

ಕನ್ನಡದ ಬಗೆಗೆ ಆತಂಕ, ಕಳವಳ ಪಡುವುದಕ್ಕಿಂತ ಕನ್ನಡವನ್ನು ಹೆಚ್ಚೆಚ್ಚು ಬಳಸುತ್ತ, ಆ ಸಂಸ್ಕೃತಿಯನ್ನೇ ನಮ್ಮಲ್ಲಿ ಆವಾಹಿಸಿಕೊಳ್ಳಬೇಕು, ಪರಿಸರದ ನುಡಿಯಲ್ಲೇ ಸರೀಕರೊಂದಿಗೆ ವ್ಯವಹರಿಸಬೇಕು ಮತ್ತು ಯಾವುದು ಪರಿಸರ ಭಾಷೆಯೋ ಅದರಲ್ಲಿ ಮಾತ್ರ ಮಕ್ಕಳು ಲೋಕಾಕೃತಿಯನ್ನು ಚೆನ್ನಾಗಿ ಗ್ರಹಿಸುವುದರಿಂದ, ಕನ್ನಡವೇ ಶಿಕ್ಷಣದ ಮಾಧ್ಯಮವಾಗಬೇಕು, ಈ ನಿಟ್ಟಿನಲ್ಲಿನ ಕಾನೂನು ತೊಡಕುಗಳನ್ನು ನಿವಾರಿಸಲು ಯತ್ನಿಸಬೇಕು ಎಂಬ ಸಂದೇಶವನ್ನು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷಸ್ಥಾನದಿಂದ ನೀಡಿದ ಎಚ್.ಎಸ್.ವೆಂಕಟೇಶಮೂರ್ತಿ ವರ್ತಮಾನದ ಹಲವು ಸವಾಲುಗಳಿಗೆ ಪರಿಹಾರ ಸೂಚಿಸಿದ್ದಾರೆ. ಹಲವು ಸಮಸ್ಯೆಗಳಿಗೆ ಸಾಮೂಹಿಕ ನೆಲೆಯಲ್ಲಿ ಉತ್ತರ ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ವಲಯದ ಕಳವಳಗಳಿಗೆ ಮಾತ್ರವಲ್ಲದೆ ಸಾಮಾಜಿಕ ಬದುಕಿನ ಸ್ಥಿತ್ಯಂತರಗಳ ಬಗ್ಗೆಯೂ ಎಚ್ಎಸ್ವಿ ಸಮುದಾಯದ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ. ರಾಜಕೀಯ ನಾಯಕರು ಮಾತ್ರವಲ್ಲದೆ ಎಲ್ಲ ರಂಗಗಳಲ್ಲೂ ನಾಯಕತ್ವ ಬೆಳೆಯಬೇಕಿದೆ, ಆ ಮುಖೇನ ಆ ವಲಯಗಳು ಶಕ್ತಿಶಾಲಿ ಆಗಬೇಕು ಎಂಬ ಕಳಕಳಿಯನ್ನೂ ವ್ಯಕ್ತಪಡಿಸಿದ್ದಾರೆ.
ಶರಣರ ನಾಡು ಕಲಬುರಗಿಯಲ್ಲಿ ಬುಧವಾರ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಂಡಿದ್ದು, ನಿರೀಕ್ಷೆಗೂ ಮೀರಿ ಜನಸ್ಪಂದನೆ ವ್ಯಕ್ತವಾಗುತ್ತಿದೆ. 33 ವರ್ಷಗಳ ಬಳಿಕ ಕಲಬುರಗಿಯಲ್ಲಿ ಸಮ್ಮೇಳನ ನಡೆದಿದ್ದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಹಜವಾಗಿಯೇ ಹಲವು ನಿರೀಕ್ಷೆಗಳು ಗರಿಗೆದರಿವೆ. ಅಲ್ಲದೆ, ಕನ್ನಡದ ಪ್ರಾಯೋಗಿಕ ಸಮಸ್ಯೆಗಳಿಗೆ ಸಮ್ಮೇಳನಾಧ್ಯಕ್ಷರು ಯಾವ ಬಗೆಯ ಮದ್ದು ಸೂಚಿಸಲಿದ್ದಾರೆ ಎಂಬ ಕುತೂಹಲವೂ ಇತ್ತು. ತ್ರಿಭಾಷಾ ಸೂತ್ರದ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದ ಎಚ್ಎಸ್ವಿ, ಉತ್ತರ ಭಾರತದ ಮಕ್ಕಳಿಗೆ ಎರಡು ಭಾಷೆ, ಮತ್ತೊಂದೆಡೆ ಮೂರು ಭಾಷೆ ಏಕೆ? ತ್ರಿಭಾಷಾ ಸೂತ್ರ ಮಾನ್ಯ ಮಾಡುವುದೇ ಆದಲ್ಲಿ ಎಲ್ಲ ಪ್ರಾಂತ್ಯಗಳಿಗೂ ಸಮಾನವಾಗಿ ಅನ್ವಯ ಆಗಬೇಕು ಎಂದು ಹೇಳಿರುವುದು ಸೂಕ್ತವಾಗಿಯೇ ಇದೆ. ಸಮನ್ವಯದಿಂದಲೇ ಸಾಗೋಣ; ಆದರೆ ಹಿಂದಿ ಹೇರಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕನ್ನಡ ಮಾಧ್ಯಮ ಕಲಿಕೆಯ ಅವಶ್ಯಕತೆಯ ಬಗ್ಗೆ ವಿವರವಾಗಿ ಮಾತನಾಡಿರುವ ಎಚ್ಎಸ್ವಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯೂ ದೊರೆಯಲಿ ಎಂದಿದ್ದಾರೆ. ಸಮಾಜದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಸ್ವಾರ್ಥ ಕೇಂದ್ರಿತ ಜೀವನ ಸಿದ್ಧಾಂತವೇ ಪ್ರಧಾನಕಾರಣವಾಗಿದ್ದು, ಇದನ್ನು ಬದಲಿಸಿಕೊಳ್ಳುವ ಅನಿವಾರ್ಯತೆಯನ್ನು ಒತ್ತಿ ಹೇಳಿದ್ದಾರೆ. ಗಡಿವಿವಾದಗಳು ಅಂತ್ಯಗೊಳ್ಳಬೇಕಿದ್ದು, ಬಹುಭಾಷಾ ಸಂಸ್ಕೃತಿಯನ್ನು ಒಪ್ಪಿಕೊಳ್ಳುವ ಅಗತ್ಯ ಪ್ರತಿಪಾದಿಸಿದ್ದಾರೆ. ಒಟ್ಟಾರೆ, ಸಮ್ಮೇಳನಾಧ್ಯಕ್ಷರ ಭಾಷಣ ಬರೀ ಸಮಸ್ಯೆಗಳನ್ನು ಪ್ರಸ್ತಾಪಿಸಿಲ್ಲ. ಅದಕ್ಕೆ ಪರಿಹಾರ ಸೂತ್ರಗಳನ್ನು ಕೂಡ ತಿಳಿಸಿದೆ. ನಾಳೆಯ ದಿನಗಳನ್ನು ಆಶಾವಾದದಿಂದ ಕಾಣಲು ಇಂದು ಹೆಚ್ಚು ಶ್ರಮಿಸಬೇಕಿದ್ದು, ಕನ್ನಡವನ್ನು ಮನೆ ಮಾತಾಗಿಸುವ, ಹೃದಯದ ಗೀತೆ ಆಗಿಸುವ ಸಂದೇಶವನ್ನು ಈ ಭಾಷಣ ಒಳಗೊಂಡಿದೆ. ಸಮಸ್ಯೆ ಎಷ್ಟೇ ತೀವ್ರವಾಗಿರಲಿ, ಭಾಷೆಯನ್ನು ಹೆಚ್ಚೆಚ್ಚು ಬೆಳೆಸುವುದು ಮತ್ತು ಆ ಪರಂಪರೆಯೊಂದಿಗೆ ಒಂದಾಗುವುದೇ ಸೂಕ್ತ ಎಂಬ ಎಚ್ಎಸ್ವಿ ಕಳಕಳಿ ಸಾಕಾರವಾಗಬೇಕಾದರೆ ಪ್ರಭುತ್ವದ ಜತೆಗೆ ಜನಸಾಮಾನ್ಯರು ಸಹ ತಮ್ಮ ಜವಾಬ್ದಾರಿ ಅರಿತು ಮುಂದಡಿ ಇರಿಸಬೇಕಾಗಿದೆ.