

ಎಲ್ಲ ರಂಗಗಳಲ್ಲೂ ಮಹಿಳೆಯರು ಸಾಧನೆಯ ಹೆಜ್ಜೆಗುರುತುಗಳನ್ನು ಮೂಡಿಸುತ್ತಿರುವುದು, ದಿಟ್ಟವಾಗಿ ಮುನ್ನಗ್ಗುತ್ತಿರುವುದು ಅಭಿಮಾನದ ಸಂಕೇತವೇ ಹೌದು. ಈ ಸಾಧನಾಪಥವೇ ಮಹಿಳೆಯರ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚು ಮಾಡಿದೆ ಎಂಬುದೂ ಗಮನಾರ್ಹ. ಇದಕ್ಕೆ ಸಾಕ್ಷಿಯೆಂಬಂತೆ ಗಗನಯಾತ್ರಿಯಾಗಿಯೂ ಹೆಣ್ಣು ತನ್ನ ಶಕ್ತಿ-ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾಳೆ. ಅದರಂತೆ, ಸೇನೆಯಲ್ಲೂ ಆಯಕಟ್ಟಿನ ಹುದ್ದೆ, ಇತರ ಅವಕಾಶ ದೊರೆಯಬೇಕು ಎಂಬ ದೀರ್ಘಾವಧಿ ಬೇಡಿಕೆ, ಆಶಯ ಈಡೇರುವ ಸಮಯ ಬಂದಿದೆ. ಈ ನಿಟ್ಟಿನಲ್ಲಿ ಸೋಮವಾರ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ‘ಸರ್ಕಾರ ತನ್ನ ಮಾನಸಿಕತೆ ಬದಲಿಸಿಕೊಂಡು ಮಹಿಳೆಯರಿಗೆ ಸೇನೆಯಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ಮೂರು ತಿಂಗಳೊಳಗಾಗಿ ಶಾಶ್ವತ ಆಯೋಗ ಸ್ಥಾಪಿಸಬೇಕು, ಕಮಾಂಡ್ ಹುದ್ದೆ ನೀಡಬೇಕು’ ಎಂದು ಸೂಚಿಸಿದೆ.
ಯುದ್ಧಭೂಮಿ ಹೊರತುಪಡಿಸಿ ಸೇನೆಯ ವೈದ್ಯಕೀಯ, ತಂತ್ರಜ್ಞಾನ ನಿರ್ವಹಣೆ ಸೇರಿ ಹಲವು ವಿಭಾಗಗಳಲ್ಲಿ ಮುಂಚಿನಿಂದಲೇ ಮಹಿಳೆಯರು ಸಕ್ರಿಯವಾಗಿದ್ದು, ಉನ್ನತ ಹುದ್ದೆಯನ್ನು ಅಲಂಕರಿಸಿರುವ ನಿದರ್ಶನಗಳಿವೆ. ಇತ್ತೀಚೆಗೆ, ಯುದ್ಧವಿಮಾನಗಳ ಪೈಲಟ್ ಆಗಿ ಗಮನ ಸೆಳೆದದ್ದು ಉಂಟು. ಆದರೆ, ಸಶಸ್ತ್ರ ಪಡೆಗಳಲ್ಲಿ, ಕಮಾಂಡ್ ಪೋಸ್ಟಿಂಗ್ಗಳಲ್ಲಿ ಪ್ರಾಶಸ್ಱ ಇರಲಿಲ್ಲ. ಈ ಸಂಬಂಧ ಕಳೆದ ಹದಿನೇಳು ವರ್ಷಗಳಿಂದ ಕಾನೂನು ಹೋರಾಟ ನಡೆಯುತ್ತಿತ್ತು. 2003ರಲ್ಲಿ ದೆಹಲಿ
ಹೈಕೋರ್ಟ್ನಲ್ಲಿ ಮೊದಲ ಬಾರಿ ಅರ್ಜಿ ಸಲ್ಲಿಕೆಯಾಗಿತ್ತು. 2010ರಲ್ಲಿ ಹೈಕೋರ್ಟ್ ತೀರ್ಪು ನೀಡಿ, ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪಿಸುವಂತೆ ಆದೇಶಿಸಿತ್ತು. ಸೋಮವಾರ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ. ಮಹಿಳೆಯರಿಗೆ ಪುರುಷರಷ್ಟು ದೈಹಿಕ ಹಾಗೂ ಸಾಮಾಜಿಕ ಕ್ಷಮತೆ ಇರುವುದಿಲ್ಲ ಎಂಬ ನೆಪವೊಡ್ಡಿ, ಅವಕಾಶವನ್ನು ಸರ್ಕಾರ ನಿರಾಕರಿಸಿತ್ತು. ‘ಈ ಪೂರ್ವಗ್ರಹವನ್ನು ತೊರೆಯಬೇಕು’ ಎಂದು ನ್ಯಾಯಾಲಯ ಸ್ಪಷ್ಟವಾಗಿಯೇ ಹೇಳಿದೆ.
ಶಾರ್ಟ್ ಸರ್ವಿಸ್ ಕಮಿಶನ್ (ಎಸ್ಎಸ್ಸಿ)ನಲ್ಲಿ 14 ವರ್ಷಗಳವರೆಗೆ ಕೆಲಸ ಮಾಡುವ ಪುರುಷ ಅಧಿಕಾರಿಗಳಿಗಷ್ಟೇ ಈವರೆಗೆ ಶಾಶ್ವತ ಆಯೋಗದ ಆಯ್ಕೆಯಿತ್ತು. ಪ್ರಸಕ್ತ ತೀರ್ಪಿನ ಪರಿಣಾಮ, ಶಾರ್ಟ್ ಸರ್ವಿಸ್ ಕಮಿಶನ್ ಅಡಿ ಬರುವ ಎಲ್ಲ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗದ ಸೌಲಭ್ಯ ಸಿಗಲಿದೆ. ‘ಸೇನೆಯಲ್ಲಿ ಕಾರ್ಯನಿರ್ವಹಣೆ ಮತ್ತು ಜವಾಬ್ದಾರಿ ಕುರಿತಂತೆ ಮಹಿಳೆಯರ ಕ್ಷಮತೆ ಬಗ್ಗೆ ಸಂದೇಹ ಪಡುವುದು ಮಹಿಳೆಯರ ಅವಮಾನ ಅಷ್ಟೇ ಅಲ್ಲ ಸೇನೆಯ ಅವಮಾನ ಕೂಡ ಹೌದು’ ಎಂದು ತೀರ್ಪಿನಲ್ಲಿ ತೀಕ್ಷ್ಣವಾಗಿ ಹೇಳಿರುವ ನ್ಯಾಯಾಲಯ, 2010ರ ಹೈಕೋರ್ಟ್ ತೀರ್ಪನ್ನು ನಿರ್ಲಕ್ಷಿಸಲಾಗಿದ್ದು ದುರದೃಷ್ಟಕರ’ ಎಂದಿದೆ. ಮಹಿಳಾ ಸೇನಾಧಿಕಾರಿಗಳು ಮತ್ತು ವಿವಿಧ ವಲಯದ ಸ್ತ್ರೀಸಾಧಕರು ಈ ತೀರ್ಪನ್ನು ಸ್ವಾಗತಿಸಿದ್ದು, ‘ತನ್ನ ಶಕ್ತಿ, ಪ್ರತಿಭೆ, ಸಾಮರ್ಥ್ಯ ಸಾಬೀತು ಪಡಿಸಲು ಮಹಿಳೆಗೆ ಈ ಮೂಲಕ ಅವಕಾಶ ದೊರೆಯಲಿದೆ ಮತ್ತು ತಾರತಮ್ಯದ ನೀತಿಯೂ ದೂರವಾಗಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಹಿಂದೆಲ್ಲ ಮಹಿಳಾ ವೀರಮಣಿಗಳು ರಣಾಂಗಣದಲ್ಲಿ ಶೌರ್ಯದಿಂದ ಹೋರಾಡಿದ ದಿಟ್ಟ ಕಥನಗಳೇ ಇವೆ. ಸ್ವಾತಂತ್ರ್ಯ ಹೋರಾಟದಲ್ಲೂ ಮಹಿಳೆಯರ ಪಾತ್ರ ಮಹತ್ವದ್ದಾಗಿತ್ತು. ಒಟ್ಟಿನಲ್ಲಿ, ವ್ಯವಸ್ಥೆಯ ಮಾನಸಿಕತೆ ಬದಲಿಸುವ, ಮಹಿಳೆಯರ ಆ ಮೂಲಕ ದೇಶದ ವಿಶ್ವಾಸವನ್ನು ಹೆಚ್ಚಿಸಿರುವ ಈ ತೀರ್ಪು ಐತಿಹಾಸಿಕ ಎಂಬುದರಲ್ಲಿ ಎರಡು ಮಾತಿಲ್ಲ.