

ದೂರಸಂಪರ್ಕ ಸೇವೆ ಒದಗಿಸುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಬಿಎಸ್ಎನ್ಎಲ್ (ಭಾರತ ಸಂಚಾರ ನಿಗಮ ಲಿಮಿಟೆಡ್) ನಿಜವಾಗಿಯೂ ಬಿಳಿಯಾನೆಯಾಗಿ ಪರಿಣಮಿಸಿದೆ. ಈ ಸಂಸ್ಥೆಗೆ 1.64 ಲಕ್ಷ ಕೋಟಿ ರೂಪಾಯಿಯಷ್ಟು ನೆರವಿನ ಪ್ಯಾಕೇಜನ್ನು ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ. ಹಲವಾರು ವರ್ಷಗಳಿಂದ ನಷ್ಟದಲ್ಲೇ ಸಾಗಿರುವ ಬಿಎಸ್ಎನ್ಎಲ್ಗೆ ಅಗಾಧ ಪ್ರಮಾಣದ ನೆರವನ್ನು ನೀಡುವ ಮೂಲಕ ಸರ್ಕಾರವು ಸಂಸ್ಥೆಯ ಪುನಶ್ಚೇತನಕ್ಕೆ ಮುಂದಾಗಿದೆಯಾದರೂ ಇದು ಸುಲಭವಲ್ಲ. ಬಿಎಸ್ಎನ್ಎಲ್ಗೆ ನೆರವು ನೀಡುತ್ತಿರುವುದು ಇದೇ ಮೊದಲೇನಲ್ಲ. 2019ರಲ್ಲಿಯೂ ಕೇಂದ್ರ ಸರ್ಕಾರ ನೆರವಿನ ಪ್ಯಾಕೇಜನ್ನು ಪ್ರಕಟಿಸಿತ್ತು. ಬಿಎಸ್ಎನ್ಎಲ್ ನೌಕರರ ಸ್ವಯಂ ನಿವೃತ್ತಿ ಘೋಷಣೆ ಯೋಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ 70 ಸಾವಿರ ಕೋಟಿ ರೂಪಾಯಿಗಳ ನೆರವನ್ನು ಆಗ ನೀಡಲಾಗಿತ್ತು. ಅಂದರೆ, ನಷ್ಟದಲ್ಲಿರುವ ಹಾಗೂ ಹೊರೆಯಾಗಿರುವ ಸಂಸ್ಥೆಯನ್ನು ಮುಚ್ಚುವ ಒಳಉದ್ದೇಶವಿತ್ತು. ಆದರೆ, ಈಗ ಮತ್ತೆ ನಾಲ್ಕು ವರ್ಷಗಳಿಗಾಗಿ, ಹಿಂದಿಗಿಂತಲೂ ಅಧಿಕ ಪ್ರಮಾಣದ ನೆರವಿಗೆ ಮುಂದಾಗಿದೆ. ಪ್ರಸ್ತುತ ಕೇಂದ್ರ ಘೋಷಿಸಿರುವ ನೆರವಿನ ಪ್ಯಾಕೇಜ್ನಲ್ಲಿ 43,964 ಕೋಟಿ ರೂಪಾಯಿಯಷ್ಟು ನೇರವಾಗಿ ನಗದು ಒಳಗೊಂಡಿದೆ. ಉಳಿದ 1.2 ಲಕ್ಷ ರೂಪಾಯಿ ಮೊತ್ತವು ಹಣಕಾಸೇತರ ನೆರವಾಗಿದೆ. ಅಂದರೆ, 44,993 ರೂಪಾಯಿ ಮೊತ್ತದಷ್ಟು 4 ಜಿ ತರಂಗಾಂತರಗಳನ್ನು ಬಿಎಸ್ಎನ್ಎಲ್ಗೆ ಉಚಿತವಾಗಿ ನೀಡುವುದು, 4ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು 22,471 ಕೋಟಿ ರೂಪಾಯಿ ಹಾಗೂ 2015ರಿಂದ 2020ರವರೆಗೆ ಗ್ರಾಮೀಣ ಪ್ರದೇಶದಲ್ಲಿ ವಾಣಿಜ್ಯಾತ್ಮಕವಾಗಿ ಕಾರ್ಯಸಾಧುವಲ್ಲದ ವೈರ್ಲೈನ್ ಸೇವೆ ಒದಗಿಸಿದ್ದಕ್ಕಾಗಿ 13,789 ರೂಪಾಯಿ ಒದಗಿಸುವುದಾಗಿದೆ.
4ಜಿ ತರಂಗಾಂತರವನ್ನು ಉಚಿತವಾಗಿ ಒದಗಿಸುತ್ತಿರುವುದು ಹಾಗೂ 4ಜಿ ತಂತ್ರಜ್ಞಾನಕ್ಕಾಗಿ ಅಪಾರ ಪ್ರಮಾಣದ ಹಣ ವ್ಯಯಿಸಲು ಮುಂದಾಗಿರುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಖಾಸಗಿ ಟೆಲಿಕಾಂ ಸಂಸ್ಥೆಗಳು ಹಲವಾರು ವರ್ಷಗಳ ಹಿಂದೆಯೇ 4ಜಿ ತಂತ್ರಜ್ಞಾನ ಅಳವಡಿಸಿಕೊಂಡು ಗುಣಮಟ್ಟದ ಸೇವೆಯನ್ನು ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಒದಗಿಸುತ್ತಿವೆ. ಸರ್ಕಾರದ ಬೆಂಬಲ ಹಾಗೂ ವ್ಯಾಪಕ ಜಾಲವನ್ನು ಹೊಂದಿದ್ದರೂ ಬಿಎಸ್ಎನ್ಎಲ್ ಮಾತ್ರ 4ಜಿ ತಂತ್ರಜ್ಞಾನ ಅಳವಡಿಸಿಕೊಳ್ಳದಿರುವುದರಿಂದ ಸ್ಪರ್ಧೆಯಲ್ಲಿ ಹಿಂದುಳಿದು ನಷ್ಟ ಅನುಭವಿಸಲು ಪ್ರಮುಖ ಕಾರಣ ಎಂಬ ಸಂಗತಿ ಜಗಜ್ಜಾಹೀರವಾದುದು. ಈಗ ಖಾಸಗಿ ಸಂಸ್ಥೆಗಳು 5ಜಿ ತರಂಗಾತರ ಪಡೆದುಕೊಳ್ಳಲು ಬಿಡ್ ಸಲ್ಲಿಕೆ ಮಾಡುತ್ತಿವೆ. ಕೆಲ ತಿಂಗಳಲ್ಲಿ ಗ್ರಾಹಕರಿಗೆ 5ಜಿ ತಂತ್ರಜ್ಞಾನ ಸೌಲಭ್ಯವನ್ನೂ ಒದಗಿಸಲಿವೆ. ಹೀಗಿರುವಾಗ, 4ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸಿಕೊಂಡು ಬಿಎಸ್ಎನ್ಎಲ್ ಸ್ಪರ್ಧೆ ನೀಡಲು ಸಾಧ್ಯವೇ? ಇಷ್ಟೆಲ್ಲ ಸರ್ಕಾರಿ ನೆರವಿದ್ದರೂ ಕಳೆದ 5 ವರ್ಷಗಳಲ್ಲಿ ಬಿಎಸ್ಎನ್ಎಲ್ ಅನುಭವಿಸಿದ ನಷ್ಟ 50,631 ಕೋಟಿ ರೂಪಾಯಿಗೂ ಅಧಿಕ. ಇದಕ್ಕೆ ಹೊಣೆ ಯಾರು? ಈಗೇನೋ ಸರ್ಕಾರ ನೆರವು ನೀಡಲು ಮುಂದಾಗಿದೆಯಾದರೂ, ಅದನ್ನು ಸದುಪಯೋಗಪಡಿಸಿಕೊಂಡು ಮರುಚೇತರಿಕೆ ಹೊಂದುವ ದೊಡ್ಡ ಸವಾಲು-ಜವಾಬ್ದಾರಿ ಸಂಸ್ಥೆ ಮೇಲಿದೆ. ಕಾಲಕ್ಕೆ ತಕ್ಕಂತೆ ಸ್ಪರ್ಧಾತ್ಮಕತೆಯನ್ನು ಮೈಗೂಡಿಸಿಕೊಂಡು ಗ್ರಾಹಕರಿಗೆ ಸೇವೆ ನೀಡದಿದ್ದರೆ ಯಾವ ಸಂಸ್ಥೆಯೂ ಅಸ್ತಿತ್ವದಲ್ಲಿ ಉಳಿಯಲು ಸಾಧ್ಯವಿಲ್ಲ. ಕರದಾತರ ಹಣದ ಅಪವ್ಯಯವಾಗದಂತೆ ನೋಡಿಕೊಳ್ಳುವ ಹೊಣೆ ಬಿಎಸ್ಎನ್ಎಲ್ ಮೇಲಿದೆ.