಾರ ಧಾನ್ಯ ಖರೀದಿಸಿ, ಸರಬರಾಜು ಮಾಡಲು ಅಧಿಕಾರಿಗಳು ಮುಂದಾಗಿರುವುದು ಸಮಾಧಾನಕರ ಸಂಗತಿ. ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಉದ್ದೇಶದಿಂದಲೇ ಅಕ್ಷರ ದಾಸೋಹ ಯೋಜನೆ ಜಾರಿಗೆ ತರಲಾಗಿದೆ. ಇಂಥ ಮಹತ್ವದ ಯೋಜನೆ ಕೆಲವರ ನಿರ್ಲಕ್ಷ್ಯದ ಪರಿಣಾಮ ವಿಫಲವಾಗಬಾರದು. ಮಕ್ಕಳ ಬಗೆಗಿನ ಕಾಳಜಿಗೆ ಧಕ್ಕೆ ಒದಗಬಾರದು. ಇನ್ನಾದರೂ ಅಧಿಕಾರಿಗಳು ಧಾನ್ಯ ವಿತರಣೆಯನ್ನು ಸಮರ್ಪಕವಾಗಿ ನಡೆಸಿ, ಮಕ್ಕಳ ಚಿಂತೆಯನ್ನು ನಿವಾರಿಸಲಿ. ರಾಜ್ಯದಲ್ಲಿ 54 ಲಕ್ಷ ವಿದ್ಯಾರ್ಥಿಗಳು ಅಕ್ಷರ ದಾಸೋಹ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಮತ್ತೊಂದೆಡೆ, ಬಿಪಿಎಲ್ ಕಾರ್ಡ್ ಮಾನದಂಡಗಳಲ್ಲಿ ಬದಲಾವಣೆ ಮಾಡಲಾಗುವುದು ಎಂಬ ಗೊಂದಲಕಾರಿ ಹೇಳಿಕೆ ನೀಡಿ ಭಾರಿ ವಿರೋಧಕ್ಕೆ ಗುರಿಯಾದ ಆಹಾರ ಸಚಿವರು ‘ಬಿಪಿಎಲ್ ಕಾರ್ಡ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ’ ಎಂಬ ಸ್ಪಷ್ಟನೆ ನೀಡಿದ್ದಾರೆ. ‘ಟಿವಿ, ಫ್ರಿಡ್ಜ್, ಬೈಕ್ ಇರುವವರು ಬಿಪಿಎಲ್ ಕಾರ್ಡ್ ಹಿಂದಿರುಗಿಸಬೇಕು’ ಎಂಬ ಸಚಿವರ ಹೇಳಿಕೆ ವಿವಾದವನ್ನು ಸೃಷ್ಟಿಸಿತ್ತು. ಪ್ರತಿಪಕ್ಷಗಳು ಕೂಡ ಈ ಹೇಳಿಕೆಯನ್ನು ವಿರೋಧಿಸಿದವು. ಸರ್ಕಾರದ ಮಟ್ಟದಲ್ಲಿ ಇಂಥದ್ದೊಂದು ನಿರ್ಧಾರವಾಗಿಲ್ಲ ಎಂಬುದಾದರೆ ಆತುರಾತುರದಲ್ಲಿ ಇಂಥ ಹೇಳಿಕೆಗಳನ್ನು ನೀಡುವುದಾದರೂ ಏಕೆ? ಈ ಬಗೆಯ ಘಟನೆಗಳಿಂದ ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿ ಆಗುವುದಲ್ಲದೆ, ಸರ್ಕಾರ ಕೂಡ ಮುಜುಗರ ಅನುಭವಿಸಬೇಕಾಗುತ್ತದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ವಿವೇಚನೆಯಿಂದ ವರ್ತಿಸಬೇಕು ಮತ್ತು ತಾವು ಹೇಳುತ್ತಿರುವುದು ಸೂಕ್ತವೇ ಎಂದು ಹತ್ತು ಬಾರಿ ಪರಾಮಶಿಸಿಯೇ ಹೇಳಿಕೆ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net