

90ರ ದಶಕದಲ್ಲಿ ನಡೆದ ದೌರ್ಜನ್ಯ, ಅತ್ಯಾಚಾರದ ಪರಿಣಾಮ ಲಕ್ಷಾಂತರ ಕಾಶ್ಮೀರಿ ಪಂಡಿತರ ಬದುಕೇ ಶೋಚನೀಯವಾಯಿತು. ಸಿರಿವಂತ, ಮರ್ಯಾದಸ್ತ ಕುಟುಂಬಗಳಿಗೆ ಸೇರಿದ್ದ ಈ ಪಂಡಿತರು ತಮ್ಮದೆಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾದರು. ಜೀವ ಉಳಿದರೆ ಸಾಕು ಎಂಬ ಧಾವಂತದಿಂದ ದೇಶದ ಬೇರೆ ಬೇರೆ ಭಾಗಗಳಿಗೆ ಹೋಗಿ ನೆಲೆಸಿದರು. ಆಸ್ತಿಪಾಸ್ತಿ ಸೇರಿ ತಾಯ್ನಾಡಿನ ನಂಟನ್ನು ಕಳೆದುಕೊಂಡು ಗುಳೆ ಹೋದ ಈ ಜನರ ಬದುಕು ಹಲವು ಸಂಕಷ್ಟಗಳನ್ನು ಕಂಡಿತು. ಕೆಲವರು ಜಮ್ಮು-ಕಾಶ್ಮೀರದಲ್ಲೇ ಟೆಂಟ್ ನಿರ್ವಿುಸಿಕೊಂಡು ವಾಸಿಸಿದರು. ಪುನರ್ ವಸತಿಗಾಗಿ ಆಗ್ರಹಿಸಿ ಹಲವು ಬಗೆಯ ಹೋರಾಟ ಮಾಡಿದರು. ಸರ್ಕಾರಗಳ ಗಮನ ಸೆಳೆದರು. ಆದರೆ, ಪ್ರಯೋಜನ ಮಾತ್ರ ಶೂನ್ಯ. ಇವರ ಯಾವುದೇ ಬೇಡಿಕೆ, ಮನವಿಗೂ ಸರ್ಕಾರಗಳು ಸ್ಪಂದಿಸಲಿಲ್ಲ.
ಜಮ್ಮು- ಕಾಶ್ಮೀರದಿಂದ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆದ ಈಗಿನ ಕೇಂದ್ರ ಸರ್ಕಾರದ ನಿರ್ಣಯ ಸಂಚಲನವನ್ನೇ ಸೃಷ್ಟಿಸಿತು. ಹಲವು ರಾಜಕೀಯ ಪಕ್ಷಗಳು ಈ ನಿರ್ಧಾರಕ್ಕೆ ಭಾರಿ ವಿರೋಧ ತೋರಿದವಾದರೂ, ಕೇಂದ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಈ ಬದಲಾವಣೆ ಕಾಶ್ಮೀರಿ ಪಂಡಿತರಲ್ಲೂ ಹೊಸ ನಿರೀಕ್ಷೆ ಮೂಡಿಸಿತು. ಅಲ್ಲದೆ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ, ಆ ನಿರ್ಣಯ ಕಳೆದ ಅಕ್ಟೋಬರ್ 31ರಿಂದ ಜಾರಿಗೆ ಬಂದದ್ದು ಆಶಾದಾಯಕ ಬೆಳವಣಿಗೆಯಾಗಿ ಪರಿಣಮಿಸಿತು. ಇದೆಲ್ಲದರ ಬೆನ್ನಲ್ಲೇ, ಕಾಶ್ಮೀರಿ ಪಂಡಿತರ ಪುನರ್ ವಸತಿಗಾಗಿ ವಿಶೇಷ ಟೌನ್ಶಿಪ್ಗಳನ್ನು ನಿರ್ವಿುಸುವ ಆಶ್ವಾಸನೆಯನ್ನು ಕೇಂದ್ರ ಸರ್ಕಾರ ನೀಡಿದೆ.
ಕಾಶ್ಮೀರಿ ಪಂಡಿತರ ನಿಯೋಗ ಗೃಹ ಸಚಿವ ಅಮಿತ್ ಷಾರನ್ನು ದೆಹಲಿಯಲ್ಲಿ ಭೇಟಿ ಮಾಡಿ, ಹಲವು ಮನವಿಗಳನ್ನು ಸಲ್ಲಿಸಿದಾಗ ಷಾ ಈ ಭರವಸೆ ನೀಡಿದ್ದಾರೆ. ‘ಕಾಶ್ಮೀರದ ಹತ್ತು ಜಿಲ್ಲೆಗಳಲ್ಲಿ ಟೌನ್ಶಿಪ್ ನಿರ್ವಿುಸಲಾಗುವುದು ಮತ್ತು ಭಯೋತ್ಪಾದಕರಿಂದ ಹಾಳಾದ, ಅಪವಿತ್ರಗೊಂಡ ದೇವಸ್ಥಾನಗಳ ಮರುನಿರ್ವಣ ಮಾಡಲಾಗುವುದು. ಹೊಸದಾಗಿ ಬದುಕು ಕಟ್ಟಿಕೊಳ್ಳಲು ಪೂರಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ಷಾ ಹೇಳಿದ್ದಾರೆ. ಅಲ್ಲದೆ, ಕಾಶ್ಮೀರಿ ಪಂಡಿತ ಸಮುದಾಯದ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆಯ ವಯಸ್ಸನ್ನು ಏರಿಸಲು ಪೂರಕವಾಗಿ ಸ್ಪಂದಿಸಿದ್ದಾರೆ. ಈ ಮೂಲಕ ಕಾಶ್ಮೀರಿ ಪಂಡಿತರ ಹಲವು ದಶಕಗಳ ಬೇಡಿಕೆ ಈಡೇರುವ ಕಾಲ ಸಮೀಪಿಸಿದೆ. ತಮ್ಮದೇ ನೆಲದಲ್ಲಿ ಅವರು ಮತ್ತೆ ಬದುಕು ರೂಪಿಸಿಕೊಳ್ಳುವ ಆಶಾವಾದ ಚಿಗುರಿದೆ. ಅಲ್ಲಿನ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯೂ ನಡೆಯಲಿದ್ದು, ಈ ಬದಲಾವಣೆ ಅಲ್ಲಿ ರಾಜಕೀಯವಾಗಿಯೂ ದೊಡ್ಡ ಪರಿವರ್ತನೆ ತರಲಿದೆ ಎಂಬ ನಿರೀಕ್ಷೆ ಇದೆ. ಶಾಂತಿ, ಸೌಹಾರ್ದದಿಂದ ಬದುಕುವ ಕಾಶ್ಮೀರಿ ಪಂಡಿತರು ಕಳೆದ ಏಳು ದಶಕಗಳಲ್ಲಿ ಪಟ್ಟಿರುವ ಬವಣೆ ಅಷ್ಟಿಷ್ಟಲ್ಲ. ಸುಮಾರು ಎರಡು-ಮೂರು ಪೀಳಿಗೆಗಳೇ ಅನಾಥಸ್ಥಿತಿಯಲ್ಲಿ ಮರುಗಿವೆ. ಅದೆಲ್ಲವೂ ದೂರವಾಗುವ, ಪಂಡಿತರಿಗೆ ನ್ಯಾಯ ಒದಗುವ ದಿನಗಳು ಹತ್ತಿರದಲ್ಲಿವೆ ಎಂದು ಆ ಸಮುದಾಯದವರು ಸಂತಸಪಟ್ಟಿದ್ದಾರೆ. ಟೌನಶಿಪ್ ನಿರ್ಮಾಣ ಸೇರಿ ಅವರಿಗೆ ಮೂಲಸೌಕರ್ಯ ಕಲ್ಪಿಸುವ, ಮತ್ತೆ ಮುಖ್ಯವಾಹಿನಿಯಲ್ಲಿ ತಲೆ ಎತ್ತಿ ಬದುಕುವಂಥ ಸ್ಥಿತಿ ನಿರ್ವಣವಾಗಬೇಕಿದ್ದು, ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನ್ನ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.