ವಿಜಯವಾಣಿ ಸಂಪಾದಕೀಯ: ಆರ್ಥಿಕ ಚೇತರಿಕೆಗೆ ಆರ್​ಬಿಐನ ಪೂರಕ ಕ್ರಮಗಳು

RBI governor
Published on

ಕೋವಿಡ್ ಎರಡನೇ ಅಲೆಯ ವ್ಯಾಪಕ ಸಂಕಷ್ಟಕ್ಕೆ ಆರ್ಥಿಕ ವಲಯವೂ ತತ್ತರಿಸಿ ಹೋಗಿದೆ. ಕಳೆದ ವರ್ಷದ ಲಾಕ್​ಡೌನ್​ನಿಂದ ಉದ್ಯಮ ರಂಗ ಸೇರಿದಂತೆ ಬಹುತೇಕ ಕ್ಷೇತ್ರಗಳು ನೆಲಕಚ್ಚಿದ್ದವು. ಆದರೆ, ಮೊದಲ ಅಲೆಯ ತೀವ್ರತೆ ಕಡಿಮೆ ಆಗುತ್ತಿದ್ದಂತೆ ಆರ್ಥಿಕ ಚಟುವಟಿಕೆಗಳು ವೇಗ ಪಡೆದ ಪರಿಣಾಮ ಒಂದಿಷ್ಟು ಭರವಸೆ ಕಾಣಿಸಿಕೊಂಡಿತು. ಜಿಡಿಪಿಯೂ ಸುಧಾರಣೆ ಕಾಣಲಿದೆ ಎಂದು ವಿತ್ತೀಯ ಸಂಸ್ಥೆಗಳು ಹೇಳಿದ್ದವು. ಪರಿಸ್ಥಿತಿ ಹಳಿಗೆ ಬರುತ್ತಿದೆ ಎನ್ನುವಷ್ಟರಲ್ಲೇ ದೇಶದಲ್ಲಿ ಕರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಇದರಿಂದ ಮತ್ತೆ ಉದ್ಯಮಗಳು ಸಂಕಷ್ಟಕ್ಕೆ ಈಡಾಗಿವೆ. ಅದರಲ್ಲೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸ್ಥಿತಿ ಶೋಚನೀಯ. ಮತ್ತೊಂದೆಡೆ, ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರವನ್ನು, ಅದಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಅಲ್ಲದೆ, ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ದೇಶ ಸನ್ನದ್ಧವಾಗಬೇಕಿದೆ ಎಂದು ಬುಧವಾರವಷ್ಟೇ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಹೀಗಾಗಿ ಸವಾಲು ಹೆಚ್ಚಿದ್ದು, ದೃಢ ಹೆಜ್ಜೆಗಳನ್ನು ಇರಿಸಬೇಕಾದ ಅಗತ್ಯವಿದೆ.

ಇಎಂಐ ಮುಂದೂಡಿಕೆ, ಸಣ್ಣ, ಮಧ್ಯಮ ಪ್ರಮಾಣದ ಸಾಲಗಳ ಸುಲಭ ಲಭ್ಯತೆ ಸೇರಿದಂತೆ ಕೋವಿಡ್ ಆಘಾತದಿಂದ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಬಾರಿ ಕೂಡ ಹಲವು ಕ್ರಮಗಳನ್ನು ಕೈಗೊಂಡಿತ್ತು. ಈ ಬಾರಿಯ ಪರಿಸ್ಥಿತಿಯನ್ನು ಅವಲೋಕಿಸಿರುವ ಆರ್​ಬಿಐ ಹಲವು ಮಹತ್ವದ ಮತ್ತು ಸಕಾಲಿಕವಾದ ನಿರ್ಣಯಗಳನ್ನು ಕೈಗೊಂಡಿದೆ. ಇದರಿಂದ ಉತ್ಪಾದನಾ ವಲಯ ಅದರಲ್ಲೂ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ತಯಾರಿಕಾ ರಂಗಕ್ಕೆ ಸಾಕಷ್ಟು ಉತ್ತೇಜನ ದೊರೆಯುವುದರಲ್ಲಿ ಅನುಮಾನವಿಲ್ಲ. ಮತ್ತೊಂದು ಸುತ್ತಿನ ಸಾಲ ಕಂತು ಮರುಪಾವತಿ ಮುಂದೂಡಿಕೆ (ಮಾರಟೋರಿಯಂ) ಯೋಜನೆ ಪ್ರಕಟಿಸಿದೆ. ಲಾಕ್​ಡೌನ್​ನಿಂದ ಸಮಸ್ಯೆಗೆ ಒಳಗಾಗಿರುವ ವ್ಯಕ್ತಿಗತ ಸಾಲಗಾರರು ಮತ್ತು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್​ಎಂಇ) ಈ ಯೋಜನೆಯ ಲಾಭ ದಕ್ಕಲಿದೆ.

ವೈದ್ಯಕೀಯ ಕ್ಷೇತ್ರದ ಉತ್ಪಾದಕರಿಗೆ ನೆರವಾಗಲು 50 ಸಾವಿರ ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಣೆ ಆಗಲಿದೆ. ವ್ಯಾಕ್ಸಿನ್ ತಯಾರಕರು, ವೈದ್ಯಕೀಯ ಉಪಕರಣಗಳ ಸರಬರಾಜುದಾರರು, ಆಸ್ಪತ್ರೆಗಳು ಮತ್ತು ಹಣದ ಅಗತ್ಯವಿರುವ ಕೋವಿಡ್ ರೋಗಿಗಳು ಈ ಪ್ಯಾಕೇಜಿನ ಫಲಾನುಭವಿಗಳಾಗಲಿದ್ದಾರೆ. ಮುಖ್ಯವಾಗಿ, ಡಿಸೆಂಬರ್ ಕೊನೆಯ ತನಕ ಕೆವೈಸಿ ಸಂಬಂಧ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಗ್ರಾಹಕರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸಬಾರದು ಎಂದು ನಿರ್ದೇಶನ ನೀಡಿದೆ.

ಈ ಉತ್ತೇಜನಾ ಕ್ರಮಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬರಬೇಕು. ಅಲ್ಲದೆ, ಬ್ಯಾಂಕುಗಳು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು, ಗ್ರಾಹಕರಿಗೆ ಸರಿಯಾದ ಮಾಹಿತಯನ್ನು ನೀಡಬೇಕು. ಸಾಂವಿಧಾನಿಕ ಸಂಸ್ಥೆಗಳಿಗೆ ಅವುಗಳದ್ದೇ ಆದ ಮಹತ್ವದ ಜವಾಬ್ದಾರಿ ಇರುತ್ತದೆ. ಈ ನಿಟ್ಟಿನಲ್ಲಿ ಆರ್​ಬಿಐ ಪೂರಕ ಹೆಜ್ಜೆ ಇರಿಸಿದ್ದು, ಪ್ರಸಕ್ತ ಕ್ರಮಗಳು ಸಂಕಷ್ಟದ ಕಾಲದಲ್ಲಿ ಚೇತರಿಕೆಗೆ ಸಹಕಾರಿ ಆಗಲಿವೆ. ಜನಸಾಮಾನ್ಯರಿಗೆ, ಉದ್ಯಮ ರಂಗದ ಹಲವು ವಲಯಗಳಿಗೆ ಇಂಥ ನೆರವುಗಳು ಸದ್ಯದ ಪರಿಸ್ಥಿತಿಯನ್ನು ಎದುರಿಸಲು ಪೂರಕವಾಗುತ್ತವೆ ಮತ್ತು ವೈದ್ಯಕೀಯ ಉತ್ಪಾದನಾ ರಂಗಕ್ಕಂತೂ ಸವಾಲಿನ ನಡುವೆಯೂ ಅವಕಾಶಪ್ರಾಪ್ತಿಯ ಸಂದರ್ಭವೂ ಹೌದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net