ಅಪಾಯ ಆಹ್ವಾನಿಸಬೇಡಿ: ಸಮಾರಂಭಗಳ ಮೇಲೆ ನಿಯಂತ್ರಣವಿರಲಿ

IMG-20210524-WA0029
Published on

ರಾಜ್ಯದಲ್ಲಿ ಕರೊನಾ ಸೋಂಕಿನ ಎರಡನೇ ಅಲೆ ವ್ಯಾಪಕ ತೀವ್ರತೆ ಪಡೆದುಕೊಂಡಿದೆ. ಮೊದಲ ಅಲೆಯ ಹೊತ್ತಿನಲ್ಲಿ ನಗರಪ್ರದೇಶಗಳಿಗೆ ಸೀಮಿತವಾಗಿದ್ದ ಸೋಂಕಿನ ಉಪಟಳ ಈ ಬಾರಿ ಹಳ್ಳಿಗಳಿಗೂ ಪ್ರವೇಶಿಸಿದೆ.

ವೈದ್ಯಕೀಯ ವ್ಯವಸ್ಥೆಗಳನ್ನು ಮತ್ತಷ್ಟು ಸನ್ನದ್ಧಗೊಳಿಸಲು, ಕರೊನಾ ವೈರಸ್ ಸರಪಳಿಯನ್ನು ತುಂಡರಿಸಲು ಎರಡನೇ ಹಂತದ ಲಾಕ್​ಡೌನ್ ಆರಂಭವಾಗಿದ್ದು, ಜೂನ್ 7ರವರೆಗೆ ಮುಂದುವರಿಯಲಿದೆ. ಸದ್ಯಕ್ಕೆ ಪ್ರಕರಣಗಳ ಸಂಖ್ಯೆ ಕೊಂಚ ಇಳಿಯುತ್ತಿದ್ದರೂ, ಸಾವಿನ ಸಂಖ್ಯೆ ಏರುತ್ತಲೇ ಇದೆ. ಪ್ರತಿವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಸಾಮಾನ್ಯವಾಗಿ ಮದುವೆ ಸಮಾರಂಭಗಳ ಅಬ್ಬರ ಇದ್ದೇ ಇರುತ್ತದೆ.

ಅದರಂತೆ ಈ ವರ್ಷವೂ ಸಾವಿರಾರು ಮದುವೆಗಳು ಆಯೋಜನೆಯಾಗಿವೆ. ಕೆಲವು ಮುಂದೂಡಲ್ಪಟ್ಟಿವೆ. ಹಳ್ಳಿಗಳಲ್ಲಿ ಮದುವೆ ನಿಮಿತ್ತ ಹೆಚ್ಚು ಜನ ಸೇರುತ್ತಿರುವುದು ಸೋಂಕು ವ್ಯಾಪಕವಾಗಿ ಹರಡಲು ಒಂದು ಕಾರಣ. ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಲಾಕ್​ಡೌನ್ ಅವಧಿಯಲ್ಲೂ ನೂರಾರು ಮದುವೆಗಳು ನಡೆಯುತ್ತಿದ್ದು, ಕೆಲ ಪ್ರಕರಣಗಳಲ್ಲಿ ಮದುವೆಗೆ ಬಂದವರಿಗೆ ಸೋಂಕು ಕಾಣಿಸಿಕೊಂಡ ಘಟನೆಗಳು ನಡೆದಿವೆ.

ಇದು ಮಲೆನಾಡು ಭಾಗಕ್ಕೆ ಮಾತ್ರ ಸೀಮಿತವಲ್ಲ. ಉತ್ತರ ಕರ್ನಾಟಕದ ಹಳ್ಳಿಗಳಲ್ಲೂ ಇಂಥ ಪ್ರಕರಣಗಳು ಕಂಡುಬಂದಿವೆ. ‘ಲಾಕ್​ಡೌನ್ ಯಾವಾಗ ಮುಗಿಯುತ್ತದೆ ಎಂಬುದು ಹೇಳಲಾಗದು, ಲಾಕ್​ಡೌನ್ ಮುಗಿದರೂ ಕರೊನಾ ಹಾವಳಿ ಸದ್ಯಕ್ಕಂತೂ ತಗ್ಗದು; ಹಾಗಾಗಿ ಶುಭ ಸಮಾರಂಭ ಮುಂದೂಡುವುದು ಬೇಡ.

ಇರುವ ಪರಿಸ್ಥಿತಿಯಲ್ಲೇ ಮಾಡಿ ಮುಗಿಸೋಣ’ ಎಂಬ ಯೋಚನೆಯಲ್ಲಿ ಸಮಾರಂಭಗಳ ಆಯೋಜನೆಯಾಗುತ್ತಿದೆ. ಬಹುತೇಕ ಕಡೆ ಸುರಕ್ಷಾ ನಿಯಮಗಳು ಪಾಲನೆಯಾಗುತ್ತಿಲ್ಲ. ಅಕ್ಕಪಕ್ಕದ ಗ್ರಾಮಸ್ಥರೂ ಮದುವೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂಥ ಘಟನೆಗಳು ಸದ್ಯದ ಸ್ಥಿತಿಯಲ್ಲಿ ಕಳವಳ ಮೂಡಿಸಿರುವುದಂತೂ ಹೌದು.

ಮದುವೆ ಎಂಬುದು ಭಾವನಾತ್ಮಕ ಸಂಗತಿ. ಜೀವನದಲ್ಲಿ ಒಮ್ಮೆ ಮಾತ್ರ ಈ ಸಂತಸದ ಗಳಿಗೆ ಬರುವುದರಿಂದ ನೆಂಟರಿಷ್ಟರನ್ನು, ಆಪ್ತರನ್ನು ಕರೆದು ಸಂಭ್ರಮದಿಂದ ಹೊಸ ಜೀವನಕ್ಕೆ ಅಡಿ ಇಡಬೇಕು ಎಂದು ಬಹುತೇಕರು ಬಯಸುತ್ತಾರೆ. ಅದಕ್ಕಾಗಿ ಮದುವೆಗೆ ಹಲವು ತಿಂಗಳುಗಳು ಇರುವಾಗಲೇ ಸಿದ್ಧತೆ ನಡೆಸುತ್ತಾರೆ. ಈ ಯಾವುದೇ ಸಂಗತಿಗಳು ಖಂಡಿತವಾಗಿಯೂ ತಪ್ಪಲ್ಲ. ಆದರೆ, ಪರಿಸ್ಥಿತಿ ಈ ಬಾರಿ ತುಂಬ ಭಿನ್ನ ಮತ್ತು ಕಠಿಣವಾಗಿದೆ. ಜನರು ಗುಂಪು ಸೇರಬಾರದು, ಜನಸಂಚಾರದಿಂದ ಸೋಂಕು ಮತ್ತಷ್ಟು ಹೆಚ್ಚಳವಾಗಬಾರದು ಎಂಬ ಕಾರಣಕ್ಕೇ ಕಠಿಣ ಲಾಕ್​ಡೌನ್ ವಿಧಿಸಲಾಗಿದೆ

. ಕರೊನಾದಿಂದ ಆಗುತ್ತಿರುವ ಪ್ರಾಣಹಾನಿಯ ಅರಿವು ಎಲ್ಲರಿಗೂ ಇದೆ. ಇಂಥ ಹೊತ್ತಲ್ಲಿ ಸಮಾರಂಭಗಳನ್ನು ಆಯೋಜಿಸುವುದೆಂದರೆ ಅಪಾಯ ಆಹ್ವಾನಿಸಿದಂತೆಯೇ. ಮದುವೆಗೆ ಬಂದವರ ಪೈಕಿ ಒಬ್ಬರಿಗೆ ಸೋಂಕು ಅಥವಾ ಅದರ ಲಕ್ಷಣಗಳಿದ್ದರೆ, ಅದು ಇತರರಿಗೂ ವ್ಯಾಪಿಸಿಕೊಳ್ಳುತ್ತದೆ. ಹಾಗಾಗಿ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಸದ್ಯದ ಮಟ್ಟಿಗೆ ಮದುವೆ ಮತ್ತು ಇತರ ಶುಭ-ಸಮಾರಂಭಗಳನ್ನು ಮುಂದಕ್ಕೆ ಹಾಕಿ, ಜೀವರಕ್ಷಣೆಗೆ ಆದ್ಯತೆ ನೀಡುವುದರಲ್ಲೇ ಎಲ್ಲರ ಹಿತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net