

ಶ್ರೀಲಂಕಾ ಸಂಸತ್ ಚುನಾವಣೆಯಲ್ಲಿ ಪ್ರಧಾನಿ ಮಹಿಂದ ರಾಜಪಕ್ಸ ಅವರ ಶ್ರೀಲಂಕಾ ಪೊದುಜನ ಪೆರುಮನ (ಎಸ್ಎಲ್ಪಿಪಿ) ಪಕ್ಷ ಸ್ಪಷ್ಟ ಬಹುಮತದ ಮೂಲಕ ಗೆಲುವು ಸಾಧಿಸಿದ್ದು, ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದೆ. ಕರೊನಾ ಕಾರಣದಿಂದಾಗಿ ಎರಡು ಬಾರಿ ಚುನಾವಣೆಯನ್ನು ಮುಂದೂಡಿದ ಬಳಿಕ ಆಗಸ್ಟ್ 5ರಂದು ಚುನಾವಣೆ ನಡೆದಿತ್ತು. ಶ್ರೀಲಂಕಾ ಸಂಸತ್ 225 ಸ್ಥಾನಗಳನ್ನು ಹೊಂದಿದ್ದು, ರಾಜಪಕ್ಸರ ಎಸ್ಎಲ್ಪಿಪಿ ಪಕ್ಷ 146 ಸ್ಥಾನಗಳನ್ನು ಗೆದ್ದುಕೊಂಡಿದೆ. ರಾಜಪಕ್ಸ ಚೀನಾದೊಂದಿಗೆ ಮೊದಲಿನಿಂದಲೂ ನಿಕಟ ಬಾಂಧವ್ಯ ಹೊಂದಿದ್ದು, ಈಗ ದ್ವೀಪರಾಷ್ಟ್ರದಲ್ಲಿ ಚೀನಾ ಪ್ರಾಬಲ್ಯ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ. ಸಾಂಸ್ಕೃತಿಕವಾಗಿ ಭಾರತಕ್ಕೆ ಆಪ್ತಮಿತ್ರವಾಗಿದ್ದ ಶ್ರೀಲಂಕಾಕ್ಕೆ ಆರ್ಥಿಕ ನೆರವು, ಅಭಿವೃದ್ಧಿ ಯೋಜನೆಗಳ ಹೆಸರಲ್ಲಿ ಚೀನಾ ತನ್ನ ಪ್ರಾಬಲ್ಯವನ್ನು ಹೆಚ್ಚಿಸತೊಡಗಿತು. ನೇಪಾಳದಲ್ಲೂ ಅದು ಇದೇ ರೀತಿಯ ನೀತಿಗಳನ್ನು ಅನುಸರಿಸುತ್ತಿದೆ. ಆದರೆ, ಚೀನಾದ ವಾಸ್ತವ ಮುಖ ಏನೆಂಬುದು ಇತ್ತೀಚಿನ ಕೆಲ ಬೆಳವಣಿಗೆಗಳಲ್ಲಿ ಹಲವು ರಾಷ್ಟ್ರಗಳಿಗೆ ಮನದಟ್ಟಾಗಿದೆ. ಹಾಗಾಗಿ, ಅವು ಡ್ರಾ್ಯಗನ್ ರಾಷ್ಟ್ರದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿವೆ ಮತ್ತು ಕೆಲ ರಾಷ್ಟ್ರಗಳಂತೂ ಬಹಿರಂಗವಾಗಿಯೇ ಆ ದೇಶದ ವಿರುದ್ಧ ಮಾತಾಡುತ್ತಿವೆ.
ಶ್ರೀಲಂಕಾದ ಮುಂದಿನ ನಡೆ ಏನಿರಲಿದೆ ಎಂಬುದರ ಕುತೂಹಲವಂತೂ ಇದ್ದೇ ಇದೆ. ಚೀನಾದ ಕುಟಿಲ ನೀತಿಗಳನ್ನು ಅರಿತುಕೊಂಡು ಭಾರತಕ್ಕೆ ಹತ್ತಿರವಾಗುತ್ತಾ? ಭಾರತ ಕೂಡ ಪ್ರಮುಖ ಅಂತಾರಾಷ್ಟ್ರೀಯ ಶಕ್ತಿಯಾಗಿ ಬದಲಾಗಿರುವ ಸನ್ನಿವೇಶದಲ್ಲಿ ರಾಜಪಕ್ಸ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರಾ? ಎಂಬ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು. ಎಲ್ಟಿಟಿಇಯನ್ನು ಪರಾಭವಗೊಳಿಸಿದ್ದರೂ ಐಸಿಸ್ನ ಉಪಟಳದಿಂದ ಲಂಕಾ ಬೇಸತ್ತಿದೆ. ಉಗ್ರನಿಗ್ರಹದಲ್ಲಿ ಅಂತಾರಾಷ್ಟ್ರೀಯ ಸಹಕಾರ ಬಲಗೊಳ್ಳಬೇಕು ಎಂದು ಭಾರತ ಜಾಗತಿಕ ವೇದಿಕೆಗಳಲ್ಲಿ ಪ್ರತಿಪಾದಿಸುತ್ತಲೇ ಬಂದಿದ್ದು, ಈ ನಿಟ್ಟಿನಲ್ಲಿ ಶ್ರೀಲಂಕಾ ಕೂಡ ಪರಿಣಾಮಕಾರಿ ನಿಲುವು ತಳೆಯುವ ಅಗತ್ಯವಿದೆ.
ಭಾರತ ಮತ್ತು ಶ್ರೀಲಂಕಾ ನಡುವೆ ಸಾಂಸ್ಕೃತಿಕ, ವ್ಯಾಪಾರ-ವಾಣಿಜ್ಯ ಸಂಬಂಧಗಳು ಮೊದಲಿನಿಂದಲೂ ಉತ್ತಮವಾಗಿಯೇ ಇವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಚೀನಾದ ತಂತ್ರಗಾರಿಕೆಯಿಂದ ಲಂಕಾ ಭಾರತದ ಸ್ನೇಹದಿಂದ ದೂರ ಸರಿಯುತ್ತಿದೆ ಎಂಬುದು ವಾಸ್ತವ. ಶ್ರೀಲಂಕಾದಲ್ಲಿ ಚೀನಾ ಈಗಾಗಲೇ 24 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳ ಗುತ್ತಿಗೆ ಪಡೆದಿದೆ. ವಿಶೇಷವೆಂದರೆ ಅಷ್ಟೂ ಯೋಜನೆಗಳಿಗೆ ಸ್ವತಃ ಚೀನಾ ತನ್ನ ಬ್ಯಾಂಕ್ಗಳಿಂದ ಸಾಲ ನೀಡಿದೆ. ‘ಲಂಕಾದ ಹೊಸ ಪಯಣ’ದಲ್ಲಿ ವಿದೇಶಾಂಗ ನೀತಿಯ ದಿಕ್ಕೂ ಬದಲಾದರೆ ಭಾರತ-ಶ್ರೀಲಂಕಾಕ್ಕೆ ಎರಡಕ್ಕೂ ಅನುಕೂಲ. ಹಳೆಯ ವಿವಾದಗಳನ್ನು ಬದಿಗಿಟ್ಟು ಸ್ನೇಹವರ್ಧನೆ ಮಾಡಿಕೊಳ್ಳುವತ್ತ ಭಾರತ ಆಸಕ್ತಿ ತೋರಿದೆ. ರಾಜಪಕ್ಸ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೆ, 2019ರಲ್ಲಿ ಅಧ್ಯಕ್ಷರಾದ ಹೊಸದರಲ್ಲೇ ಗೊತಬಯ ರಾಜಪಕ್ಸ ಭಾರತಕ್ಕೆ ಭೇಟಿ ನೀಡಿದ್ದರು. ಪ್ರಸಕ್ತ ಶ್ರೀಲಂಕಾ ಚೀನಾಕ್ಕೆ ತುಂಬ ಹತ್ತಿರವಾಗಿದ್ದು, ಆ ರಾಷ್ಟ್ರಕ್ಕೆ ಅತ್ಯಾಪ್ತರೇ ಆಗಿರುವ ಮಹಿಂದ ಪ್ರಧಾನಿ ಆಗಿರುವ ಹಿನ್ನೆಲೆಯಲ್ಲಿ ಭಾರತ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಬೇಕಿದೆ.