ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ

editorial 23 mar 20
Published on

ದೇಶಾದ್ಯಂತ ಕರೊನಾ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿವೆ. ಸೋಮವಾರ ಮಧ್ಯಾಹ್ನದವರೆಗೆ 425 ಪ್ರಕರಣಗಳು ದೃಢಪಟ್ಟಿವೆ. ಜಾಗತಿಕವಾಗಿ 192 ದೇಶಗಳಿಗೆ ಸೋಂಕು ಹಬ್ಬಿದ್ದು, ಮೃತರ ಸಂಖ್ಯೆ 14 ಸಾವಿರದ ಗಡಿ ದಾಟಿದೆ. ಭಾರತದ ಬಹುತೇಕ ರಾಜ್ಯಗಳು ಲಾಕ್​ಡೌನ್

ಘೋಷಿಸಿವೆ. ಪಂಜಾಬ್ ರಾಜ್ಯವಂತೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲ 22 ಜಿಲ್ಲೆ ಗಳಲ್ಲಿ ಸೋಮವಾರದಿಂದಲೇ ಮೂರು ದಿನಗಳ ಕರ್ಫ್ಯೂ ಜಾರಿಗೊಳಿಸಿದೆ. ಸೋಂಕು ಒಟ್ಟು 23 ರಾಜ್ಯಗಳಿಗೆ ಬಾಧಿಸಿದ್ದು, ಮಹಾರಾಷ್ಟ್ರ, ಕೇರಳದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕರ್ನಾಟಕದ ಸ್ಥಿತಿಯೂ ದಿನದಿಂದ ದಿನಕ್ಕೆ ವಿಷಮಗೊಳ್ಳುತ್ತಿದೆ.

ಕರೊನಾ ಸೋಂಕು ಹರಡದಂತೆ ತಡೆಯಲು ಸಾಮಾಜಿಕ ಅಂತರವೇ ಉತ್ತಮ ಮತ್ತು ಏಕೈಕ ಪರಿಹಾರ ಎಂದು ಸರ್ಕಾರ ಮತ್ತು ವೈದ್ಯಕೀಯಲೋಕ ಪದೇಪದೆ ಹೇಳುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲೆಂದೆ ಭಾನುವಾರ ‘ಜನತಾ ಕರ್ಫ್ಯೂ’ಗೆ ಕರೆ ನೀಡಲಾಗಿತ್ತು. ಇದಕ್ಕೆ ಜನರು ಉತ್ತಮ ಬೆಂಬಲ ನೀಡಿದರಾದರೂ, ಅದೇ ವಿವೇಚನೆ, ತಾಳ್ಮೆಯನ್ನು ಮುಂದುವರಿಸಿಲ್ಲ ಎಂಬುದು ದುರದೃಷ್ಟಕರ. ಚೀನಾದಲ್ಲಿನ ಪರಿಸ್ಥಿತಿ ನೋಡಿಯೂ ಇಟಲಿ ಕ್ರಮಕ್ಕೆ ಮುಂದಾಗಲಿಲ್ಲ. ತನ್ನ ದೇಶದಲ್ಲಿ ಸೋಂಕು ಹಬ್ಬುವಾಗಲೂ ಅದು ತಕ್ಷಣ ಎಚ್ಚೆತ್ತುಕೊಳ್ಳಲಿಲ್ಲ. ಆ ನಿರ್ಲಕ್ಷ್ಯಕ್ಕೆ ಇಟಲಿ ಬೆಲೆ ತೆರುತ್ತಿದ್ದು, ‘ಸಾವಿನ ಮನೆ’ ಆಗಿ ಪರಿವರ್ತನೆಯಾಗಿದೆ. ಕಳೆದ ಕೆಲ ದಿನಗಳಿಂದ ಅಲ್ಲಿ ನಿತ್ಯ ಸರಾಸರಿ 600-700 ಜನರು ಕರೊನಾದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಗಮನಿಸಿಯೇ, ಭಾರತದಲ್ಲಿ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಇದಕ್ಕೆ ಜನರೇ ಸಹಕರಿಸದಿದ್ದರೆ ಹೇಗೆ? ‘ಜನರು ಲಾಕ್​ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ‘ಸರ್ಕಾರದ ನಿಯಮಗಳನ್ನು ಗಂಭೀರವಾಗಿ ಪಾಲಿಸಿ, ನಿಮ್ಮನ್ನು, ನಿಮ್ಮ ಕುಟುಂಬದವರನ್ನು ರಕ್ಷಿಸಿಕೊಳ್ಳಿ’ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ದೇಶದ 80ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಲಾಕ್​ಡೌನ್ ಜಾರಿಯಲ್ಲಿದ್ದರೂ, ಇದನ್ನು ಉಲ್ಲಂಘಿಸಿ ಜನರು ಗುಂಪಾಗಿ ಓಡಾಡುತ್ತಿರುವುದು, ರಜೆ ಘೋಷಿಸಲಾಗಿದ್ದರೂ ಅನವಶ್ಯಕ ಓಡಾಟದಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದೆ. ಇದು ಖಂಡಿತ ಅಪಾಯಕಾರಿ ಬೆಳವಣಿಗೆ. ಭಾನುವಾರ ಸಂಜೆ ಕೂಡ ಇಂಥ ಅಪಸವ್ಯಗಳು ಕಂಡುಬಂದವು. ಕರೊನಾ ಹೊತ್ತಲ್ಲಿ ತುರ್ತು ಸೇವೆ ಸಲ್ಲಿಸುತ್ತಿರುವವರಿಗೆ ತಮ್ಮ ಮನೆಬಾಲ್ಕನಿಗಳಲ್ಲಿ ನಿಂತು ಕೃತಜ್ಞತೆ ಸಲ್ಲಿಸಲು ಜನರಿಗೆ ಕೋರಲಾಗಿತ್ತು. ಆದರೆ, ಎಷ್ಟೋ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಗುಂಪುಗೂಡಿದರು.

ಅಷ್ಟೇ ಅಲ್ಲ, ಜನತಾ ಕರ್ಫ್ಯೂವಿನ ಅವಧಿ ಮುಗಿಯುವ ಮುನ್ನವೇ ವಾಹನಗಳು ರಸ್ತೆಗೆ ಇಳಿದಿದ್ದವು. ಕರೊನಾ ಸೋಂಕು ಹರಡದಂತೆ ತಡೆಯಲು ಪ್ರತಿಯೊಬ್ಬರೂ ಸೈನಿಕರಂತೆ ಕಾರ್ಯನಿರ್ವಹಿಸಬೇಕಿದೆ. ಎಲ್ಲವೂ ಸರ್ಕಾರ ಮಾಡಲಿ ಎಂಬ ಭಾವನೆ ಸಲ್ಲ. ಜನಸಾಮಾನ್ಯರು ಮನೆಗಳಲ್ಲೇ ಇದ್ದು, ಸ್ವಯಂ ಚೌಕಟ್ಟು ಹಾಕಿಕೊಂಡು ಸಹಕರಿಸಬೇಕು. ಈಗಿನ ಗಂಭೀರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಕೈಮೀರುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಜಾಗೃತಿ ಮತ್ತು ಎಚ್ಚರಿಕೆ ವಹಿಸುವುದೇ ಈಗಿನ ತುರ್ತು ಅಗತ್ಯ ಎಂಬುದನ್ನು ಮನಗಾಣೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net