ಸೌಲಭ್ಯ, ಪರಿಹಾರ ಒದಗಿಸಿ: ಕರೊನಾ ವಿರುದ್ಧ ಹೋರಾಡುತ್ತಿರುವ ಸೇನಾನಿಗಳ ಬಗ್ಗೆ ನಿರ್ಲಕ್ಷ್ಯ ಬೇಡ

IMG-20210518-WA0038
Published on

ಕರೊನಾ ಸೋಂಕು ಸೃಷ್ಟಿಸಿರುವ ವಿಷಮ ಪರಿಸ್ಥಿತಿ ಎದುರು ದಿಟ್ಟವಾಗಿ ಹೋರಾಡುತ್ತಿರುವ ಸರ್ಕಾರದ ವಿವಿಧ ಇಲಾಖೆಗಳ ನೌಕರರನ್ನು ‘ಸೇನಾನಿ’ಗಳೆಂದೇ ಗೌರವದಿಂದ ಸಂಬೋಧಿಸಲಾಗುತ್ತಿದೆ. ಆದರೆ, ಬರೀ ಪದಗಳಲ್ಲಿ ಹೊಗಳಿ, ಅವರ ಸುರಕ್ಷತೆ, ಆರೋಗ್ಯ ನಿರ್ಲಕ್ಷಿಸಿದರೆ ಏನು ಫಲ? ಭಾವನಾತ್ಮಕವಾಗಿ ಶ್ಲಾಘಿಸುವುದಕ್ಕಿಂತ ಅವರ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳುವುದು, ಸೌಲಭ್ಯಗಳನ್ನು ಒದಗಿಸಿಕೊಡುವುದು ಈಗಿನ ಅಗತ್ಯ.ಕರೊನಾ ವಿರುದ್ಧ ಹೋರಾಡುತ್ತಿರುವ ಇಂಥ ಸೇನಾನಿಗಳ ಪರಿಶ್ರಮದಿಂದ ಅದೆಷ್ಟೋ ಜನರ ಜೀವ, ಜೀವನ ಉಳಿದಿದೆ. ಆದರೆ, ಕರ್ತವ್ಯದಲ್ಲಿರುವ ಸರ್ಕಾರಿ ನೌಕರರ ಸಾವಿನ ಪ್ರಮಾಣ ಹೆಚ್ಚುತ್ತಿರುವುದು ತೀರಾ ಕಳವಳದ ಸಂಗತಿ. ಎರಡನೇ ಅಲೆಯ ಸಂದರ್ಭವಂತೂ ಮಾರಕವಾಗಿ ಪರಿಣಮಿಸಿದೆ.

ಕೋವಿಡ್ ನಿಯಂತ್ರಣ ಮತ್ತು ಉಪಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದ 394 ಶಿಕ್ಷಕರು ಕರೊನಾಕ್ಕೆ ಬಲಿಯಾಗಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಈ ಪೈಕಿ ಬೆಳಗಾವಿ, ಬೀದರ, ವಿಜಯಪುರ ಜಿಲ್ಲೆಗಳ ಪ್ರಮಾಣ ಹೆಚ್ಚು. ಈ ಕುರಿತಂತೆ ‘ವಿಜಯವಾಣಿ’ ಮೇ 16ರಂದು ವಿಸõತ ವರದಿ ಪ್ರಕಟಿಸಿತ್ತು. ಕ್ವಾರಂಟೈನ್ ಮೇಲುಸ್ತುವಾರಿ, ಸೋಂಕಿತರ ಪ್ರಾಥಮಿಕ ಸಂಪರ್ಕಗಳನ್ನು ಪತ್ತೆ ಹಚ್ಚುವುದು, ರೈಲು ನಿಲ್ದಾಣಗಳಲ್ಲಿ ಕ್ವಾರಂಟೈನ್ ನೋಂದಣಿ ಸೇರಿ ಹಲವು ಕೆಲಸಗಳಿಗೆ 25ರಿಂದ 30 ಸಾವಿರ ಶಿಕ್ಷಕರನ್ನು ನಿಯೋಜಿಸಲಾಗಿದೆ. ಆತಂಕದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಇವರಿಗೆ ಮುಖಗವಸು, ಕೈಗವಸು, ಸ್ಯಾನಿಟೈಜರ್ ಒದಗಿಸಲಾಗಿಲ್ಲ. ಸೂಕ್ತ ಸೌಲಭ್ಯಗಳನ್ನೇ ಒದಗಿಸದೆ, ಕರ್ತವ್ಯಕ್ಕೆ ನಿಯೋಜನೆ ಮಾಡುವುದು ಸೂಕ್ತವಲ್ಲ. ಮೃತ ಶಿಕ್ಷಕರ ಕುಟುಂಬಗಳ ಸ್ಥಿತಿಯಂತೂ ಶೋಚನೀಯ. ಮನೆಗೆ ಆಧಾರವಾಗಿದ್ದವರನ್ನೇ ವಿಧಿ ಕಸಿದುಕೊಂಡಿರುವುದರಿಂದ ಮುಂದೇನು ಎಂದು ತೋಚದಂಥ ಸ್ಥಿತಿ. ವಿಪರ್ಯಾಸವೆಂದರೆ ಸರ್ಕಾರದಿಂದ ಸಿಗಬೇಕಾದ ಪರಿಹಾರ ಧನ ಈ ಕುಟುಂಬಗಳಿಗೆ ಸಿಕ್ಕಿಲ್ಲ. ಸರ್ಕಾರಿ ನೌಕರರು ಕರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟರೆ 30 ಲಕ್ಷ ರೂಪಾಯಿ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ, ಪೊಲೀಸ್ ಇಲಾಖೆಯಲ್ಲಿ ಮಾತ್ರ ಇದು ಜಾರಿಯಾಗಿದೆ. ಮೃತ ಶಿಕ್ಷಕರ ಕುಟುಂಬಗಳಿಗೆ ಪರಿಹಾರ ಒದಗಿಸುವ ಕುರಿತಂತೆ ಯಾವುದೇ ಚರ್ಚೆಯೂ ಸರ್ಕಾರದ ಮಟ್ಟದಲ್ಲಿ ನಡೆದಿಲ್ಲ. ಇತರ ಇಲಾಖೆಗಳಲ್ಲೂ ಪರಿಸ್ಥಿತಿ ಭಿನ್ನವಾಗೇನಿಲ್ಲ. ಹೀಗಿರುವಾಗ, ಮೃತ ನೌಕರರ ಕುಟುಂಬವರ್ಗ ಮುಂದಿನ ಬದುಕನ್ನು ಕಟ್ಟಿಕೊಳ್ಳುವುದು ಹೇಗೆ? ಇಂಥ ಪ್ರಕರಣಗಳನ್ನು ಸರ್ಕಾರ ಮಾನವೀಯ ನೆಲೆಯಿಂದ ನೋಡಿ, ಶೀಘ್ರ ಬಗೆಹರಿಸಬೇಕು.

ಸರ್ಕಾರಿ ನೌಕರರು ಕರ್ತವ್ಯದಲ್ಲಿದ್ದಾಗಲೇ ಮೃತರಾದರೆ ಅವರ ಕುಟುಂಬದ ಅರ್ಹ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬೇಕು ಎಂಬ ನಿಯಮವೂ ಇದೆ. ಇಂದು ಅನೇಕ ಕುಟುಂಬಗಳು ಇಂಥ ಆಧಾರಕ್ಕಾಗಿ ಕಾಯುತ್ತಿವೆ. ಪರಿಹಾರಕ್ಕಾಗಿ, ಅನುಕಂಪದ ಉದ್ಯೋಗಕ್ಕಾಗಿ ಯಾರನ್ನು ಸಂರ್ಪಸಬೇಕು, ಅದರ ಪ್ರಕ್ರಿಯೆ ಏನು ಎಂಬ ಮಾಹಿತಿ ತುಂಬ ಕುಟುಂಬಗಳಿಗೆ ಇಲ್ಲ. ಆಯಾ ಇಲಾಖೆಯ ಹಿರಿಯ ಅಧಿಕಾರಿಗಳೇ ಇಲ್ಲಿ ಕಾಳಜಿ ವಹಿಸಿ, ಅವರ ಸಿಬ್ಬಂದಿ ಕುಟುಂಬವರ್ಗಕ್ಕೆ ನ್ಯಾಯ ಒದಗಿಸಿ ಕೊಡಬೇಕು. ಪರಿಹಾರ ಧನ ಏಕರೂಪದಲ್ಲಿ ಮತ್ತು ಶೀಘ್ರವಾಗಿ ವಿತರಿಸುವ ವ್ಯವಸ್ಥೆ ಆಗಬೇಕು. ಈ ಸೌಲಭ್ಯ ತಲುಪಿಸುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಸೋಮವಾರ ಮಹತ್ವದ ಆದೇಶ ಹೊರಡಿಸಿರುವುದು ಸಮಾಧಾನಕರ ಬೆಳವಣಿಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net