

ಕರೊನಾ ಮಹಾಮರಿ ತಂದೊಡ್ಡಿರುವ ಸಂಕಷ್ಟಗಳು ಒಂದೇರಡಲ್ಲ. ಲಾಕ್ಡೌನ್ ಅವಧಿ ಒಂದು ತಿಂಗಳು ಮೀರಿರುವುದರಿಂದ ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗಿವೆ. ಎಲ್ಲ ಬಗೆಯ ಕೈಗಾರಿಕೆಗಳು ಅದರಲ್ಲೂ, ಸಣ್ಣ ಕೈಗಾರಿಕೆಗಳು ಭಾರಿ ಹಾನಿ ಅನುಭವಿಸಿರುವುದರಿಂದ ಭವಿಷ್ಯದ ಬಗ್ಗೆ ಅನಿಶ್ಚಿತತೆ ಮನೆಮಾಡಿದೆ. ಅಷ್ಟಕ್ಕೂ, ಕರೊನಾ ಹಾವಳಿ ಆರಂಭವಾಗುವುದಕ್ಕೂ ಮುನ್ನವೇ ಜಾಗತಿಕ ಆರ್ಥಿಕ ಹಿಂಜರಿತ ಕಾಣಿಸಿಕೊಂಡಿತು. ಅದರ ಪರಿಣಾಮ ಭಾರತದ ಮೇಲೂ ಆಗಿ, ನಿರುದ್ಯೋಗ ಪ್ರಮಾಣ ಏರಿಕೆ ಆಯಿತು. ಆ ಸ್ಥಿತಿಯೊಂದಿಗೆ ಹೋರಾಡಬೇಕು, ಉದ್ಯೋಗಸೃಷ್ಟಿಗೆ ಒತ್ತು ನೀಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಗಳು ಆರಂಭಿಸುವಷ್ಟರಲ್ಲೇ ಕರೊನಾದ ಸಂಕಷ್ಟ ಎಲ್ಲ ಲೆಕ್ಕಾಚಾರಗಳನ್ನೂ ತಲೆಕೆಳಗೆ ಮಾಡಿತು. ಒಂದೆಡೆ, ಈಗಾಗಲೇ ಉದ್ಯೋಗದಲ್ಲಿ ಇರುವವರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಮತ್ತೊಂದೆಡೆ, ಶೈಕ್ಷಣಿಕ ಪಯಣ ಪೂರ್ಣಗೊಳಿಸಿ ಉದ್ಯೋಗಕ್ಕೆ ಕಾಯುತ್ತಿದ್ದ ಯುವಸಮುದಾಯಕ್ಕೂ ನಿರಾಸೆಯಾಗಿದೆ. ಈ ವರ್ಷ ಲಕ್ಷಾಂತರ ಪದವೀಧರರ ವೃತ್ತಿಜೀವನ ಅರಳುವ ಮುನ್ನವೇ ಬಾಡುವ ಅಪಾಯಕ್ಕೆ ಸಿಲುಕಿಕೊಂಡಿದೆ ಎಂಬುದು ಕಟುಸತ್ಯ.
ಆರ್ಥಿಕ ಸಂಕಷ್ಟದಿಂದಾಗಿ ಹಲವು ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗಿಗಳ ವೇತನಕ್ಕೆ ಕತ್ತರಿ ಹಾಕುವ ಜತೆಗೆ, ಸಾವಿರಾರು ನೌಕರರನ್ನು ಮನೆಗೆ ಕಳುಹಿಸಿವೆ. ಈ ನಡುವೆ ಕ್ಯಾಂಪಸ್ ಸಂದರ್ಶನ ಮುಗಿಸಿ ಉದ್ಯೋಗದ ಭರವಸೆ ನೀಡಿದ್ದ ಕೆಲವು ಸಂಸ್ಥೆಗಳು ನೇಮಕಾತಿಗೆ ನಿಗದಿ ಮಾಡಿದ್ದ ದಿನಾಂಕವನ್ನು ಎರಡು-ಮೂರು ತಿಂಗಳಿಗೆ ಮುಂದೂಡಿವೆ. ಹಾಗಾಗಿ, ಈ ವರ್ಷ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಸೇರಿ ಹಲವಾರು ಕೋರ್ಸ್ಗಳನ್ನು ಮುಗಿಸಿದ ಅಭ್ಯರ್ಥಿಗಳಿಗೆ ನಿರುದ್ಯೋಗದ ಆತಂಕ ಕಾಡುತ್ತಿದೆ. ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವೀಧರರಾಗಿ ಹೊರಹೊಮ್ಮುತ್ತಿದ್ದು, ಈ ಪೈಕಿ ಶೇಕಡ 50-60ರಷ್ಟು ಅಭ್ಯರ್ಥಿಗಳಿಗೆ ಮಾತ್ರ ಕೆಲಸ ಸಿಗುತ್ತಿದೆ. ಈ ವರ್ಷ ಅದಕ್ಕೂ ಸಂಚಕಾರ ಕಾದಿದೆ. ಆರ್ಥಿಕ ಸಂಕಷ್ಟದ ಕಾಮೋಡ ಶೀಘ್ರದಲ್ಲೇ ನಿವಾರಣೆ ಆಗುವ ಸಾಧ್ಯತೆ ಇಲ್ಲದಿರುವುದರಿಂದ, ಹೊಸ ನೇಮಕಾತಿ ಪ್ರಕ್ರಿಯೆಗಳೆಲ್ಲ ನನೆಗುದಿಗೆ ಬೀಳಲಿವೆ.
ಪರಿಸ್ಥಿತಿ ಹೀಗಿರುವಾಗ ಉದ್ಯೋಗ ಹುಡುಕಾಟಕ್ಕೇ ಅಂಟಿಕೊಳ್ಳದೆ ಹೊಸ ಮಾರ್ಗಗಳನ್ನೂ ಶೋಧಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸ್ವಾವಲಂಬನೆಯ ಮಂತ್ರವನ್ನು ಜಪಿಸಿದ್ದು, ಈ ನಿಟ್ಟಿನಲ್ಲಿ ಯೋಚಿಸುವಂತೆ ಯುವಸಮುದಾಯಕ್ಕೆ ಕರೆ ನೀಡಿದ್ದಾರೆ. ಭಾರತ ಅಪಾರ ಮಾನವ ಸಂಪನ್ಮೂಲ ಮತ್ತು ವಿಶಾಲ ಮಾರುಕಟ್ಟೆ ಹೊಂದಿರುವ ದೇಶವಾಗಿದ್ದು, ನವೋದ್ಯಮಗಳಿಗೆ ಹೇರಳ ಅವಕಾಶ ಹೊಂದಿದೆ. ಹಾಗೆಯೇ, ಗ್ರಾಮೀಣ ಪ್ರದೇಶದಲ್ಲಿ ಗುಡಿ ಕೈಗಾರಿಕೆಗಳ ಸ್ಥಾಪನೆ, ಸ್ವಾವಲಂಬನೆಯ ಜತೆಗೆ ಗ್ರಾಮೀಣ ಆರ್ಥಿಕತೆಗೂ ಬಲ ತುಂಬಬಹುದು. ಕೃಷಿಗೆ ಸಂಬಂಧಪಟ್ಟ ನವೋದ್ಯಮಗಳಿಗಂತೂ ಭಾರಿ ಬೇಡಿಕೆ ಇದೆ. ಈ ಕ್ಷೇತ್ರದಲ್ಲಿ ಈಗಾಗಲೇ ಸಾಧನೆ ಮಾಡಿದ ಯುವಕ/ಯುವತಿಯರೂ ಸಮಾಜದಲ್ಲಿ ಮಾದರಿ ಆಗಿದ್ದಾರೆ. ಹಾಗಾಗಿ, ಕೆಲಸವೇ ಸಿಗುವಂಥ ವಾತಾವರಣ ಇಲ್ಲ ಎಂದು ಕೊರಗುವುದಕ್ಕಿಂತ ನಮ್ಮದೇ ಹಾದಿಯನ್ನು ನಿರ್ವಿುಸಿಕೊಂಡು, ಸ್ವಉದ್ಯೋಗದತ್ತ ಗಮನ ಹರಿಸುವುದು ಸೂಕ್ತ.