ಲಾಕ್​ಡೌನ್​ ಸಡಿಲಿಕೆ ದುರುಪಯೋಗ ಆಗದಿರಲಿ: ವಿಜಯವಾಣಿ ಸಂಪಾದಕೀಯ

edt april
Published on

ರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಸಮರದಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರ ಮೇಲೆ ಹೆಚ್ಚುತ್ತಿರುವ ಹಲ್ಲೆ, ದೌರ್ಜನ್ಯದ ಘಟನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿವೆ. ಇಂಥ ಘಟನೆಗಳಿಂದ ಕರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸೇನಾನಿಗಳ ಮನೋಸ್ಥೈರ್ಯ ಕುಂದಬಹುದು ಎಂಬುದನ್ನು ಗ್ರಹಿಸಿ, ಕಠಿಣ ಕ್ರಮಕ್ಕೆ ಮುಂದಾಗಿವೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅಂಗೀಕಾರ ಸಿಕ್ಕಿದೆ. 1897ರ ಸಾಂಕ್ರಾಮಿಕ ರೋಗಗಳ ಕಾನೂನಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ತಿದ್ದುಪಡಿಯಾದ ಕಾನೂನಿನ ಅನ್ವಯ, ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವವರಿಗೆ ಗರಿಷ್ಠ ಏಳು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿಯ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಹಲ್ಲೆಯನ್ನು ಜಾಮೀನುರಹಿತ ಅಪರಾಧ ಎಂದು ಸುಗ್ರೀವಾಜ್ಞೆಯಲ್ಲಿ ಪರಿಗಣಿಸಲಾಗಿದೆ.

ಮತ್ತೊಂದೆಡೆ, ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ಕಾನೂನಿಗೆ, ‘ಕರ್ನಾಟಕ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಅಧ್ಯಾದೇಶ, 2020’ ಎಂದು ಕರೆಯಲಾಗಿದೆ. ಸರ್ಕಾರದ ಕಾರ್ಯಾಚರಣೆಗಳಿಗೆ ಅಡ್ಡಿ, ಕರ್ತವ್ಯನಿರತ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ದೌರ್ಜನ್ಯ, ಹಲ್ಲೆ ಎಸಗುವವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸುವ ಕಾನೂನು ಸುಗ್ರೀವಾಜ್ಞೆ ಮೂಲಕ ಜಾರಿಯಾಗಿದೆ. ಹಾಗಾಗಿ, ಇನ್ನಾದರೂ, ಪುಂಡಾಟಿಕೆಗೆ ತಡೆ ಬೀಳಬಹುದು, ಕರೊನಾ ವಿರುದ್ಧ ಸಮರಕ್ಕೆ ಅಸಹಕಾರ ತೋರುತ್ತಿರುವವರ ಮನಸ್ಥಿತಿ ಬದಲಾಗಬಹುದು ಎಂದು ಆಶಿಸಬಹುದು. ಇಂಥದ್ದೊಂದು ಪ್ರಬಲ ಕಾನೂನು ಇಲ್ಲದಿದ್ದಲ್ಲಿ ಹಲ್ಲೆಯಂಥ ಘಟನೆಗಳನ್ನು ನಿಯಂತ್ರಿಸುವುದು ತುಂಬ ಕಷ್ಟಸಾಧ್ಯವಾಗುತ್ತಿತ್ತು. ಪ್ರಸಕ್ತ ಕಾನೂನಿನ ಬಲವು ಕರೊನಾ ವಿರುದ್ಧ ಹೋರಾಡುವವರ ಸ್ಥೈರ್ಯವನ್ನು ಹೆಚ್ಚಿಸಲು ಅನುವಾಗಲಿದೆ.

ಕರೊನಾ ಸೋಂಕಿನ ಹಾವಳಿ ಎಂಥ ದೊಡ್ಡ ಕಷ್ಟವನ್ನು ತಂದೊಡ್ಡಿದೆ ಎಂಬುದಕ್ಕೆ ದೇಶದಾದ್ಯಂತದ ವಿದ್ಯಮಾನಗಳೇ ಸಾಕ್ಷಿ. ಇಂಥ ವಿಪತ್ತಿನ ಸಂದರ್ಭದಲ್ಲಿ ಒಗ್ಗಟ್ಟಿನಿಂದ ಹೋರಾಡುವುದೇ ಆದ್ಯತೆ ಆಗಬೇಕಿದೆ. ಲಾಕ್​ಡೌನ್​ನಿಂದ ಜನರ ಸಂಕಷ್ಟ ಕಡಿಮೆ ಮಾಡಲು ಕೆಲವು ವಿನಾಯ್ತಿಗಳನ್ನು ಸರ್ಕಾರ ಘೋಷಿಸಿದೆ. ಈ ಕ್ರಮ ಅನಿವಾರ್ಯ, ಅಗತ್ಯ ಸೇವೆಗಳಿಗೆ ಪೂರಕವಾಗಿ ಪರಿಣಮಿಸಬೇಕು. ಆದರೆ, ಕೆಲವರು ಈ ವಿನಾಯ್ತಿಯ ನೆಪದಲ್ಲಿ ಅಗತ್ಯವಿಲ್ಲದಿದ್ದರೂ ಮನೆಯಿಂದ ಆಚೆ ಬರುತ್ತಿರುವುದು, ಸುಖಾಸುಮ್ಮನೆ ಓಡಾಡುತ್ತಿರುವುದು ಎಷ್ಟೋ ನಗರಗಳಲ್ಲಿ ಕಂಡುಬರುತ್ತಿದೆ. ಹೀಗೆ ಮಾಡಿದಲ್ಲಿ ಅಪಾಯವನ್ನು ನಾವೇ ಆಹ್ವಾನಿಸಿಕೊಂಡಂತೆ. ಮನುಷ್ಯರೇ ವಾಹಕರಾಗಿರುವ ಕರೊನಾ ಸೋಂಕು ವ್ಯಾಪಕವಾಗಿ ಹಬ್ಬಲು ಶುರುವಾದರೆ, ಹರಸಾಹಸ ಪಟ್ಟರೂ ನಿಯಂತ್ರಣಕ್ಕೆ ತರುವುದು ಕಷ್ಟವಾಗುತ್ತದೆ. ಅಂಥ ಸ್ಥಿತಿ ಸೃಷ್ಟಿ ಆಗಬಾರದು ಎಂದರೆ ಜನಸಾಮಾನ್ಯರು ತುಂಬ ಜವಾಬ್ದಾರಿಯಿಂದ ನಡೆದುಕೊಳ್ಳುವ ಜತೆಗೆ, ಸರ್ಕಾರ ವಿಧಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net