

ಅದರಂತೆಯೇ, ಮದರಸಾಗಳನ್ನು ಆಧುನೀಕರಣಗೊಳಿಸಿ, ಗುಣಮಟ್ಟದ ಶಿಕ್ಷಣ ನೀಡುವ ಪ್ರಸ್ತಾಪವಿದೆ. ಮದರಸಾಗಳಲ್ಲಿ ಈವರೆಗೆ ಧಾರ್ವಿುಕ ಶಿಕ್ಷಣ ಮಾತ್ರ ನೀಡಲಾಗುತ್ತಿರುವುದರಿಂದ, ಪಠ್ಯಶಿಕ್ಷಣ ಮತ್ತು ಅದಕ್ಕೆ ಸಂಬಂಧಿಸಿದ ಇತರ ಕೌಶಲಗಳಿಂದ ಅಲ್ಲಿನ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಹಾಗಾಗಿ, ಮದರಸಾಗಳಿಂದ ಹೊರಬಂದ ಮೇಲೆ ಬದುಕು ಕಟ್ಟಿಕೊಳ್ಳುವುದು ಕಷ್ಟದ ಕೆಲಸವೇ. ಆದರೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮದರಸಾಗಳನ್ನೂ ಒಳಗೊಳ್ಳಲಿರುವುದರಿಂದ, ಅಲ್ಲಿನ ವಿದ್ಯಾರ್ಥಿಗಳು ಮುಖ್ಯವಾಹಿನಿಗೆ ಬರಲು ಅನುಕೂಲವಾಗಲಿದೆ. ಇದೇ ಮಾದರಿಯ ಸುಧಾರಣೆಯನ್ನು ಕರ್ನಾಟಕ ಸರ್ಕಾರವೂ ಅನುಷ್ಠಾನಕ್ಕೆ ತರಲು ಮುಂದಾಗಿದೆ.
ರಾಜ್ಯದ ಮದರಸಾಗಳಲ್ಲಿ ಧಾರ್ವಿುಕ ಬೋಧನೆ ಜತೆಗೆ ಶಿಕ್ಷಣ ಇಲಾಖೆಯ ಪಠ್ಯಕ್ರಮವನ್ನೂ ಅಳವಡಿಸುವ ಬಗ್ಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಆಸಕ್ತಿ ತೋರಿದೆ. ಮದರಸಾ ಶಿಕ್ಷಣವನ್ನು ಎಸ್ಸೆಸ್ಸೆಲ್ಸಿಗೆ ತತ್ಸಮಾನ ಎಂದು ಪರಿಗಣಿಸಿ, ಅಲ್ಲಿಂದ ಹೊರ ಬರುವ ವಿದ್ಯಾರ್ಥಿಗಳಿಗೆ ಐಟಿಐನಂಥ ಕೌಶಲ ಆಧಾರಿತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅವಕಾಶ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ. ಕರ್ನಾಟಕದಲ್ಲಿ ಪ್ರಸಕ್ತ 800 ಮದರಸಾಗಳಿವೆ. ರಾಜ್ಯ ಪಠ್ಯಕ್ರಮದ ವಿಜ್ಞಾನ, ಗಣಿತ, ಇಂಗ್ಲಿಷ್ ಕಲಿಸಿ ಹತ್ತನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಖಾಸಗಿಯಾಗಿ ಕೊಡಿಸಿದರೆ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಅಸ್ಸಾಂನಲ್ಲಿ ಮದರಸಾಗಳನ್ನೇ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ. ಇಂಥ ತೀರ್ವನಕ್ಕಿಂತ ಮಧ್ಯಮಮಾರ್ಗ ಕಂಡುಕೊಳ್ಳುವುದು ಉತ್ತಮ. ಮಹಾರಾಷ್ಟ್ರದಲ್ಲಿನ ಮದರಸಾಗಳನ್ನು ಆಧುನೀಕರಣಗೊಳಿಸುವ ನಿರ್ಧಾರವನ್ನು ಅಲ್ಲಿನ ಸರ್ಕಾರ 2013ರಲ್ಲೇ ಕೈಗೊಂಡಿತು. ಆ ಬಳಿಕದ ವರ್ಷಗಳಲ್ಲಿ ಶಿಷ್ಯವೇತನ, ಪ್ರೋತ್ಸಾಹಧನ ಸೇರಿ ಇನ್ನಷ್ಟು ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. ಅಲ್ಲಿ ಧಾರ್ವಿುಕ ಶಿಕ್ಷಣದ ಜತೆಗೆ ಇಂಗ್ಲಿಷ್, ವಿಜ್ಞಾನ, ಗಣಿತವನ್ನು ಕಲಿಸಲಾಗುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಶಿಕ್ಷಕರನ್ನು ನೇಮಿಸ ಲಾಗಿದೆ. ಕರ್ನಾಟಕದಲ್ಲೂ ಈ ಬಗೆಯ ಸುಧಾರಣೆ ಸಾಧ್ಯವಿದೆ. ನೂತನ ಶಿಕ್ಷಣ ನೀತಿಯಿಂದ ಮದರಸಾಗಳಲ್ಲೂ ಬದಲಾವಣೆಯ ಗಾಳಿ ಬೀಸುವಂತೆ ಆಗಲಿ.