

ದುರ್ಬಲ ವ್ಯಕ್ತಿಗಳು ಪವಾಡ ಸಂಭವಿಸಲಿ ಎಂದು ಕಾಯುತ್ತಿರುತ್ತಾರೆ. ಗಟ್ಟಿಗರು ಆತ್ಮವಿಶ್ವಾಸದಿಂದ ಸಾಧಿಸುತ್ತಾರೆ... ಜಪಾನ್ನ ಟೋಕಿಯೊದಲ್ಲಿ ಒಲಿಂಪಿಕ್ಸ್ ಕ್ರೀಡೋತ್ಸವದಲ್ಲಿ ಭಾರತದ 7 ಪದಕ ಆತ್ಮವಿಶ್ವಾಸದಿಂದ ಹೊರಹೊಮ್ಮಿದ ಗಟ್ಟಿ ಸಾಧನೆ. ಜಾಗತಿಕವಾಗಿ ಎಲ್ಲ ರಂಗಗಳಲ್ಲಿ ಮುಂಚೂಣಿಯ ರಾಜಪಥದಲ್ಲಿ ಮುನ್ನಡೆಯುತ್ತಿರುವ ಭಾರತ ಕ್ರೀಡಾರಂಗದಲ್ಲೂ ಯಶಸ್ಸಿನ ದಾಪುಗಾಲು ಹಾಕಲು ಟೋಕಿಯೊ ಪ್ರದರ್ಶನ ಚಿಮ್ಮುಹಲಗೆ ಆಗಬೇಕಿದೆ. ಕರೊನಾದಿಂದಾಗಿ, ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರಿರಲಿಲ್ಲ ಎಂಬುದನ್ನು ಹೊರತುಪಡಿಸಿದರೆ ಸಂಘಟನೆ, ಸ್ಪರ್ಧಾತ್ಮಕ ಗುಣಮಟ್ಟದ ದೃಷ್ಟಿಯಿಂದ ಒಲಿಂಪಿಕ್ಸ್ ಭರ್ಜರಿ ಯಶಸ್ಸಿಯಾಯಿತು. ಭಾರತದ ಪಾಲಿಗೆ ಟೋಕಿಯೊದಲ್ಲಿನ ಪ್ರದರ್ಶನ ಈವರೆಗಿನ ಸರ್ವಶ್ರೇಷ್ಠ. ಒಲಿಂಪಿಕ್ಸ್ ಆರಂಭದ ಕಾಲದಿಂದ 1980ರ ದಶಕದವರೆಗೆ ಕೇವಲ ಹಾಕಿಯಲ್ಲಿ ಪದಕ ಗೆಲ್ಲುತ್ತಿದ್ದ ಭಾರತ ಟೋಕಿಯೊದಲ್ಲಿ ಅಥ್ಲೆಟಿಕ್ಸ್, ಹಾಕಿ, ಶೂಟಿಂಗ್, ಕುಸ್ತಿ, ವೇಟ್ಲಿಫ್ಟಿಂಗ್, ಬ್ಯಾಡ್ಮಿಂಟನ್ ಹೀಗೆ 6 ಕ್ರೀಡೆಗಳಲ್ಲಿ ಪದಕ ಸಾಧನೆ ಮಾಡಿದ್ದು ಬಹುದೊಡ್ಡ ದಿಕ್ಸೂಚಿ. ಅದರಲ್ಲೂ ನಿರೀಕ್ಷೆಯೇ ಮಾಡಿರದ ಅಥ್ಲೆಟಿಕ್ಸ್ನಲ್ಲಿ ಜಾವೆಲಿನ್ ಪಟು ನೀರಜ್ ಚೋಪ್ರಾ ಸ್ವರ್ಣ ಪದಕ ಗೆದ್ದಿದ್ದು ಪರಮಾದ್ಭುತ. ಆದರೆ, ನೀರಜ್ರ ಈ ಸಾಧನೆ ಪವಾಡವೂ ಅಲ್ಲ, ಆಕಸ್ಮಿಕವೂ ಅಲ್ಲ. ಬದಲಿಗೆ ವರ್ಷಗಳ ಸತತ ಪರಿಶ್ರಮ ಮತ್ತು ಆತ್ಮವಿಶ್ವಾಸದ ಫಲ. ನೀರಜ್ ಮಾತ್ರವಲ್ಲ, ಬೆಳ್ಳಿ ಗೆದ್ದ ಕುಸ್ತಿಪಟು ರವಿ ದಹಿಯ, ವೇಟ್ಲಿಫ್ಟರ್ ಮೀರಾ ಚಾನು, ಕಂಚು ಗೆದ್ದ ಪಿ.ವಿ. ಸಿಂಧು, ಲವ್ಲಿನಾ, ಭಜರಂಗ್ ಪೂನಿಯಾ ಹಾಗೂ 41 ವರ್ಷ ಬಳಿಕ ಒಲಿಂಪಿಕ್ಸ್ನಲ್ಲಿ ಪುನರುತ್ಥಾನ ಕಂಡ ಹಾಕಿ ತಂಡದ ಸಾಧನೆಗೆ ಮುಂದಿನ ಹಲವು ಪೀಳಿಗೆಯ ಮಕ್ಕಳನ್ನು ಒಲಿಂಪಿಕ್ಸ್ ಸಾಧನೆಗೆ ಹುರಿಗೊಳಿಸುವ ಶಕ್ತಿ ಇದೆ.
ಕ್ರೀಡಾ ಸಾಧನೆಗಳು ಕೇವಲ ಕನಸು ಕಾಣುವುದರಿಂದ ಕೈಗೂಡುವುದಿಲ್ಲ. ಪೂರಕ ಮೂಲಸೌಕರ್ಯಗಳ ಪಾತ್ರವೂ ಇದರಲ್ಲಿ ದೊಡ್ಡದು. ಭಾರತ ಸರ್ಕಾರ ಕೆಲವು ವರ್ಷಗಳಿಂದ ಒಲಿಂಪಿಕ್ಸ್ಗೆಂದೇ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂನಂಥ ಪ್ರತ್ಯೇಕ ಕಾರ್ಯಕ್ರಮಗಳನ್ನು ರೂಪಿಸಿ ಕ್ರೀಡಾಪಟುಗಳನ್ನು ಸಜ್ಜುಗೊಳಿಸುತ್ತಿದೆ. ಇದರ ಜತೆಗೆ ಚೀನಾ ಮಾದರಿಯಲ್ಲಿ ನಿರ್ದಿಷ್ಟ ಒಲಿಂಪಿಕ್ಸ್
ಗಳಿಗೆಂದೇ ಅಥ್ಲೀಟ್ಗಳನ್ನು ಜೂನಿಯರ್ ಮಟ್ಟದಲ್ಲೇ ಗುರುತಿಸಿ ತರಬೇತಿ ನೀಡಬೇಕು. ಮಾತ್ರವಲ್ಲ, ಹಳ್ಳಿ ಹಳ್ಳಿಗಳಲ್ಲಿ ವಿಶ್ವ ದರ್ಜೆಯ ಕ್ರೀಡಾಮೂಲಸೌಕರ್ಯ ಲಭ್ಯಗೊಳಿಸುವುದು, ಶಾಲಾ ಹಂತದಿಂದಲೇ ಪಠ್ಯಕ್ರಮದಲ್ಲಿ ಕ್ರೀಡೆಯನ್ನು ಅವಿಭಾಜ್ಯಗೊಳಿಸುವುದು ಮೊದಲಾದ ಉಪಕ್ರಮಗಳನ್ನು ತೆಗೆದುಕೊಳ್ಳಬೇಕು. ಇನ್ನು ಟೋಕಿಯೊದಲ್ಲಿ ಭಾರತೀಯರ ಮಹತ್ಸಾಧನೆಗೆ ಪೂರಕವಾಗಿ ಅಥ್ಲೀಟ್ಗಳನ್ನು ಉತ್ತೇಜಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾತ್ರವೂ ಮಹತ್ವಪೂರ್ಣ. ಅಥ್ಲೀಟ್ಗಳಿಗೆ ಬೀಳ್ಕೊಡುಗೆ ಸಮಾರಂಭದಿಂದ ಹಿಡಿದು, ಪ್ರತಿಯೊಬ್ಬ ಅಥ್ಲೀಟ್ಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸ್ಪರ್ಧಾಪೂರ್ವ ಉತ್ತೇಜನ, ಪದಕ ಗೆದ್ದ ಬಳಿಕ ಅಭಿನಂದಿಸಿದ್ದು ಅನನ್ಯ. ಭೌಗೋಳಿಕವಾಗಿ ಹಾಗೂ ಜನಸಂಖ್ಯೆಯಲ್ಲಿ ಭಾರತಕ್ಕೆ ಯಾವ ರೀತಿಯಲ್ಲೂ ಸಮಾನವಲ್ಲದ ಇಟಲಿ, ಜರ್ಮನಿ, ಫ್ರಾನ್ಸ್, ಹಾಲೆಂಡ್ನಂಥ ದೇಶಗಳು 10 ಚಿನ್ನ ಗೆಲ್ಲುವಾಗ ಭಾರತದಂಥ 140 ಕೋಟಿಯ ದೇಶ ಪದಕ ಪಟ್ಟಿಯಲ್ಲಿ ಚೀನಾ, ಅಮೆರಿಕಕ್ಕೆ ಪೈಪೋಟಿ ಒಡ್ಡುವಂತಾಗಬೇಕು. ಇದು ಒಂದೆರಡು ವರ್ಷಗಳಲ್ಲಿ ಆಗುವ ಕೆಲಸವಲ್ಲ. ಆದರೆ, ಆರ್ಥಿಕತೆ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಮೊದಲಾದ ಕ್ಷೇತ್ರಗಳಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಬೆಳೆದಿರುವುದನ್ನೇ ಪ್ರೇರಣೆಯಾಗಿ ತೆಗೆದುಕೊಂಡರೆ, ಒಲಿಂಪಿಕ್ಸ್ನಲ್ಲೂ ಭಾರತ ವಿಶ್ವಶಕ್ತಿಯಾಗುವುದು ಅಸಾಧ್ಯವಲ್ಲ, ಆತ್ಮಬಲ ಬೇಕಷ್ಟೇ.