

ಏಪ್ರಿಲ್ 14ರವರೆಗೆ ಇದ್ದ ಮೂರು ವಾರಗಳ ದಿಗ್ಬಂಧನ ಪ್ರಸಕ್ತ ಮೇ 3ರವರೆಗೆ ವಿಸ್ತರಣೆ ಆಗಿರುವುದರಿಂದ ಮುಂದೇನು ಎಂಬ ಪ್ರಶ್ನೆ ಮೂಡಿತ್ತು. ಈಗಾಗಲೇ ಆರ್ಥಿಕ ಚಟುವಟಿಕೆಗಳೆಲ್ಲ ಬಂದ್ ಆಗಿ ತಿಂಗಳು ಸಮೀಪಿಸುತ್ತಿರುವುದರಿಂದ ರೈತರು, ದಿನಗೂಲಿ ನೌಕರರು, ವ್ಯಾಪಾರಿಗಳು, ಸಣ್ಣ ಉದ್ಯಮಗಳ ಮಾಲೀಕರು ಚಿಂತಾಕ್ರಾಂತ ರಾಗಿದ್ದಾರೆ.
ಜನರ ಜೀವರಕ್ಷಣೆಗೆ ಸರ್ಕಾರ ಆದ್ಯತೆ ನೀಡಿದೆಯಾದರೂ, ಈ ಹೊತ್ತಲ್ಲಿ ಜೀವರಕ್ಷಣೆ, ಆರ್ಥಿಕತೆಯ ರಕ್ಷಣೆ ಎರಡರ ನಡುವೆ ಸಮತೋಲನ ಸಾಧಿಸುವ ಸವಾಲು ಇದೆ ಎಂಬ ತಜ್ಞರ ಅಭಿಪ್ರಾಯವನ್ನು ಅದು ಪರಿಗಣಿಸಿದೆ. ಮೇ 3ರವರೆಗೂ ದಿಗ್ಬಂಧನ ಜಾರಿಯಲ್ಲಿದ್ದರೂ, ಈ ಅವಧಿಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತಂತೆ ಕೇಂದ್ರ ಸರ್ಕಾರ ಬುಧವಾರ ಕಟ್ಟುನಿಟ್ಟಿನ ಪರಿಷ್ಕೃತ ಮಾರ್ಗದರ್ಶಿ ಸೂತ್ರ ಪ್ರಕಟಿಸಿದೆ.
ಸೋಂಕು ಹರಡುವಿಕೆ ನಿಯಂತ್ರಿಸುವ ಪ್ರಧಾನ ಉದ್ದೇಶ ಮಾತ್ರವಲ್ಲದೆ, ರೈತರು, ಕಾರ್ವಿುಕರು ಹಾಗೂ ದಿನಗೂಲಿಗಳ ಸಂಕಷ್ಟ ನಿವಾರಣೆಗಾಗಿ ಹೆಜ್ಜೆ ಇರಿಸಿದೆ. ಏಪ್ರಿಲ್ 20ರಿಂದ ಗ್ರಾಮ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದ್ದು, ಆಯ್ದ ಕೈಗಾರಿಕೆಗಳು ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಸಿಗಲಿದೆ. ಎಲೆಕ್ಟ್ರಿಷಿಯನ್, ಪ್ಲಂಬರ್, ಕಾರ್ಪೆಂಟರ್, ಮೋಟರ್ ಮೆಕ್ಯಾನಿಕ್ಗಳಿಗೆ ಕೆಲಸ ಮಾಡಲು ಅನುಮತಿ ಸಿಕ್ಕಿದೆ. ಅದೇ ರೀತಿ, ಇ-ಕಾಮರ್ಸ್, ಐಟಿ ಮತ್ತು ಐಟಿ ಅವಲಂಬಿತ ಸೇವೆಗಳು, ಡೇಟಾ ಮತ್ತು ಸರ್ಕಾರಿ ಚಟುವಟಿಕೆಗಳಿಗೆ ಅಗತ್ಯವಾದ ಕಾಲ್ ಸೆಂಟರ್ಗಳ ಕಾರ್ಯನಿರ್ವಹಣೆ ಏಪ್ರಿಲ್ 20ರಿಂದ ಆರಂಭವಾಗಲಿದೆ. ಈ ಕ್ರಮಗಳಿಂದ ಖಂಡಿತವಾಗಿಯೂ ಆರ್ಥಿಕ ಚಟುವಟಿಕೆಗಳು ನಿಧಾನವಾಗಿಯಾದರೂ ಮತ್ತೆ ಜೀವ ಪಡೆಯಲಿವೆ.
ಮುಖ್ಯವಾಗಿ, ಗ್ರಾಮೀಣ ಭಾಗದಲ್ಲಿ ಸಣ್ಣ ಕೈಗಾರಿಕೆಗಳಿಗೆ ಅವಕಾಶ ನೀಡಿರುವ ಪರಿಣಾಮ ಕಾರ್ವಿುಕರು ಸೇರಿ ಇತರರಿಗೆ ಉದ್ಯೋಗ ಸಿಗಲು ಅನುವಾಗಲಿದೆ. ಕೃಷಿ ಚಟುವಟಿಕೆಗಳು ಅಬಾಧಿತವಾಗಿ ಸಾಗಲಿವೆ. ಆಹಾರಧಾನ್ಯಗಳ ಕೊರತೆ ಕಾಡಲಿದೆ ಎಂಬ ಆತಂಕಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ.
ಸರ್ಕಾರ ಸಾಕಷ್ಟು ಪರಾಮಶಿಸಿ, ಅಳೆದುತೂಗಿಯೇ ಈ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಈಗ ಮುಂದಿರುವ ಹಂತ ಇದೆಲ್ಲದರ ಸಮರ್ಪಕ ಜಾರಿ. ದೇಶದಲ್ಲಿ ಕರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಹೀಗಿರುವಾಗ ಕೊಂಚ ಎಡವಿದರೆ, ಎಚ್ಚರ ತಪ್ಪಿದರೆ ಅಥವಾ ಬೇಜವಾಬ್ದಾರಿಯಿಂದ ನಡೆದುಕೊಂಡರೆ ಅದಕ್ಕೆ ತುಂಬ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಆದ್ದರಿಂದ, ಈ ವಿನಾಯ್ತಿಗಳ ಪ್ರಯೋಜನ ಪಡೆಯಲು ಅದಕ್ಕೆ ತಕ್ಕದಾದ ಸಿದ್ಧತೆಗಳನ್ನೂ ಮಾಡಿಕೊಳ್ಳುವುದು ತುಂಬ ಅವಶ್ಯ. ಆಯಾ ರಾಜ್ಯ ಸರ್ಕಾರ, ಸ್ಥಳೀಯ ಆಡಳಿತ, ಸಂಬಂಧಿತ ಉದ್ದಿಮೆ, ಸಂಸ್ಥೆಗಳ ಪಾತ್ರ ಈ ನಿಟ್ಟಿನಲ್ಲಿ ಮುಖ್ಯ. ಸಾಮಾಜಿಕ ಅಂತರ ಕಾಯ್ದುಕೊಂಡು, ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿ ಸರ್ಕಾರ ಸೂಚಿಸಿದ ಮಾರ್ಗಸೂಚಿಯ ಅನ್ವಯ ವ್ಯವಸ್ಥಿತವಾಗಿ ಕೆಲಸಕಾರ್ಯಗಳನ್ನು ನಡೆಸಲು ಅಗತ್ಯವಾಗಿರುವ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಅಭಿವೃದ್ಧಿ ಹಾದಿಯ ತೊಡಕುಗಳು ನಿವಾರಣೆ ಆಗುವಂತೆ ಸಹಕರಿಸಬೇಕು. ಸುರಕ್ಷೆ, ಸ್ವಚ್ಛತೆಗೆ ಆದ್ಯತೆ ನೀಡಬೇಕು.