ವಿಜಯವಾಣಿ ಸಂಪಾದಕೀಯ: ಎಚ್ಚರಿಕೆ ವಹಿಸಿ

editorial 31 mar 20
Published on

ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲೆಂದೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಯುಗಾದಿ ಬಳಿಕ ಬಹುತೇಕ ಕಡೆ ಜಾತ್ರೆ ಮತ್ತಿತರ ಧಾರ್ವಿುಕ ಕಾರ್ಯಕ್ರಮಗಳು ನಡೆಯಬೇಕಿದ್ದವು. ಆದರೆ, ಅಪಾಯವನ್ನು ಮನಗಂಡೇ ಎಲ್ಲ ಬಗೆಯ ಜಾತ್ರೆಗಳನ್ನು ರದ್ದುಪಡಿಸಲಾಗಿದೆ, ಐತಿಹಾಸಿಕ ಬೆಂಗಳೂರು ಕರಗ ಉತ್ಸವವೂ ಈ ಬಾರಿ ನಡೆಯುತ್ತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ, ಮದುವೆ, ಉಪನಯನ, ಹುಟ್ಟುಹಬ್ಬ ಸೇರಿ ಎಲ್ಲ ಆಯೋಜನೆಗಳು ರದ್ದುಗೊಂಡಿರುವುದು, ಯುಗಾದಿಯನ್ನು ಮನೆಮಟ್ಟಿಗಷ್ಟೇ ಆಚರಿಸಿರುವುದು ಗೊತ್ತಿರುವಂಥದ್ದೇ. ಇಡೀ ರಾಜ್ಯವನ್ನು, ದೇಶವನ್ನು ಬಂದ್ ಮಾಡುವುದರಿಂದ ಆಗುವ ಆರ್ಥಿಕ, ಸಾಮಾಜಿಕ ಹಾನಿಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ. ಹಾಗೆಂದ ಮಾತ್ರಕ್ಕೆ, ನಿಯಮಗಳನ್ನು ಒಂದಿಷ್ಟು ಸಡಿಲಿಸಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಕರೊನಾ ಸೋಂಕು ಜನರಿಂದ ಜನರಿಗೆ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವುದರಿಂದಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅವಶ್ಯವೂ, ಅನಿವಾರ್ಯವೂ ಆಗಿದೆ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಕೂಡ ದೇಶಕ್ಕೆ ಮನವಿ ಮಾಡಿಕೊಂಡಿದ್ದಾರಲ್ಲದೆ ಲಾಕ್​ಡೌನ್​ನಿಂದ ಜನರಿಗೆ ಆಗುತ್ತಿರುವ ತೊಂದರೆಗೆ ‘ಮನ್ ಕೀ ಬಾತ್’ ಕಾರ್ಯಕ್ರಮ ಮೂಲಕ ಕ್ಷಮೆಯಾಚಿಸಿದ್ದಾರೆ.

ವೈರಸ್​ನ ತೀವ್ರತೆ ಕಡಿಮೆಯಾಗಿ ಪರಿಸ್ಥಿತಿ ಸಹಜತೆಗೆ ಮರಳುವವರೆಗೆ ಪ್ರಸಕ್ತ ನಿರ್ಬಂಧಗಳನ್ನು ಪಾಲಿಸುವುದು ಅತ್ಯಂತ ಅಗತ್ಯ. ವೈಯಕ್ತಿಕ ಹಾಗೂ ಸಮುದಾಯದ ಹಿತಕ್ಕೆ, ಆರೋಗ್ಯ ರಕ್ಷಣೆಗೆ ಇದು ಅನಿವಾರ್ಯ. ಆದರೆ, ನಿಯಮವನ್ನು ಮೀರಿ ಯಾವುದೋ ಒಂದು ಕಾರ್ಯಕ್ರಮ ನಡೆಸಿದರೆ ಎಂಥ ಸನ್ನಿವೇಶ ಸೃಷ್ಟಿಯಾಗುತ್ತದೆ ಎಂಬುದಕ್ಕೆ ದೆಹಲಿಯ ನಿಜಾಮುದ್ದೀನ್ ಪ್ರಕರಣವೇ ಸಾಕ್ಷಿ. ಮಾರ್ಚ್ 1ರಿಂದ 15ರವರೆಗೆ ನಡೆದ ಧಾರ್ವಿುಕ ಸಭೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತದ ಬಹುತೇಕ ರಾಜ್ಯಗಳಿಂದ ಮಾತ್ರವಲ್ಲದೆ ಇಂಡೋನೇಷ್ಯಾ, ಮಲೇಷ್ಯಾ ಸೇರಿ ಹಲವು ರಾಷ್ಟ್ರಗಳಿಂದಲೂ ಈ ಸಭೆಗೆ ಆಗಮಿಸಿದ್ದರು. ಈ ಪೈಕಿ 37 ಮಂದಿಗೆ ಕರೊನಾ ಸೋಂಕು (ಮಂಗಳವಾರ ಸಂಜೆ ಹೊತ್ತಿಗೆ) ದೃಢಪಟ್ಟಿದೆ. ಅಲ್ಲದೆ, ವಿವಿಧ ರಾಜ್ಯಗಳಿಗೆ ಮರಳಿದ ಈ ಪ್ರತಿನಿಧಿಗಳ ಪೈಕಿ ಹತ್ತು ಜನ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕರ್ನಾಟಕದಿಂದಲೂ ಈ ಸಭೆಗೆ 50ಕ್ಕೂ ಹೆಚ್ಚು ಜನ ತೆರಳಿದ್ದರು ಎಂಬ ಮಾಹಿತಿ ಇದೆ. 1500ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ನಿರ್ವಹಿಸಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂಬಂಧಿತ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ.

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯಂಥ ವಾತಾವರಣ ಇರುವಾಗ ಯಾರೇ ನಿಯಮ ಉಲ್ಲಂಘಿಸಿದರೂ ಭಾರಿ ಸಂಕಷ್ಟ ತಂದುಕೊಳ್ಳಬೇಕಾಗುತ್ತದೆ ಎಂಬುದು ವಾಸ್ತವ. ಈ ನಿಟ್ಟಿನಲ್ಲಿ ನಿಜಾಮುದ್ದೀನ್ ಪ್ರಕರಣ ಇಡೀ ದೇಶದ ಕಣ್ಣು ತೆರೆಸಲಿ. ಲಾಕ್​ಡೌನ್ ಅವಧಿಯನ್ನು ಕಡ್ಡಾಯವಾಗಿ ಮತ್ತು

ನಿಯಮಗಳಿಗೆ ಅನುಸಾರವಾಗಿ ಪಾಲನೆ ಮಾಡುವಂತಾಗಲಿ. ಕೆಲವರು ಮನೆಯ ಮಟ್ಟಿಗೆ ಶುಭ ಸಮಾರಂಭ ಏರ್ಪಡಿಸಲು ಯೋಚಿಸುತ್ತಿದ್ದು, ಯಾವುದೇ ಸಣ್ಣ ಆಯೋಜನೆಯೂ ಬೇಡ ಎಂಬ ಅರಿವು ಜಾಗೃತವಾಗಲಿ. ತಪು್ಪಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಮುಂದಿನ ಕೆಲ ವಾರಗಳನ್ನು ಅತ್ಯಂತ ಜಾಗ್ರತೆಯಿಂದ ನಿರ್ವಹಿಸಲು ಸಜ್ಜಾಗೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net