

ಕಳೆದ ಶೈಕ್ಷಣಿಕ ವರ್ಷವನ್ನು ಭಾಗಶಃ ನುಂಗಿಹಾಕಿದ್ದ ಕರೊನಾ ಸೋಂಕಿನ ಹಾವಳಿ ಈ ವರ್ಷವಂತೂ ಎಲ್ಲವನ್ನೂ ಅಸ್ತವ್ಯಸ್ತಗೊಳಿಸಿದೆ. ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆ ರದ್ದಾದ ಬೆನ್ನಲ್ಲೇ, ಐಸಿಎಸ್ಇಯ 10ನೇ ತರಗತಿ ಪರೀಕ್ಷೆಯೂ ರದ್ದಾಗಿದೆ. ಶೈಕ್ಷಣಿಕವಾಗಿ ತೀರಾ ಸಂದಿಗ್ಧ ಪರಿಸ್ಥಿತಿ ಇದು. ಪರೀಕ್ಷೆ ನಡೆಸಿದರೆ ಸೋಂಕು ಹರಡುವ ಭಯ. ನಡೆಸದಿದ್ದರೆ ಶೈಕ್ಷಣಿಕ ಕಲಿಕೆ, ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮ. ಈ ಇಕ್ಕಟ್ಟಿನ ನಡುವೆಯೇ ರಾಜ್ಯ ಸರ್ಕಾರವೂ ತನ್ನ ನಿರ್ಧಾರ ಪ್ರಕಟಿಸಿದೆ. 1ರಿಂದ 9ನೇ ತರಗತಿಗೆ ಪರೀಕ್ಷೆ ನಡೆಸದೆ, ಮೌಲ್ಯಾಂಕನ ಪರೀಕ್ಷೆ ಆಧಾರಿಸಿ ಫಲಿತಾಂಶ ಪ್ರಕಟಿಸಲು ತೀರ್ವನಿಸಲಾಗಿದೆ. ಈ ಮೂಲಕ ಕಳೆದ ವರ್ಷ ಅನುಸರಿಸಲಾಗಿದ್ದ ನೀತಿಯನ್ನೇ ಈ ವರ್ಷವೂ ಮುಂದುವರಿಸಲಾಗಿದೆ.
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಿಗದಿಯಂತೆ ಅಂದರೆ ಜೂನ್ 21ರಿಂದ ಜುಲೈ 5ರವರೆಗೆ ನಡೆಯಲಿವೆ. ಕಳೆದ ವರ್ಷವೂ ಹಲವು ಸುರಕ್ಷಾ ಕ್ರಮಗಳನ್ನು ಅನುಸರಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗಿತ್ತು. ಅದೇನಿದ್ದರೂ 1ರಿಂದ 9ನೇ ತರಗತಿ ಕುರಿತಂತೆ ಎದ್ದಿದ್ದ ಗೊಂದಲ, ಅನುಮಾನಗಳಿಗೆ ತೆರೆ ಬಿದ್ದಿದೆ. ಜೂನ್ 15ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಅದಕ್ಕೆ ಪೂರಕವಾಗಿ ಸಿದ್ಧತೆ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.
ಕರೊನಾ ಎರಡನೇ ಅಲೆ ತೀವ್ರತೆ ಪಡೆದುಕೊಂಡಿರುವ ಪರಿಣಾಮ, ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದಲೇ ಇರಿಸಬೇಕಾಗಿದೆ. ಮಕ್ಕಳಿಗೆ ಈ ಬಾರಿ ಭೌತಿಕ ತರಗತಿಗಳು ನಡೆದಿರುವುದು ಕೆಲವೇ ದಿನಗಳ ಕಾಲ. ಆನ್ಲೈನ್ ತರಗತಿಗಳನ್ನೇ ನೆಚ್ಚಿಕೊಳ್ಳುವ ಸ್ಥಿತಿ ಇತ್ತು ಮತ್ತು ಈ ವಿಧಾನದಲ್ಲಿ ಯಾವುದೇ ವಿದ್ಯಾರ್ಥಿಗೆ ಪರಿಣಾಮಕಾರಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ವಾಸ್ತವವೇ.
ಇದರ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸತೊಡಗಿವೆ. ಮಕ್ಕಳು ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ, ಆಸಕ್ತಿ ಕಳೆದುಕೊಂಡಿದ್ದಾರೆ. ಸ್ವಾಭಾವಿಕವಾಗಿ ದಕ್ಕುತ್ತಿದ್ದ ಕೌಶಲಗಳಿಂದಲೂ ವಂಚಿತರಾಗಿದ್ದಾರೆ. ಕಲಿಕೆಯ ಮೌಲ್ಯಮಾಪನಕ್ಕೆ ಪರೀಕ್ಷೆಗಳು ಅವಶ್ಯ ಮಾತ್ರವಲ್ಲದೆ ಮುಂದಿನ ಶೈಕ್ಷಣಿಕ ಹಂತಕ್ಕೆ ಹೋಗಲು ಮಾನದಂಡವೂ ಹೌದು. ಈಗಿನ ಸ್ಥಿತಿಯಲ್ಲಿ ಪರೀಕ್ಷೆ ರದ್ದು ಮಾಡಿರುವುದು ಅನಿವಾರ್ಯ ನಿರ್ಧಾರ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆಗಳ ಕುರಿತು ಸಿನಿಕತೆಯನ್ನು ಬೆಳೆಸಿಕೊಳ್ಳಬಾರದು. ಪೂರ್ವಸಿದ್ಧತಾ ಪರೀಕ್ಷೆಗಳಿಗೂ ಬಹುತೇಕ ವಿದ್ಯಾರ್ಥಿಗಳು ಗೈರುಹಾಜರಾಗಿರುವ ನಿದರ್ಶನ ಕಣ್ಮುಂದೆ ಇದೆ. ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಪರೀಕ್ಷೆಗಳಿಗೆ ಅದರದ್ದೇ ಆದ ಸ್ಥಾನವಿದೆ, ಗಳಿಸುವ ಅಂಕಗಳಿಗೆ ಮೌಲ್ಯವಿದೆ ಎಂಬುದನ್ನು ಅಲ್ಲಗಳೆಯಲಾಗದು. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚಿನ ಜಾಗ್ರತೆ ವಹಿಸಬೇಕು.
ಪರೀಕ್ಷೆಗಳು ಇಲ್ಲ ಎಂಬ ಕಾರಣಕ್ಕೆ ಮೈಮರೆತು, ಕಲಿಕೆಯಲ್ಲಿ ಹಿಂದೆ ಉಳಿಯಬಾರದು. ಹಾಗೆ ಮಾಡಿದರೆ ಮಕ್ಕಳ ವರ್ತಮಾನ, ಭವಿಷ್ಯ ಎರಡಕ್ಕೂ ಹಾನಿ. ಕಲಿಕೆಯ ಪ್ರಕ್ರಿಯೆ ಉತ್ಸಾಹದಿಂದ ಮುಂದುವರಿಯಲಿ. ಪರೀಕ್ಷೆಗಳು ಇಲ್ಲದಿದ್ದರೂ ಪಠ್ಯವನ್ನು ಚೆನ್ನಾಗಿ ತಿಳಿದುಕೊಳ್ಳುವ, ಹೊಸ ಕೌಶಲಗಳನ್ನು ಕಲಿಯುವ ಆಸಕ್ತಿ ಬೆಳೆಯಲಿ.