ಸಂಪಾದಕೀಯ: ಶ್ರಮಿಕರಿಗೆ ನೆರವು

editorial
Published on

ಕರೊನಾ ಸೋಂಕಿನ ಹಾವಳಿ ಮತ್ತು ಲಾಕ್​ಡೌನ್​ನಿಂದ ಉದ್ಭವಿಸಿರುವ ಆರ್ಥಿಕ ಸಂಕಷ್ಟದ ವಿರುದ್ಧ ಹೋರಾಡಲು ಇಪ್ಪತ್ತು ಲಕ್ಷ ಕೋಟಿ ರೂ. ಮೊತ್ತದ ವಿಶೇಷ ಪ್ಯಾಕೆಜ್ ಪ್ರಕಟಿಸಿರುವ ಕೇಂದ್ರ ಸರ್ಕಾರ ಸಣ್ಣ ಕೈಗಾರಿಕೆ ಸೇರಿ ಇತರೆ ವಲಯಗಳಿಗೆ ನೀಡಲಾಗಿರುವ ಸಹಾಯ, ಅನುಕೂಲಗಳ ಬಗ್ಗೆ ಬುಧವಾರ ಮಾಹಿತಿ ನೀಡಿತ್ತು. ಈ ಪ್ಯಾಕೇಜಿನ ಎರಡನೇ ಹಂತದ ವಿವರಗಳನ್ನು ಗುರುವಾರ ಪ್ರಕಟಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಮಹತ್ವದ ಘೋಷಣೆಗಳನ್ನು ಹೊರಡಿಸಿದ್ದಾರೆ. ವಲಸೆ ಕಾರ್ವಿುಕರು, ಬೀದಿಬದಿ ವ್ಯಾಪಾರಿಗಳು, ಸಣ್ಣ ಉದ್ಯಮದಾರರು, ಸ್ವಯಂ ಉದ್ಯೋಗಿಗಳು, ಸಣ್ಣ ಹಿಡುವಳಿ ರೈತರಿಗೆ ನೆರವಿನ ಹಸ್ತ ಚಾಚಲಾಗಿದ್ದು, ಖಂಡಿತವಾಗಿಯೂ ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕೋಟ್ಯಂತರ ಕುಟುಂಬಗಳಿಗೆ ನೆರವಾಗಲಿದೆ ಮತ್ತು ಈ ಸಂಕಷ್ಟದಿಂದ ಹೊರಬರಲು ಸಹಾಯ ಮಾಡಲಿದೆ.

ಕೃಷಿ ಉತ್ಪಾದನೆ ಹೆಚ್ಚಳಕ್ಕೆ 6700 ಕೋಟಿ ರೂ. ಒದಗಿಸಲಾಗಿದ್ದು, ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಬೀದಿ ವ್ಯಾಪಾರಿಗಳಿಗಾಗಿ  5 ಸಾವಿರ ಕೋಟಿ ರೂ. ವಿಶೇಷ ಸಾಲ ಸೌಲಭ್ಯ ಒದಗಿಸಲಾಗಿದೆ. ಇದರಿಂದ 50 ಲಕ್ಷ ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯಾಪ್ತಿಗೆ ಮೀನುಗಾರರು ಮತ್ತು ಪಶು ಸಂಗೋಪನೆ ನಡೆಸುತ್ತಿರುವವರನ್ನೂ ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ 2.5 ಕೋಟಿ ರೈತರಿಗೆ ಲಾಭವಾಗಲಿದೆ. ಅಲ್ಲದೆ, ನರೇಗಾ ಯೋಜನೆಯಡಿ ಕನಿಷ್ಠ ವೇತನವನ್ನು 182ರಿಂದ 202 ರೂ.ಗೆ  ಹೆಚ್ಚಿಸಲಾಗಿದೆ. ಮುಖ್ಯವಾಗಿ, ಪಡಿತರ ಚೀಟಿ ಹೊಂದಿರದ ವಲಸೆ ಕಾರ್ವಿುಕರಿಗೆ ಎರಡು ತಿಂಗಳು ಉಚಿತ ಆಹಾರ ಧಾನ್ಯ ಸಿಗಲಿದ್ದು, 8 ಕೋಟಿ ವಲಸೆ ಕಾರ್ವಿುಕರಿಗೆ ಪ್ರಯೋಜನವಾಗಲಿದೆ. ‘ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್’ ಯೋಜನೆ ಪ್ರಗತಿಯಲ್ಲಿದ್ದು, ಆಗಸ್ಟ್ ಹೊತ್ತಿಗೆ ಶೇಕಡ 83ರಷ್ಟು ಪಡಿತರ ಚೀಟಿಗಳು ಇದಕ್ಕೆ ಅನ್ವಯವಾಗಲಿವೆ. ಗ್ರಾಮೀಣ ಭಾಗದ ಬಡವರಿಗಾಗಿ ಕಳೆದ ಎರಡು ತಿಂಗಳಲ್ಲೇ 7200 ಸ್ವಸಹಾಯ ಗುಂಪುಗಳನ್ನು ಆರಂಭಿಸಲಾಗಿದೆ.

ಕೈಗಾರಿಕೆಗಳತ್ತ ಮಾತ್ರ ಗಮನ ನೀಡಿರುವ ಸರ್ಕಾರ ವಲಸೆ ಕಾರ್ವಿುಕರು ಮತ್ತು ಸಣ್ಣ ರೈತರ ಬಗ್ಗೆ ಯೋಚಿಸಿಲ್ಲ ಎಂದು ಪ್ರತಿಪಕ್ಷಗಳು ಆರೋಪ ಮಾಡಿದ್ದವು. ಆದರೆ, ಪ್ಯಾಕೇಜ್ ಬಹುತೇಕ ಎಲ್ಲ ವಲಯಗಳನ್ನು ಒಳಗೊಂಡಿದ್ದು, ತೀರಾ ಸಂಕಷ್ಟದಲ್ಲಿ ಇರುವವರಿಗೆ ನೆರವು ಘೋಷಿಸಲಾಗಿದೆ. ಶ್ರಮಿಕರ ಬದುಕು ಮತ್ತೆ ಹಳಿಗೆ ಬರುವಂತಾದರೆ ಅದರಿಂದ ಕ್ರಮೇಣ ಆರ್ಥಿಕತೆಯೂ ಚೇತರಿಸಿಕೊಳ್ಳುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ವಲಸೆ ಕಾರ್ವಿುಕರಿಗೆ ಅವರಿರುವ ಅಥವಾ ಅವರು ವಾಪಸ್ ಬಂದಿರುವ ಸ್ಥಳಗಳಲ್ಲೇ ಕೆಲಸ ನೀಡಲು ಒಲವು ತೋರಲಾಗಿದೆ. ಆದರೆ, ಇಂಥ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿ ಆಗಬೇಕಾದರೆ ರಾಜ್ಯ ಸರ್ಕಾರಗಳೂ ಮಹತ್ವದ ಪಾತ್ರ ವಹಿಸಬೇಕಾಗುತ್ತದೆ.

ಘೋಷಣೆಗಳಂತೂ ಪ್ರಯೋಜನಕಾರಿಯಾಗಿವೆ. ಇವುಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸುವ ಮತ್ತು ಆ ಮೂಲಕ ಶ್ರಮಿಕರ, ರೈತರ ಬದುಕಿಗೆ ಭರವಸೆ ತುಂಬುವಂಥ ಕಾರ್ಯವನ್ನು ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಸಮನ್ವಯದಿಂದ ಹಾಗೂ ಅಷ್ಟೇ ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net