

ದೇಶದ ಕಾರ್ವಿುಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಯತ್ನ ಬಹು ವರ್ಷಗಳ ಬಳಿಕ ನಡೆದಿದೆ. ಕಾರ್ವಿುಕ ಸಂಹಿತೆಗಳಿಗೆ ಸಂಬಂಧಿಸಿದ ಮೂರು ವಿಧೇಯಕಗಳಿಗೆ ಸಂಸತ್ತಿನ ಅನುಮೋದನೆ ಸಿಗುವ ಮೂಲಕ, ಮಹತ್ವದ ಸುಧಾರಣಾಪರ್ವಕ್ಕೆ ಚಾಲನೆ ಸಿಕ್ಕಿದೆ.
‘ಔದ್ಯೋಗಿಕ ಭದ್ರತೆ, ಆರೋಗ್ಯ-ಕೆಲಸದ ಸ್ಥಿತಿಗತಿ ಸಂಹಿತೆ’, ‘ಕೈಗಾರಿಕಾ ಸಂಬಂಧಗಳ ಸಂಹಿತೆ’ ಹಾಗೂ ಸಾಮಾಜಿಕ ಭದ್ರತಾ ಸಂಹಿತೆಗೆ ಬುಧವಾರ ರಾಜ್ಯಸಭೆಯ ಅನುಮೋದನೆಯೂ ದೊರೆತಿದೆ. ಕಾರ್ವಿುಕ ಕ್ಷೇತ್ರದ ಸುಧಾರಣೆ ನಿಟ್ಟಿನಲ್ಲಿ ಈ ಮೂರೂ ವಿಧೇಯಕಗಳು ಮಹತ್ತರ ಪಾತ್ರವಹಿಸುವ ನಿರೀಕ್ಷೆ ಇದೆ.
‘ಬದಲಾದ ವ್ಯಾಪಾರ ಮಾರುಕಟ್ಟೆ ವಾತಾವರಣಕ್ಕೆ ಅನುಗುಣವಾಗಿ ಪಾರದರ್ಶಕ ವ್ಯವಸ್ಥೆ ಒದಗಿಸುವುದು ನಮ್ಮ ಉದ್ದೇಶ’ ಎಂದು ಕೇಂದ್ರ ಕಾರ್ವಿುಕ ಇಲಾಖೆ ರಾಜ್ಯ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ‘ಕೈಗಾರಿಕಾ ಸಂಬಂಧ ಸಂಹಿತೆ ಮಸೂದೆ’ ಕಾರ್ವಿುಕ ಮುಷ್ಕರ ಹಕ್ಕುಗಳನ್ನು ಮೊಟಕುಗೊಳಿಸುವ ಕೆಲ ಷರತ್ತುಗಳನ್ನು ಒಳಗೊಂಡಿದೆ. ಆದರೆ, ಇದು ಮುಷ್ಕರದ ಹಕ್ಕನ್ನು ನಿರ್ಬಂಧಿಸುವುದಲ್ಲ ಎಂಬುದು ಸ್ಪಷ್ಟ. ಪ್ರತಿಭಟನೆ, ಮುಷ್ಕರ ನಡೆಸುವ ಮುನ್ನ ಸಂಸ್ಥೆಗೆ ಕಾರ್ವಿುಕರು 14 ದಿನಗಳ ಪೂರ್ವ ಮಾಹಿತಿ ನೀಡಬೇಕು. ಈ ಅವಧಿಯಲ್ಲಿಯೇ ಸಂಸ್ಥೆ-ಕಾರ್ವಿುಕರು ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬಹುದು.
ಕೈಗಾರಿಕಾ ಸಂಸ್ಥೆಗಳಲ್ಲಿ ಕಾರ್ವಿುಕರ ಮಿತಿಯನ್ನು 100ರಿಂದ 300ಕ್ಕೆ ಏರಿಸುವ ಪ್ರಸ್ತಾಪವೂ ವಿಧೇಯಕದಲ್ಲಿದೆ. ಇದರಿಂದ ಸಂಸ್ಥೆಗಳಲ್ಲಿ ಕಾರ್ವಿುಕರನ್ನು ವಜಾಗೊಳಿಸುವುದಕ್ಕಿಂತ ಹೆಚ್ಚು ಉದ್ಯೋಗವಕಾಶಗಳು ಹುಟ್ಟುಕೊಳ್ಳುತ್ತವೆ ಎಂದು ಸಂಸತ್ತಿನ ಕಾರ್ವಿುಕ ಸ್ಥಾಯಿ ಸಮಿತಿ ಏಪ್ರಿಲ್ನಲ್ಲಿ ಸಲ್ಲಿಸಿದ್ದ ತನ್ನ ವರದಿಯಲ್ಲಿ ಹೇಳಿತ್ತು. ಈ ಅಂಶ ವಿಧೇಯಕದಲ್ಲೂ ಸೇರ್ಪಡೆಯಾಗಿದೆ. ಇದರಿಂದ ಕಾರ್ವಿುಕರ ನೇಮಕ ಹಾಗೂ ವಜಾಗೊಳಿಸುವಿಕೆಗೆ ಸಂಬಂಧಿಸಿ ಸರ್ಕಾರದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಅದಲ್ಲದೆ, ಕಾರ್ವಿುಕ ನೀತಿಯನ್ನು ತಮ್ಮ ರಾಜ್ಯಗಳಿಗೆ ಅನುಗುಣವಾಗಿ ಪರಿಷ್ಕರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ.
ಕಾರ್ವಿುಕರ ಮಿತಿ ಏರಿಕೆಯಿಂದ ಕಾರ್ಖಾನೆಗಳ ಸ್ಥಾಪನೆಗೆ ಉತ್ತೇಜನ ಸಿಗಲಿದ್ದು, ನೌಕರರು, ಕಾರ್ವಿುಕರ ಸಂಖ್ಯೆಯೂ ಹೆಚ್ಚಾಗಲಿದೆ. ಈ ಮೂಲಕ ಉದ್ಯೋಗವಕಾಶ ಹೆಚ್ಚಲಿದೆ ಎಂಬುದು ತಜ್ಞರ ಅಂಬೋಣ. ದೇಶದಲ್ಲಿರುವ ಅಸಂಘಟಿತ ವಲಯ ಕಾರ್ವಿುಕರ ಹಿತರಕ್ಷಣೆಗಾಗಿ ಪ್ರತ್ಯೇಕ ನಿಧಿ ಸ್ಥಾಪಿಸುವುದರ ಜತೆಗೆ, 20ಕ್ಕಿಂತ ಹೆಚ್ಚು ಸಿಬ್ಬಂದಿಯುಳ್ಳ ಪ್ರತಿ ಸಂಸ್ಥೆಯೂ ನೌಕರ ಭವಿಷ್ಯ ನಿಧಿ ಹೊಂದುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಕಾರ್ವಿುಕರಿಗೆ ಅನೂಕುಲವಾಗಲಿದ್ದು, ಮನೋಬಲವೂ ಹೆಚ್ಚಲಿದೆ. ರಾಜ್ಯ ಸರ್ಕಾರಗಳು ಕೂಡ ಕಾರ್ವಿುಕರ ಹಿತವನ್ನೇ ಆದ್ಯತೆಯನ್ನಾಗಿಸಿ, ಸೂಕ್ತ ಅನುಷ್ಠಾನಕ್ಕೆ ಮುಂದಾಗಬೇಕಿದೆ. ಅಲ್ಲದೆ, ಕಾರ್ವಿುಕ ವರ್ಗದಲ್ಲೂ ಈ ಬಗ್ಗೆ ಸೂಕ್ತ ಅರಿವು ಮೂಡಿಸುವ ಅಗತ್ಯವಿದೆ.