ಸಂಪಾದಕೀಯ: ಅವಕಾಶದ ಸದ್ಬಳಕೆ

sadbalake
Published on

ದ್ಯಮ, ವ್ಯವಹಾರದ ವಲಯದಲ್ಲಿ ಕರೊನಾ ಸೋಂಕಿನ ಹಾವಳಿ ದೊಡ್ಡ ಸ್ಥಿತ್ಯಂತರವನ್ನೇ ಸೃಷ್ಟಿಸಿದೆ. ಅದರಲ್ಲೂ, ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕ ಪರಿಸ್ಥಿತಿ ಇನ್ನಷ್ಟು ಬದಲಾಗಲಿದ್ದು, ಉದ್ಯಮವಲಯ ಹೂಡಿಕೆಯ ಅವಕಾಶಗಳಿಗಾಗಿ ಹೊಸ ಮತ್ತು ಸುರಕ್ಷಿತ ಸ್ಥಳಗಳನ್ನು ಅರಸಲಿದೆ. ಮೊದಲು ಕರೊನಾ ಸೋಂಕು ಕಾಣಿಸಿಕೊಂಡ ಚೀನಾ ದೇಶ ಪ್ರಸಕ್ತ ಖಳನಾಯಕನ ಸ್ಥಾನದಲ್ಲಿ ನಿಂತಿದ್ದು, ಜಗತ್ತಿನ ಪ್ರಮುಖ ರಾಷ್ಟ್ರಗಳು ತಮ್ಮ ಕಂಪನಿಗಳನ್ನು ಅಲ್ಲಿಂದ ವಾಪಸ್ ಕರೆಸಿಕೊಳ್ಳುತ್ತಿವೆ. ಉತ್ಪಾದನಾ ವಲಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದ ಚೀನಾಕ್ಕೆ ಇದರಿಂದ ಮುಂಬರುವ ದಿನಗಳಲ್ಲಿ ಆಘಾತ ಕಾದಿರುವುದು ನಿಜ. ಅಲ್ಲದೆ, ಕರೊನೋತ್ತರ ಪರಿಸ್ಥಿತಿಯಲ್ಲಿ ಇತರೆ ದೇಶಗಳಿಗೆ ಅವಕಾಶಗಳೂ ಇದ್ದು, ಭಾರತ ಈಗಾಗಲೇ ಆ ನಿಟ್ಟಿನಲ್ಲಿ ಗಮನ ಹರಿಸಿದೆ. ಕರ್ನಾಟಕ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಿದೆ.

ರಾಜ್ಯದಲ್ಲಿ ಹೂಡಿಕೆಯ ಕ್ಷೇತ್ರ ಗುರುತಿಸುವುದು, ಬಂಡವಾಳ ಆಕರ್ಷಣೆಗೆ ಅಗತ್ಯ ವಿಶೇಷ ಪ್ರೋತ್ಸಾಹಧನದ ಪ್ಯಾಕೇಜ್ ರೂಪಿಸುವುದು, ಮೂಲ ಸವಲತ್ತುಗಳು ಸೇರಿ ಕೈಗಾರಿಕಾ ವಸಾಹತು ಮೀಸಲು, ಬಂಡವಾಳ ಹೂಡಿಕೆ ಉತ್ತೇಜಿಸುವುದಕ್ಕೆ ಪೂರಕವಾಗಿ ತ್ವರಿತ ಅನುಮೋದನೆ ಪ್ರಕ್ರಿಯೆ ಇತ್ಯಾದಿ ಅಗತ್ಯ ಕ್ರಮಗಳನ್ನು ಈ ಕಾರ್ಯಪಡೆ ನಿರ್ವಹಿಸಲಿದೆ. ಕೈಗಾರಿಕೆಗಳಿಗೆ ಪೂರಕವಾದ ವಾತಾವರಣವನ್ನು ರಾಜ್ಯ ಹೊಂದಿದ್ದು, ಚೀನಾದಿಂದ ಹೊರಹೋಗುವ ಕಂಪನಿಗಳನ್ನು ಸೆಳೆದರೆ ಉದ್ಯೋಗಸೃಷ್ಟಿ ನಿಟ್ಟಿನಲ್ಲೂ ಮಹತ್ವದ ಕ್ರಮ ಕೈಗೊಂಡಂತೆ ಆಗುತ್ತದೆ. ಈ ಬೆಳವಣಿಗೆಗಳು ಸಾಧ್ಯವಾಗಬೇಕಾದಲ್ಲಿ ವ್ಯವಸ್ಥೆಯಲ್ಲಿನ ಅಪಸವ್ಯಗಳು, ಅನವಶ್ಯಕ ತೊಂದರೆಗಳು ದೂರವಾಗಬೇಕು.

ಎಲ್ಲ ದಾಖಲಾತಿಗಳು ಸರಿ ಇದ್ದರೂ ಅನುಮತಿ ನೀಡಲು ಅಧಿಕಾರಶಾಹಿಯ ವಿಳಂಬಧೋರಣೆ, ಲಂಚಕ್ಕಾಗಿ ಕೈಯೊಡ್ಡುವುದು, ಅನವಶ್ಯಕ ಅಲೆದಾಟಕ್ಕೆ ಗುರಿಯಾಗಿಸುವುದು ಹೀಗೆ ಹಲವು ತೊಂದರೆಗಳು ರಾಜ್ಯದಲ್ಲಿ ಈ ಹಿಂದೆಯೂ ಢಾಳಾಗಿ ಕಂಡುಬಂದಿವೆ. ‘ರೆಡ್ ಟೇಪಿಸಂ’ ಎಂದೇ ಕರೆಯಲ್ಪಡುವ ಈ ಪಿಡುಗು ನಿವಾರಣೆಯಾಗದೆ ಉದ್ಯಮಸ್ನೇಹಿ ವಾತಾವರಣ ರೂಪುಗೊಳ್ಳಲು ಸಾಧ್ಯವಿಲ್ಲ. ಒಂದೆಡೆ ಸರ್ಕಾರ ಉದ್ಯಮಿಗಳ ಮನವೊಲಿಸಿ ಕರೆತಂದರೂ, ಅಧಿಕಾರಶಾಹಿಯ ಧೋರಣೆಯಿಂದ ಅವರು ಮತ್ತೊಂದು ಕಡೆ ಮುಖ ಮಾಡಿದರೆ ಅದಕ್ಕಿಂತ ಹಿನ್ನಡೆ ಬೇರೊಂದಿಲ್ಲ. ಈಗಾಗಲೇ ಕರೊನಾ ಹಾವಳಿ, ಲಾಕ್​ಡೌನ್ ಭಾರಿ ಆರ್ಥಿಕ ನಷ್ಟವನ್ನು ತಂದೊಡ್ಡಿದೆ. ಇದರಿಂದ ಚೇತರಿಕೆ ಕಾಣಬೇಕಾದರೆ ಹೊಸ ಉದ್ಯಮಗಳನ್ನು ತರುವುದು, ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವುದು, ಅಂಥ ದೇಶೀಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು,

ಕಚ್ಚಾವಸ್ತುಗಳ ಪೂರೈಕೆ ಸೇರಿ ಹಲವು ಕ್ರಮಗಳನ್ನು ಕ್ರಿಪ್ರವಾಗಿ ಕೈಗೊಳ್ಳಬೇಕಾಗಿ ರುವುದು ಕಾಲದ ಅಗತ್ಯ. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಲೋಚನೆ ಮಾಡಿ ಕಾರ್ಯಪಡೆ ರಚಿಸಿರುವುದು ಉತ್ತಮವಾದ ಹೆಜ್ಜೆಯೇ. ಆದರೆ, ಅದು ಇಷ್ಟಕ್ಕೆ ಸೀಮಿತವಾದರೆ ಪ್ರಯೋಜನವಿಲ್ಲ. ರೆಡ್ ಟೇಪಿಸಂಗೆ ಕೊನೆ ಹಾಡಿ, ಶೀಘ್ರ ಅನುಮೊದನೆ, ಮೂಲಸೌಕರ್ಯ ವಿಸ್ತರಣೆಯಂಥ ಕ್ರಮಗಳನ್ನು ಕೈಗೊಂಡರೆ ಮುಂದಿನ ದಿನಗಳಲ್ಲಿ ರಾಜ್ಯ ಉದ್ಯಮದ ನಕ್ಷೆಯಲ್ಲಿ ಗಮನ ಸೆಳೆಯಬಲ್ಲದು. ಸಂಕಷ್ಟ ಸಮಯದಲ್ಲಿ ಬಂದ ಅವಕಾಶವೊಂದನ್ನು ಸದುಪಯೋಗ ಪಡಿಸಿಕೊಂಡ ಹಿರಿಮೆಗೆ ಪಾತ್ರವಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net