ನಗರ- ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಡಾವಣೆ ಅನುಮೋದನೆ ಹಾಗೂ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸುವ ಸಂಬಂಧ ಒಂದೆರಡು ತಿಂಗಳಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಪ್ರಕಟಿಸಿರುವುದು ಚರ್ಚೆಗೆ ಗ್ರಾಸವಾಗಿದೆ. "ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಖಾಸಗಿ ಬಡಾವಣೆಗಳು ನಿರ್ಮಾಣಗೊಂಡಿದ್ದು ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಮತ್ತಿತರ ಮಂಜೂರಾತಿ ಪಡೆದಿಲ್ಲ. ಆದರೂ ಸರ್ಕಾರದಿಂದ ಇವುಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ. ಇವುಗಳನ್ನು ಸಕ್ರಮ ಮಾಡಿ ತೆರಿಗೆ ವ್ಯಾಪ್ತಿಗೆ ತರಲಾಗುವುದು. ಇದರಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಆದಾಯ ಬರುತ್ತದೆ. ಈ ರೀತಿಯ ಅಕ್ರಮ ಕಟ್ಟಡಗಳ ಸಕ್ರಮದಿಂದ ಆಸ್ತಿದಾರರಿಗೆ ಶಾಶ್ವತ ಪರಿಹಾರ ಸಿಗಲಿದೆ' ಎಂಬುದು ಸಚಿವರ ವಿವರಣೆ. ಈ ಅಕ್ರಮ&ಸಕ್ರಮ ವಿವಾದ ಹಿಂದೆಯೂ ಸದ್ದು ಮಾಡಿತ್ತು. ಹೀಗೆ ಅನಧಿಕೃತವಾಗಿ ನಿರ್ಮಾಣಗೊಂಡ ಬಡಾವಣೆ, ಕಟ್ಟಡಗಳನ್ನು ಸರ್ಕಾರವೇ ಸಕ್ರಮಗೊಳಿಸಿದರೆ ತಪು$್ಪಸಂದೇಶ ರವಾನೆಯಾಗುತ್ತದೆ, ಇದರಿಂದ ಮುಂದಿನ ದಿನಗಳಲ್ಲಿ ಅಕ್ರಮಗಳು ಮತ್ತಷ್ಟು ಹೆಚ್ಚುತ್ತವೆ. ಹಾಗಾಗಿ, ಸರ್ಕಾರ ಇಂಥ ನೀತಿಗೆ ಉತ್ತೇಜನ ನೀಡಬಾರದು ಎಂಬುದು ಒಂದು ವಲಯದ ವಾದ.
ಇದು ತುಂಬ ಸೂಕ್ಷ್ಮ ಪ್ರಕರಣ. ಹಾಗಂತ, ಕಗ್ಗಂಟನ್ನು ಬಿಡಿಸದೆ ಇದ್ದರೆ ಭವಿಷ್ಯದಲ್ಲಿ ಸಮಸ್ಯೆಯ ಸ್ವರೂಪ ಮತ್ತಷ್ಟು ಗಂಭೀರವಾಗಬಲ್ಲದು. ಭೂಮಿಯನ್ನು ಕಬಳಿಸಲೆಂದೇ ಕೆಲ ಜಾಲಗಳು ಸಕ್ರಿಯವಾಗಿರುತ್ತವೆ. ಅಂಥ ಜಾಲಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತೊಂದೆಡೆ, ಜೀವನೋಪಾಯಕ್ಕಾಗಿ ಬಡವರು ಅಥವಾ ಕೆಳಮಧ್ಯಮವರ್ಗದವರು ಒಂದಿಷ್ಟು ಜಮೀನನ್ನು ಆಕ್ರಮಿಸಿರುತ್ತಾರೆ. ಇಂಥ ಪ್ರಕರಣಗಳನ್ನು ಮಾನವೀಯತೆ ದೃಷ್ಟಿಯಿಂದ, ಸಂವೇದನೆಯಿಂದ ನೋಡಬೇಕು ಎಂಬ ಅಭಿಪ್ರಾಯವೂ ಸರ್ಕಾರದ ಕಿವಿ ತಲುಪಿದೆ. ಹೀಗಾಗಿ, ಈ ಇಡೀ ಪೇಚನ್ನು ತುಂಬ ವಿವೇಚನೆಯಿಂದ ಬಗೆಹರಿಸಬೇಕು ಮತ್ತು ಎಚ್ಚರಿಕೆಯ ಹೆಜ್ಜೆಯೊಂದಿಗೆ ಮುಂದೆ ಸಾಗಬೇಕು. ಅಕ್ರಮ&ಸಕ್ರಮದ ಎಲ್ಲ ಸಾಧಕ&ಬಾಧಕಗಳನ್ನು ಆಮೂಲಾಗ್ರವಾಗಿ ಅವಲೋಕಿಸಿ, ಸೂಕ್ತ ತೀರ್ಮಾನಕ್ಕೆ ಬರುವುದು ಅಗತ್ಯ. ಅದನ್ನು ಬಿಟ್ಟು, ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಅವಸರದ ತೀರ್ಮಾನಕ್ಕೆ ಮುಂದಾಗುವುದು ಬೇಡ.
ಮುಖ್ಯವಾಗಿ, ಪಟ್ಟಣ ಅಥವಾ ನಗರಗಳ ವಿಸ್ತರಣೆ ಕುರಿತಂತೆ ಸರ್ಕಾರದ ಬಳಿ ಸ್ಪಷ್ಟ ಯೋಜನೆಯಾಗಲಿ, ಸೂಕ್ತ ಚಿಂತನೆಯಾಗಲಿ ಇರದಿರುವುದು ಸಮಸ್ಯೆಗೆ ಪ್ರಮುಖ ಕಾರಣ. ನಿಗದಿತ ಮಾನದಂಡಗಳಿಲ್ಲದ ಪರಿಣಾಮ ನಗರಗಳು ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿವೆ. ವಾಸಸ್ಥಾನಕ್ಕಾಗಿ ಸರ್ಕಾರದ ಅನುಮತಿ ಇಲ್ಲದೆಯೇ ಖಾಸಗಿ ಬಡಾವಣೆಗಳು ತಲೆಎತ್ತುತ್ತಿವೆ. ಕ್ರಮೇಣ, ಸರ್ಕಾರ ಅಲ್ಲಿಂದ ತೆರಿಗೆಯನ್ನೂ ಸಂಗ್ರಹಿಸುತ್ತದೆ, ಸೌಲಭ್ಯಗಳನ್ನೂ ಕಲ್ಪಿಸಬೇಕಾಗುತ್ತದೆ. ಅಂಥ ಸ್ಥಿತಿಯಲ್ಲಿ ಅಕ್ರಮವನ್ನು ಸಕ್ರಮ ಮಾಡುವುದು ಅನಿವಾರ್ಯವಾಗುತ್ತದೆ. ಆದ್ದರಿಂದ, ಮುಂಬರುವ ದಿನಗಳಲ್ಲಾದರೂ ಈ ಬಗ್ಗೆ ಸ್ಪಷ್ಟ ನೀತಿ ರೂಪುಗೊಳ್ಳಬೇಕು. ಭ್ರಷ್ಟಾಚಾರದ ಗೊಡವೆ ಇಲ್ಲದೆ ಇಂಥ ಅನುಮತಿ ಮತ್ತು ನಗರ ವಿಸ್ತರಣೆಯ ಪ್ರಕ್ರಿಯೆಗಳು ಸರಾಗವಾಗಿ ನಡೆಯಬೇಕು. ಅಂಥದ್ದೊಂದು ವ್ಯವಸ್ಥೆ ನಿರ್ಮಾಣ ಮಾಡುವ ಸವಾಲು ಸರ್ಕಾರದ ಮುಂದಿದೆ.