ವಿಜಯವಾಣಿ ಸಂಪಾದಕೀಯ: ನೊಂದವರಿಗೆ ನೆರವು

Corona
Published on

ಕರೊನಾದಿಂದ ಸಾವಿಗೀಡಾದವರ ಕುಟಂಬಗಳಿಗೆ ಸರ್ಕಾರದ ವತಿಯಿಂದ ನೆರವು ನೀಡುವ ವಿಚಾರದಲ್ಲಿ ಉದ್ಭವಿಸಿದ್ದ ಗೊಂದಲಗಳಿಗೆ ಈಗ ಒಂದುಮಟ್ಟಿನ ರ್ತಾಕ ಅಂತ್ಯ ದೊರಕಿದೆ ಎಂದು ಹೇಳಬಹುದು. ಕರೊನಾ ಸಾಂಕ್ರಾಮಿಕತೆಗೆ ತುತ್ತಾಗಿ ಸಾವಿಗೀಡಾದವರ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ನೀಡುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಎಂಎ) ಶಿಫಾರಸು ಮಾಡಿತ್ತು. ಇದರನ್ವಯ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ತಿಳಿಸಿದೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ, ‘ಈಗ ನೊಂದವರಿಗೆ ಸ್ವಲ್ಪವಾದರೂ ಸಮಾಧಾನ ಸಿಕ್ಕಿದೆ. ಕರೊನಾದಿಂದಾಗಿ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಒಂದಷ್ಟು ಬೆಳವಣಿಗೆ ಆಗಿರುವುದು ನಮಗೆ ಖುಷಿ ತಂದಿದೆ’ಎಂದು ಹೇಳಿರುವುದು, ಸರ್ಕಾರಗಳ ಕರೊನಾ ನಿಯಂತ್ರಣ ಕಾರ್ಯಕ್ಕೆ ದೊರೆತ ದೊಡ್ಡ ಪ್ರಶಂಸಾಪತ್ರ ಎಂದೂ ಹೇಳಬಹುದು. ಕೇಂದ್ರ ಸರ್ಕಾರ ಹೇಳಿರುವ ಪ್ರಕಾರ, ರಾಜ್ಯಗಳಲ್ಲಿರುವ ವಿಪತ್ತು ಸ್ಪಂದನಾ ನಿಧಿಗಳಿಂದ ಪರಿಹಾರ ವಿತರಣೆ ಆಗಲಿದೆ. ಕರ್ನಾಟಕದಲ್ಲಿ ಕೋವಿಡ್​ಗೆ ಬಲಿಯಾದ ಬಿಪಿಎಲ್ ಕುಟುಂಬಗಳಿಗೆ ಒಂದು ಲಕ್ಷ ರೂ. ನೆರವು ಪ್ರಕಟಿಸಲಾಗಿದ್ದು, ಈವರೆಗೆ 7 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ಅರ್ಜಿಗಳ ಪರಿಶೀಲನೆ ನಡೆದು ಪರಿಹಾರ ವಿತರಣೆ ನಡೆಯಬೇಕಿದೆ.

ಭವಿಷ್ಯದಲ್ಲಿ ಕರೊನಾ ಸೋಂಕಿಗೆ ಬಲಿಯಾಗುವ ಕುಟುಂಬದವರಿಗೂ ಪರಿಹಾರ ಸಿಗಲಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾರ್ಗಸೂಚಿ ಅನ್ವಯ, ಸಾವಿಗೆ ಕರೊನಾ ಕಾರಣವೆಂದು ದೃಢಪಟ್ಟ ಪ್ರಕರಣಗಳಲ್ಲಿ ಮಾತ್ರ ಪರಿಹಾರ ಸಿಗಲಿದೆ. ಕ್ಲೇಮು ಸಲ್ಲಿಕೆ ಪ್ರಕ್ರಿಯೆ, ಪರಿಶೀಲನೆ, ಮಂಜೂರಾತಿ ಹಾಗೂ ಪರಿಹಾರ ವಿತರಣೆ- ಇವೆಲ್ಲ ಸರಳ ಮತ್ತು ಜನಸ್ನೇಹಿಯಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳಿಗೆ ವಹಿಸಲಾಗುತ್ತದೆ. ಯಾವುದೇ ಪರಿಹಾರ ವಿತರಣೆಗೆ ಮಾನದಂಡ ಇರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ನಿಯಮದ ಹೆಸರಿನಲ್ಲಿ ಅರ್ಹ ಫಲಾನುಭವಿಗಳು ಸವಲತ್ತಿನಿಂದ ವಂಚಿತರಾಗದಂತೆ ಮತ್ತು ಅನರ್ಹರಿಗೆ ಸೌಲಭ್ಯ ದೊರಕದಂತೆ ಎಚ್ಚರ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಯೋಜನೆಯ ಉದ್ದೇಶ ಸಫಲವಾಗುವುದಿಲ್ಲ. ಕರೊನಾದಿಂದ ಸಾವು ಸಂಭವಿಸಿದೆ ಎಂದು ಪ್ರಮಾಣಪತ್ರ ನೀಡುವಲ್ಲಿ ಹಲವು ಗೊಂದಲಗಳು ತಲೆದೋರಿವೆ.

ಇದನ್ನು ಶೀಘ್ರ ಪರಿಹರಿಸದಿದ್ದಲ್ಲಿ ಪರಿಹಾರ ವಿತರಣೆಗೆ ತೊಡಕಾಗಲಿದೆ. ಇದಲ್ಲದೆ, ನಕಲಿ ಪ್ರಮಾಣಪತ್ರ ನೀಡುವ ಜಾಲಗಳೂ ಹುಟ್ಟಿಕೊಂಡಿವೆ ಎಂಬ ವರದಿಗಳು ಕಳವಳ ಮೂಡಿಸುವಂಥವು. ಇನ್ನೊಂದೆಡೆ, ಕರೊನಾ ಲಸಿಕೆ ಪ್ರಮಾಣಪತ್ರದಲ್ಲಿ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ತನಿಖೆಗೆ ಆದೇಶಿಸಿದೆ. ಭಾರತದಂತಹ ವಿಶಾಲ, ವೈವಿಧ್ಯಮಯ ದೇಶದಲ್ಲಿ ಎಲ್ಲರಿಗೂ ಆರೋಗ್ಯ ಸವಲತ್ತುಗಳನ್ನು ತಲುಪಿಸುವುದು ಸುಲಭದ ಮಾತಲ್ಲ. ಆದರೂ ಲಸಿಕೆ ಅಭಿಯಾನದಲ್ಲಿ ಭಾರತ ಮುಂಚೂಣಿಯಲ್ಲಿ ಇರುವುದು ಹೆಗ್ಗಳಿಕೆಯೇ ಸರಿ. ಕರೊನಾ ವಿರುದ್ಧ ಸಮರ ಇನ್ನೂ ಎಷ್ಟು ಕಾಲ ಮುಂದುವರಿಯಬೇಕೋ ಗೊತ್ತಿಲ್ಲ. ಸರ್ಕಾರಗಳು ಮತ್ತು ಸಾರ್ವಜನಿಕರು ಒಗ್ಗೂಡಿ ನಡೆಸಬೇಕಾದ ಹೋರಾಟ ಇದು ಎಂಬುದನ್ನು ಮರೆಯಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net