

ಕರೊನಾ ಸೋಂಕಿನ ಹಾವಳಿಯಿಂದ ಲಾಕ್ಡೌನ್ ಜಾರಿಯಾಗಿ ಹೆಚ್ಚುಕಡಿಮೆ ಒಂದೂವರೆ ತಿಂಗಳಾಗಿದೆ. ಈ ದೀರ್ಘಾವಧಿಯಲ್ಲಿ ವ್ಯಾಪಾರ-ಉದ್ದಿಮೆ ವಲಯದ ಬಹುತೇಕ ಎಲ್ಲರೂ ಭಾರಿ ನಷ್ಟ ಅನುಭವಿಸಿದ್ದಾರೆ. ಅದರಲ್ಲೂ ಸಣ್ಣ ವ್ಯಾಪಾರಿಗಳು, ಆಯಾ ದಿನದ ದುಡಿಮೆಯನ್ನೇ ಅವಲಂಬಿಸುವ ಕೆಲ ವೃತ್ತಿಪರರ ಸಂಕಷ್ಟ ಅಷ್ಟಿಷ್ಟಲ್ಲ. ಜನರ ಸ್ಥಿತಿ ಹೀಗಿರಬೇಕಾದರೆ ತೆರಿಗೆ ಸಂಗ್ರಹದ ಕೊರತೆ, ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸದ ಸ್ಥಿತಿಯೂ ಶೋಚನೀಯವೇ. ಆದರೂ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಸಕಾಲದಲ್ಲಿ ಸಹಾಯಕ್ಕೆ ನೆರವಾಗುವುದು ಪ್ರಭುತ್ವದ ಹೊಣೆಗಾರಿಕೆ ಆಗಿರುತ್ತದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆ ಇರಿಸುವ ಮೂಲಕ, ಕರೊನಾ ಸಂಕಷ್ಟದಿಂದ ಬಳಲಿರುವ ಶ್ರಮಿಕ ವರ್ಗಕ್ಕೆ ತಾತ್ಕಾಲಿಕ ಪರಿಹಾರ ಕೊಟ್ಟಿದೆ. ಸಣ್ಣ ಕೈಗಾರಿಕಾ ವಲಯದ ಹಿತವನ್ನೂ ಗಮನದಲ್ಲಿ ಇರಿಸಿಕೊಂಡು, ಕೆಲ ಕ್ರಮಗಳನ್ನು ಘೋಷಿಸಿದೆ.
ಬುಧವಾರ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 1610 ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಮುಂದಿನ ಒಂದು ವಾರದೊಳಗೆ ಆರ್ಥಿಕ ನೆರವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಹಾಗೆಯೇ ಪ್ರತಿ ಕುಟುಂಬಕ್ಕೂ ಅನ್ವಯವಾಗುವಂತೆ ವಿದ್ಯುತ್ಬಿಲ್ ಪಾವತಿ ವಿಚಾರದಲ್ಲಿ ಮಹತ್ವದ ತೀರ್ಮಾನ ಮಾಡಲಾಗಿದೆ.
ಮುಖ್ಯವಾಗಿ, ಚಾಲಕರು, ರೈತರು, ಮಡಿವಾಳ ಮತ್ತು ಸವಿತಾ ಸಮಾಜ, ಕಟ್ಟಡ ಕಾರ್ವಿುಕ, ನೇಕಾರರಿಗೆ ಆಪತ್ಕಾಲದಲ್ಲಿ ನೆರವಾಗಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಪ್ರತಿಪಕ್ಷಗಳೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿವೆ. ಬೇಡಿಕೆ ಇಲ್ಲದೆ ಬೆಳೆಗಾರರು ತಾವು ಬೆಳೆದಿರುವ ಎಲ್ಲ ಹೂವುಗಳನ್ನು ಹೊಲದಲ್ಲೇ ನಾಶ ಮಾಡುವ ಪರಿಸ್ಥಿತಿ ಉದ್ಭವಿಸಿರುವುದರಿಂದ ಎಲ್ಲ ರೀತಿಯ ಹೂವುಗಳು ಬೆಳೆದಿರುವ ರೈತರಿಗೆ ನೆರವಾಗಲು ಹೆಕ್ಟೇರ್ಗೆ ಗರಿಷ್ಠ 25 ಸಾವಿರದಂತೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ತರಕಾರಿ ಹಾಗೂ ಹಣ್ಣು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಪ್ಯಾಕೇಜ್ ಘೊಷಣೆಯ ಭರವಸೆ ಸಿಕ್ಕಿದೆ. ಅಗಸರಿಗೆ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರಿಗೆ ಒಂದು ಬಾರಿಗೆ ತಲಾ ಐದು ಸಾವಿರ ರೂ., 7.75 ಲಕ್ಷ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ ಐದು ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ. ನೇಕಾರರಿಗೂ ಹೊಸ ಯೋಜನೆ ಘೋಷಿಸಲಾಗಿದೆ. ಸಣ್ಣ, ಅತಿಸಣ್ಣ ಹಾಗೂ ದೊಡ್ಡ ಕೈಗಾರಿಕೆಗಳ ನೆರವಿಗೆ ಬಂದಿರುವುದರಿಂದ ಆರ್ಥಿಕ ಚಟುವಟಿಕೆಗಳಿಗೆ ಪುನಶ್ಚೇತನ ದೊರೆಯಲಿದೆ. ಆರ್ಥಿಕ ಪ್ಯಾಕೇಜ್ನಿಂದ ರೈತರಿಗೆ, ವಿವಿಧ ವ್ಯಾಪಾರಿವರ್ಗದವರಿಗೆ ಅನುಕೂಲವಾಗಲಿದೆ. ಸರ್ಕಾರದ ಈ ನೆರವು, ಪ್ರೋತ್ಸಾಹವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು, ಸದ್ಯ ಬಂದೋದಗಿರುವ ಸಮಸ್ಯೆ ಯಿಂದ ಹೊರಬರಲು ಜನರು ಯತ್ನಿಸಬೇಕು. ನಿಜವಾದ ಫಲಾನುಭವಿಗಳಿಗೇ ನೆರವು ತಲುಪುವಂತೆ ನೋಡಿಕೊಳ್ಳುವುದು ಅಧಿಕಾರಿವರ್ಗದ ಜವಾಬ್ದಾರಿ. ಈ ಘೋಷಣೆಗಳು ಪರಿಣಾಮಕಾರಿಯಾಗಿ ಹಾಗೂ ಪ್ರಾಮಾಣಿಕ ನೆಲೆಗಟ್ಟಿನಲ್ಲಿ ಜಾರಿಯಾದಲ್ಲಿ ಸಂಕಷ್ಟದಲ್ಲಿರುವ ಜನಜೀವನಕ್ಕೆ ಕೊಂಚ ನೆಮ್ಮದಿ.