ವಿಜಯವಾಣಿ ಸಂಪಾದಕೀಯ: ಲೋಕ ಅದಾಲತ್ ದಾಖಲೆ

Law
Published on

ರಾಜ್ಯದಲ್ಲಿ ಶನಿವಾರ ನಡೆದ ಬೃಹತ್ ಲೋಕ ಅದಾಲತ್​ನಲ್ಲಿ 3.88 ಲಕ್ಷ ಪ್ರಕರಣಗಳು ರಾಜೀ ಸಂಧಾನದ ಮೂಲಕ ಬಗೆಹರಿದಿವೆ. ಇಷ್ಟು ಸಂಖ್ಯೆಯ ಪ್ರಕರಣಗಳು ಒಂದೇ ದಿನ ಇತ್ಯರ್ಥವಾಗಿದ್ದು ದೇಶದಲ್ಲಿಯೇ ದಾಖಲೆ ಎಂಬುದು ಹೆಗ್ಗಳಿಕೆಯಾಗಿ ಇತಿಹಾಸದ ಪುಟ ಸೇರಿದೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದ್ದ ಮೆಗಾ ಲೋಕ ಅದಾಲತ್​ನಲ್ಲಿ ರಾಜ್ಯಾದ್ಯಂತ 943 ಪೀಠಗಳು ಅದಾಲತ್ ನಡೆಸಿದವು. ‘ಒಟ್ಟು 6.11 ಲಕ್ಷ ಪ್ರಕರಣಗಳನ್ನು ರಾಜೀ ಸಂಧಾನಕ್ಕೆ ಗುರುತಿಸಲಾಗಿತ್ತು. ಈ ಪೈಕಿ, 3.88 ಲಕ್ಷ ಪ್ರಕರಣಗಳನ್ನು ಬಗೆಹರಿಸಲಾಯಿತು’ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಅರವಿಂದ ಕುಮಾರ್ ಮಾಹಿತಿ ನೀಡಿದ್ದಾರೆ.

ದಾಂಪತ್ಯ ಪ್ರಕರಣ, ಕೌಟುಂಬಿಕ ವಿವಾದಗಳು, ಆಸ್ತಿ ವಿವಾದ, ಅಪಘಾತ ಪ್ರಕರಣಗಳಲ್ಲಿನ ಪರಿಹಾರ ಬಗೆಗಿನ ಕೇಸುಗಳು, ವಾಣಿಜ್ಯ ದಾವೆಗಳು...ಹೀಗೆ ವಿವಿಧ ವಿಷಯಗಳ ಕುರಿತಾದ ತಂಟೆತಕರಾರುಗಳು ಪರಸ್ಪರ ರಾಜೀ ಮೂಲಕ ಇತ್ಯರ್ಥವಾಗಿದ್ದು ಗಮನಾರ್ಹ. ಇದರಿಂದ ಎರಡೂ ಪಕ್ಷಗಾರರಿಗೆ ಸಮಯ ಹಾಗೂ ಹಣದ ಉಳಿತಾಯವಾದಂತಾಯಿತಲ್ಲದೆ, ಮಾನಸಿಕ ನೆಮ್ಮದಿಯೂ ದೊರಕಿದಂತಾಗಿದೆ. ಈ ಮೆಗಾ ಲೋಕ ಅದಾಲತ್​ನಲ್ಲಿ ಒಟ್ಟು 25 ಕೋಟಿ ರೂ. ಮೊತ್ತದ ದಂಡ ವಸೂಲಿ ಮಾಡಿ ಸರ್ಕಾರಕ್ಕೆ ಸಂದಾಯ ಮಾಡಲಾಗಿದೆ. ಜತೆಗೆ, ಈ ಅದಾಲತ್​ನಿಂದ ಸರ್ಕಾರಕ್ಕೆ ಹಣ ಉಳಿತಾಯವೂ ಆಗಿದೆ ಎಂಬುದು ವಿಶೇಷ. ‘ಈ 3.88 ಲಕ್ಷ ಪ್ರಕರಣಗಳ ವಿಚಾರಣೆ ನ್ಯಾಯಾಲಯಗಳಲ್ಲಿ ನಡೆದಿದ್ದರೆ, ಸರ್ಕಾರಕ್ಕೆ ನ್ಯಾಯಾಧೀಶರು ಮತ್ತು ಸಿಬ್ಬಂದಿ ವೇತನ ಮತ್ತಿತರ ಬಾಬತ್ತಿಗಾಗಿ ಸುಮಾರು 152 ಕೋಟಿ ರೂ. ವೆಚ್ಚವಾಗುತ್ತಿತ್ತು. ಆ ಹಣ ಸರ್ಕಾರಕ್ಕೆ ಉಳಿದಂತಾಗಿದೆ’ ಎಂದು ನ್ಯಾ. ಅರವಿಂದ ಕುಮಾರ್ ಹೇಳಿರುವುದು ಗಮನಾರ್ಹ ಸಂಗತಿ.

ಜನರು ನ್ಯಾಯಕ್ಕಾಗಿ ನ್ಯಾಯಾಲಯಗಳ ಮೆಟ್ಟಿಲೇರುವುದು ಸಹಜ. ಇದು ನಮ್ಮ ವ್ಯವಸ್ಥೆ ಒದಗಿಸಿರುವ ಮುಕ್ತ ಅವಕಾಶ. ಆದರೆ ನಮ್ಮ ದೇಶದಲ್ಲಿ ನ್ಯಾಯಾಧೀಶರ ಕೊರತೆ, ಮೂಲಸೌಕರ್ಯ ಸಮಸ್ಯೆ ಮುಂತಾದ ಕಾರಣಗಳಿಂದಾಗಿ ನ್ಯಾಯಾಲಯಗಳಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರಕರಣಗಳ ವಿಚಾರಣೆ ಬಾಕಿ ಇದೆ. 2021ರ ಏಪ್ರಿಲ್ ಹೊತ್ತಿಗೆ ದೇಶದ ಎಲ್ಲ ಹಂತಗಳ ಕೋರ್ಟುಗಳಲ್ಲಿ ಬಾಕಿ ಇರುವ ಪ್ರಕರಣಗಳ ಒಟ್ಟು ಸಂಖ್ಯೆ ಸುಮಾರು 3.75 ಕೋಟಿಯಷ್ಟಿದೆ ಎಂದರೆ, ನ್ಯಾಯಾಲಯಗಳ ಮೇಲೆ ಇರುವ ಕಾರ್ಯದೊತ್ತಡವನ್ನು ಗ್ರಹಿಸಬಹುದು. ಈ ಸಮಸ್ಯೆಗಳನ್ನು ಪರಿಹರಿಸುವ ಯತ್ನಗಳೂ ನಡೆದಿವೆ. ಕರೊನಾ ಕಾರಣದಿಂದಾಗಿ ಭೌತಿಕ ಕಲಾಪಗಳನ್ನು ನಡೆಸಲು ಸಾಧ್ಯವಾಗದೆ, ಮತ್ತಷ್ಟು ಸಮಸ್ಯೆ ಆಗುವಂತಾಯಿತು. ಕ್ರಮೇಣ ಕೋರ್ಟುಗಳು ವರ್ಚುವಲ್ ಕಲಾಪ ನಡೆಸಿದವೆಂಬುದು ಬೇರೆ ವಿಷಯ. ಹೀಗಾಗಿ, ಲೋಕ ಅದಾಲತ್​ನಂತಹ ಪ್ರಕ್ರಿಯೆಯಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳು ಬಗೆಹರಿದರೆ, ಕೋರ್ಟುಗಳ ಮೇಲೆ ಅಷ್ಟು ಭಾರ ಹಾಗೂ ಕಾರ್ಯದ ಒತ್ತಡ ತಗ್ಗುತ್ತದೆ. ಇದಲ್ಲದೆ, ಲೋಕ ಅದಾಲತ್​ನಿಂದ ಜನರಿಗೆ ಹಣ ಹಾಗೂ ಸಮಯದ ಉಳಿತಾಯವೂ ಆಗುತ್ತದೆ. ಆದ್ದರಿಂದ, ಈ ವಿಧಾನವನ್ನು ಇನ್ನಷ್ಟು ಹೆಚ್ಚು ಪ್ರಚಲಿತಗೊಳಿಸುವತ್ತ ಪ್ರಯತ್ನಗಳು ನಡೆಯಬೇಕು ಮತ್ತು ಜನರು ಸಹ ಈ ಬಗ್ಗೆ ಹೆಚ್ಚು ಅರಿವು ಮೂಡಿಸಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net