

ಕರೊನಾ ಸೋಂಕು ನಿಯಂತ್ರಣ ಮತ್ತು ಅದಕ್ಕೆ ಪೂರಕವಾಗಿ ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸುವುದು ಭಾರಿ ಸವಾಲನ್ನು ಸೃಷ್ಟಿಸಿದೆ. ಆದ್ದರಿಂದ ಸರ್ಕಾರದ ಆಡಳಿತಯಂತ್ರ ಈ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಪ್ರಯತ್ನಶಿಲವಾಗಿದೆ. ಈ ಬಾರಿ ಹಳ್ಳಿಗಳಿಗೂ ಕರೊನಾ ಸೋಂಕು ಪ್ರವೇಶಿಸಿದ್ದು, ಗ್ರಾಮೀಣಿಗರು ಚಿಂತಿತರಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಪ್ರಸಕ್ತ ವರ್ಷದ ಮುಂಗಾರು ಕೂಡ ಆಡಿಯಿಡಲಿದೆ. ನೈಋತ್ಯ ಮುಂಗಾರು ಮಾರುತಗಳು ಇಂದು ಕೇರಳ ಪ್ರವೇಶಿಸಲಿದ್ದು, ಮಾರುತಗಳು ಪ್ರಬಲವಾದಲ್ಲಿ ಒಂದೆರಡು ದಿನಗಳಲ್ಲಿ ಕರ್ನಾಟಕ ಪ್ರವೇಶಿಸಲಿದೆ. ಒಂದೊಮ್ಮೆ ದುರ್ಬಲವಾದರೆ ವಿಳಂಬವಾಗುವ ಸಾಧ್ಯತೆಯಿದೆ ಎಂಬುದು ಹವಾಮಾನ ಇಲಾಖೆಯ ಅಂದಾಜು. ಕರೊನಾ ವಿರುದ್ಧ ಹೋರಾಟ ಅನಿವಾರ್ಯವಾದರೂ ಸಮತೋಲನ ಸಾಧಿಸುತ್ತ, ಮುಂಗಾರು ಸಿದ್ಧತೆಗೆ ಅಷ್ಟೇ ಒತ್ತು ನೀಡಬೇಕಿದೆ. ಕೃಷಿ, ತೋಟಗಾರಿಕೆ ಹಾಗೂ ಸಂಬಂಧಿತ ಇಲಾಖೆಗಳು, ಅದರ ಸಿಬ್ಬಂದಿ ಪೂರ್ಣಪ್ರಮಾಣದಲ್ಲಿ ಮುಂಗಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು, ರೈತರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಿ ಕೊಡಬೇಕು.
ರೈತರು ಮುಂಗಾರು ಆಗಮನಕ್ಕೆ ಕೆಲ ತಿಂಗಳ ಮುನ್ನವೇ ಸಿದ್ಧತೆ ಆರಂಭಿಸುತ್ತಾರೆ. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯವಾದ ತಯಾರಿ ಮಾಡಿಕೊಂಡು, ಸಕಾಲದಲ್ಲಿ ಮಳೆ ಸುರಿದರೆ ಅವರ ಶ್ರಮ ಸಾರ್ಥಕ. ಈ ಬಾರಿ ಸಾಮಾನ್ಯ ಮುಂಗಾರು ಇರುವುದಾಗಿ ಹವಾಮಾನ ಇಲಾಖೆ ಹೇಳಿರುವುದರಿಂದ ರೈತರಲ್ಲಿ ನಿರೀೆಗಳು ಗರಿಗೆದರಿವೆ. ಉತ್ತಮ ಸಲು, ಅದಕ್ಕೆ ಸೂಕ್ತ ಬೆಲೆ ದೊರೆಯಲಿ ಎಂಬ ಆಶಾಭಾವದಿಂದ ಮುಂಗಾರನ್ನು ಹರ್ಷದಿಂದ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಕೃಷಿ ಚಟುವಟಿಕೆಗಳು ನಿರಾಂತಕವಾಗಿ ಸಾಗುವಂತೆ ಮಾಡಲು ಸರ್ಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ ಮತ್ತು ಸೌಲಭ್ಯಗಳು ರೈತರವರೆಗೆ ಪರಿಣಾಮಕಾರಿಯಾಗಿ ತಲುಪಿಸಬೇಕಿದೆ. ಬಿತ್ತನೆಬೀಜಗಳ ಕೊರತೆಯಾಗದಂತೆ, ಕಾಳಸಂತೆ ಪ್ರವೇಶಿಸದಂತೆ, ರಸಗೊಬ್ಬರ ಸಕಾಲಕ್ಕೆ ಸಿಗುವಂತೆ ಮಾಡಬೇಕಿದೆ. ಜತೆಗೆ, ಸಹಾಯಧನ, ಬೆಳೆಸಾಲದ ಸೌಲಭ್ಯಗಳು ಮಧ್ಯವರ್ತಿಗಳ ಕಿರಿಕಿರಿ ಇಲ್ಲದಂತೆ ರೈತರಿಗೆ ತಲುಪಬೇಕು. ಕೃಷಿ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ ಎಂಬ ಕಳವಳದ ಮಧ್ಯೆಯೇ ಯುವಸಮುದಾಯ ಕೃಷಿಯತ್ತ ಒಲವು ತೋರುತ್ತಿದೆ. ಕಳೆದ ವರ್ಷದ ಲಾಕ್ಡೌನ್ ಹಲವು ಸ್ಥಿತ್ಯಂತರಗಳನ್ನು ಸೃಷ್ಟಿಸಿತು. ನಗರಪ್ರದೇಶಗಳಲ್ಲಿ ಅಭದ್ರತೆಯ ಭಾವದಲ್ಲಿ ಬದುಕು ಸಾಗಿಸುವುದಕ್ಕಿಂತ ಕೃಷಿಯನ್ನು ನಂಬಿ, ಊರುಗಳಲ್ಲಿ ನೆಮ್ಮದಿಯ ನಾಳೆಗಳನ್ನು ಕಂಡುಕೊಂಡರಾಯಿತು ಎಂದು ಸಾಕಷ್ಟು ಯುವಕರು ಗ್ರಾಮಗಳತ್ತ ಮರಳಿದ್ದಾರೆ. ಅಷ್ಟೇ ಅಲ್ಲ, ಕೃಷಿಯಲ್ಲಿ ಹೊಸ ಪ್ರಯೋಗಗಳ ಸಾಹಸಕ್ಕೂ ಮುಂದಾಗಿದ್ದಾರೆ. ಸಾಂಪ್ರದಾಯಿಕ ಪದ್ಧತಿಗಳನ್ನೇ ನೆಚ್ಚಿಕೊಳ್ಳುವುದಕ್ಕಿಂತ ಆದಾಯ ಹೆಚ್ಚಿಸುವ ಕ್ರಮಗಳತ್ತಲೂ ಗಮನ ಹರಿಸುತ್ತಿದ್ದಾರೆ.
ಅಲ್ಲದೆ, ವ್ಯವಸ್ಥಿತವಾಗಿ ಮತ್ತು ಹೊಸ ತಂತ್ರಗಳ ಮೂಲಕ ಕೃಷಿಯಲ್ಲಿ ತೊಡಗಿಕೊಂಡರೆ ಅದು ಲಾಭದಾಯಕ ಎಂಬುದನ್ನು ಹೊಸಪೀಳಿಗೆಯ ಅದೆಷ್ಟೋ ರೈತರು ತೋರಿಸಿಕೊಟ್ಟಿದ್ದಾರೆ. ಇವರ ಉತ್ಸಾಹ ಕುಂದದಂತೆ, ರೈತಸಂಸತಿಯ ವಿಶ್ವಾಸ ಕಡಿಮೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರ ಮತ್ತು ಇಡೀ ವ್ಯವಸ್ಥೆಯ ಮೇಲಿದೆ. ಮುಂಗಾರು ಕೃಷಿಕ್ಷೇತ್ರಕ್ಕೆ, ಆ ಮೂಲಕ ಆರ್ಥಿಕತೆಗೆ ನವಚೈತನ್ಯ ಒದಗಿಸಿ ಕೊಡುತ್ತದೆ. ಆ ನಿಟ್ಟಿನಲ್ಲಿ ರೈತರಲ್ಲಿ ವಿಶ್ವಾಸ ತುಂಬುವ, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವ ಅವಶ್ಯಕತೆ ಇದೆ.