

ಏಪ್ರಿಲ್ 27ರಿಂದಲೇ ಕರ್ನಾಟಕದಲ್ಲಿ ಜನತಾ ಕರ್ಫ್ಯೂ ಹೇರಲಾಗಿದ್ದರೂ, ಅಂಥ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ಕರೊನಾ ಸೋಂಕಿತರು ಹಾಗೂ ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ. ಪರಿಣಾಮ ಸಕ್ರಿಯ ಪ್ರಕರಣಗಳ ಸಂಖ್ಯೆ 5 ಲಕ್ಷ ದಾಟಿದ್ದರೆ, ಬೆಂಗಳೂರೊಂದರಲ್ಲೇ ಈ ಸಂಖ್ಯೆ 3.30 ಲಕ್ಷಕ್ಕೂ ಅಧಿಕ.
ಕೆಲವು ದಿನಗಳಿಂದ ಜಿಲ್ಲೆಗಳಲ್ಲೂ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು, ಹಳ್ಳಿಗಳಿಗೆ ಕೋವಿಡ್ ಪ್ರವೇಶಿಸಿರುವುದು ಕಳವಳಕ್ಕೆ ಕಾರಣವಾಗಿದೆ. ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡ ರಾಜ್ಯ ಸರ್ಕಾರ ಅನಿವಾರ್ಯವಾಗಿ ಮೇ 10ರಿಂದ 14 ದಿನಗಳ ಸಂಪೂರ್ಣ ಲಾಕ್ಡೌನ್ ಘೋಷಿಸಿದೆ. ಈ ಅವಧಿಯಲ್ಲಿ ದಿನಸಿ, ತರಕಾರಿ, ಹಾಲಿನಂಥ ಅವಶ್ಯಕ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ ಸೋಂಕಿನ ಸರಪಳಿ ಮುರಿದು, ಚಿಕಿತ್ಸಾ ಸೌಲಭ್ಯಗಳ ಲಭ್ಯತೆ ಹೆಚ್ಚಿಸಲು ಸಂಪೂರ್ಣ ಲಾಕ್ಡೌನ್ ಅಗತ್ಯ ಎಂಬ ಅಭಿಪ್ರಾಯವನ್ನು ತಜ್ಞರು ನೀಡಿದ್ದರು. ಅಲ್ಲದೆ, ಕೇಂದ್ರ ಆರೋಗ್ಯ ಸಚಿವಾಲಯ ಸಹ ಕರ್ನಾಟಕದ ಪರಿಸ್ಥಿತಿಯ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ.
ಕರೊನಾ ವಿರುದ್ಧ ನಿರ್ಣಾಯಕವಾಗಿ ಹೋರಾಡಲು ಲಸಿಕೆ ಅಭಿಯಾನವನ್ನು ತೀವ್ರಗೊಳಿಸುವುದು ಮತ್ತು ಸಂಪೂರ್ಣ ಲಾಕ್ಡೌನ್ ವಿಧಿಸುವುದು-ಇವು ಪ್ರಬಲ ಅಸ್ತ್ರಗಳಾಗಿವೆ. ಎರಡನೇ ಅಲೆಯ ಪ್ರಬಲ ಹೊಡೆತಕ್ಕೆ ನಲುಗಿದ ಮಹಾರಾಷ್ಟ್ರದಲ್ಲಿ ಹಂತ-ಹಂತವಾಗಿ ಲಾಕ್ಡೌನ್ ಘೋಷಿಸಿದ್ದರಿಂದ, ಪರಿಸ್ಥಿತಿ ಸಾಕಷ್ಟು ಸುಧಾರಣೆಯಾಗಿದೆ. ಮುಂಬೈ, ಪುಣೆ ನಗರಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಚೇತರಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ.
ಪರಿಸ್ಥಿತಿಯನ್ನು ಅವಲೋಕಿಸಿ ಲಾಕ್ಡೌನ್ ಬಗೆಗಿನ ನಿರ್ಧಾರ ತಳೆಯುವ ವಿವೇಚನಾಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಿದೆ. ಆದರೆ, ‘ಲಾಕ್ಡೌನ್ ಎಂಬುದು ಅಂತಿಮ ಅಸ್ತ್ರ ಆಗಿರಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತನ್ನೂ ಹೇಳಿದ್ದರು. ಲಾಕ್ಡೌನ್ನಿಂದ ಅಪಾರ ಪ್ರಮಾಣದ ಆರ್ಥಿಕ ಹಾನಿಯಾಗುತ್ತದೆ, ಬಡವರು-ಮಧ್ಯಮ ವರ್ಗದವರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂಬುದು ಕಹಿವಾಸ್ತವವೇ. ಹಾಗಾಗಿಯೇ, ರಾಜ್ಯ ಸರ್ಕಾರ ಮೊದಲಿಗೆ ಕಠಿಣ ನಿಯಮಗಳ ‘ಜನತಾ ಕರ್ಫ್ಯೂ’ ಜಾರಿಗೊಳಿಸಿತ್ತು.
ಈಗಿನ ಸನ್ನಿವೇಶದಲ್ಲಿ ಜನರ ಜೀವ ಉಳಿಸುವುದು, ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯ ಆಗಿರುವುದರಿಂದ ಸರ್ಕಾರ ಲಾಕ್ಡೌನ್ ಎಂಬ ಅಂತಿಮ ಅಸ್ತ್ರವನ್ನು ಬಳಸಿದೆ. ಕರೊನಾ ಸಂಕಟವನ್ನು ಸಾಮೂಹಿಕ ಹೊಣೆಗಾರಿಕೆಯಿಂದ ಗೆಲ್ಲಬೇಕಿದೆ. ಹಾಗಾಗಿ, ಇದು ರಾಜಕೀಯ, ಪರಸ್ಪರ ಆರೋಪ-ಪ್ರತ್ಯಾರೋಪಗಳ ಸಮಯವಲ್ಲ. ಈ 14 ದಿನಗಳ ಲಾಕ್ಡೌನ್ ಅವಧಿಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದರೆ, ಅದೊಂದು ಸಮಾಧಾನಕರ ಬೆಳವಣಿಗೆ. ಆ ನಿಟ್ಟಿನಲ್ಲಿ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸುವಂತೆ ಜನರೂ ಸುರಕ್ಷಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಪಾಲಿಸಬೇಕು, ಅನಗತ್ಯ ಓಡಾಟವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಒಂದು ವೇಳೆ ಲಾಕ್ಡೌನ್ ಮತ್ತೆ ವಿಸ್ತರಣೆಯಾದರೆ ರಾಜ್ಯದ ಸ್ಥಿತಿ ಹದಗೆಡುತ್ತದೆ ಎಂಬ ಎಚ್ಚರಿಕೆ ಎಲ್ಲರಲ್ಲೂ ಅಗತ್ಯ. ಈ ನಡುವೆ ಕರೊನಾ ನಿರ್ವಹಣೆ ನಿಟ್ಟಿನಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿರುವ ಸರ್ಕಾರ ಸಿಟಿ ಸ್ಕಾ್ಯನ್ ಪರೀಕ್ಷೆಗೆ 1500 ರೂಪಾಯಿ ದರ ನಿಗದಿ ಮಾಡಿದ್ದು, ಇದಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ. ಒಟ್ಟಾರೆ, ಕರೊನಾ ವಿರುದ್ಧ ಸಮರ ತೀವ್ರಗೊಂಡಿರುವ ಕಾಲವಿದು.