

ವೇಗವಾಗಿ ಹಬ್ಬುತ್ತಿರುವ ಕರೊನಾ ವೈರಸ್ನ್ನು ನಿಯಂತ್ರಿಸುವ ಸಂಕಲ್ಪದಿಂದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ‘ಜನತಾ ಕರ್ಫ್ಯೂ’ಗೆ ಭಾನುವಾರ ಇಡೀ ದೇಶ ಸ್ಪಂದಿಸಿದ ಪರಿ ಅನನ್ಯ, ಅಭೂತಪೂರ್ವ. ಸ್ವಯಂಪ್ರೇರಿತರಾಗಿ ಜನ ಮನೆಯಲ್ಲಿ ಉಳಿದುಕೊಳ್ಳುವ ಮೂಲಕ ಕರೊನಾ ವಿರೋಧಿ ಅಭಿಯಾನಕ್ಕೆ ಕೈಜೋಡಿಸಿದರು. ಭಾನುವಾರ ಅಕ್ಷರಶಃ ಭಾರತ ಬಂದ್ ಆಗಿತ್ತು. ರಾಜಧಾನಿ ದೆಹಲಿ, ವಾಣಿಜ್ಯನಗರಿ ಮುಂಬೈ, ಕೋಲ್ಕತ್ತ, ಬೆಂಗಳೂರು, ಲಖನೌ, ವಾರಾಣಸಿ ಸೇರಿ ಎಲ್ಲ ಪ್ರಮುಖ ನಗರಗಳು ಸ್ತಬ್ಧವಾಗಿದ್ದವು. ತುರ್ತು ಸೇವೆ ಹೊರತುಪಡಿಸಿ ವ್ಯಾಪಾರ-ವಹಿವಾಟು ಯಾವುದೂ ನಡೆಯಲಿಲ್ಲ. ದೇಶದ ಏಳು ಕೋಟಿ ವ್ಯಾಪಾರಿಗಳು ಬೆಂಬಲ ಸೂಚಿಸಿದರೆ, ರೈಲ್ವೆ, ಮೆಟ್ರೋ ಕೂಡ ಸೇವೆ ಸ್ಥಗಿತಗೊಳಿಸಿದ್ದವು. ಭಾರಿ ಸಂಚಾರದಟ್ಟಣೆಯಿಂದ ತುಂಬಿರುತ್ತಿದ್ದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕೋಟ್ಯಂತರ ಜನರು ಹೀಗೆ ಮನೆಯಲ್ಲೇ ಉಳಿದುಕೊಳ್ಳುವ ಮೂಲಕ ಜನತಾ ಕರ್ಫ್ಯೂ ಯಶಸ್ವಿಯಾಯಿತು. ಅಲ್ಲದೆ, ತುರ್ತು ಸೇವೆ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಜನರು ಚಪ್ಪಾಳೆ ತಟ್ಟುವ ಮೂಲಕ, ಗಂಟೆ ಬಾರಿಸುವ ಮೂಲಕ ಕೃತಜ್ಞತೆ ತೋರಿದ್ದು, ವಿಶೇಷವಾಗಿತ್ತು. ಜನರು ತಮಗೆ ತಾವೇ ಕರ್ಫ್ಯೂ ವಿಧಿಸಿಕೊಂಡು; ಸೋಂಕು ನಿಯಂತ್ರಣಕ್ಕೆ ಸಹಕರಿಸಿದ್ದು, ಇದಕ್ಕಾಗಿ ಎಲ್ಲ ಭಾರತೀಯರು ಅಭಿನಂದನಾರ್ಹರು.
ಆದರೆ, ಈ ಸಮರ ಗೆಲ್ಲಲು ಇನ್ನಷ್ಟು ಸಂಯಮ ವಹಿಸಬೇಕಿದೆ. ಮಾರ್ಚ್ 22ರಂದು ಕರೊನಾ ಸೋಂಕಿಗೆ ದೇಶದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಇದನ್ನೆಲ್ಲ ಗಮನಿಸಿಯೇ ಹಲವು ರಾಜ್ಯಗಳು ಬಂದ್ ಅವಧಿಯನ್ನು ಮಾರ್ಚ್ 31ರವರೆಗೆ ವಿಸ್ತರಿಸಿವೆ. ಅಲ್ಲದೆ, ರೈಲ್ವೆಸೇವೆ ಕೂಡ ಮಾ.31ರವರೆಗೆ ಸ್ಥಗಿತಗೊಳಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಕೆಲವೆಡೆ ಜನರು ಆತಂಕಿತರಾಗಿ ತಾವು ಉಳಿದು ಕೊಂಡಿರುವ ನಗರಗಳಿಂದ ತವರುಸ್ಥಳಗಳಿಗೆ ತೆರಳಲು ಮುಂದಾಗಿದ್ದಾರೆ. ಇದರಿಂದ ಶನಿವಾರ ದೆಹಲಿ, ಪಟನಾ, ಪುಣೆ ಸೇರಿ ಹಲವು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಕಂಡುಬಂತು. ಇದನ್ನು ತಪ್ಪಿಸಬೇಕಿದೆ. ಯಾವ ನಗರ ಅಥವಾ ಹಳ್ಳಿಗಳಲ್ಲಿ ಇದ್ದೆವೋ ಅಲ್ಲೇ ಮುಂದಿನ ಕೆಲ ವಾರ ವಾಸ್ತವ್ಯ ಹೂಡಬೇಕು. ಅದರಿಂದ ನಮ್ಮ ಹಾಗೂ ಇತರರ ಆರೋಗ್ಯ ರಕ್ಷಣೆ ಸಾಧ್ಯವಾಗಬಲ್ಲದು. ಪ್ರಧಾನಿ ಕೂಡ ಟ್ವೀಟ್ ಮಾಡುವ ಮೂಲಕ ಈ ಸಂಬಂಧ ಮನವಿ ಮಾಡಿಕೊಂಡಿದ್ದಾರೆ. ಕರೊನಾ ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪರಿಣಾಮಕಾರಿ ಅಸ್ತ್ರ. ಸರ್ಕಾರದ ಪ್ರಯತ್ನಗಳ ಜತೆ ಜನಸಾಮಾನ್ಯರ ಪಾತ್ರವೂ ಈ ನಿಟ್ಟಿನಲ್ಲಿ ಬಹುಮುಖ್ಯವಾಗಿದೆ. ಜನತಾ ಕರ್ಫ್ಯೂ ವೇಳೆ ತೋರಿದ ಕಾಳಜಿ, ವಹಿಸಿದ ತಾಳ್ಮೆ ಇನ್ನಷ್ಟು ಅವಧಿಗೆ ಅಗತ್ಯವಾಗಿದೆ ಎಂಬುದನ್ನು ಮನಗಾಣಬೇಕು. ಕೆಲವಡೆ ಸೋಂಕು ಲಕ್ಷಣವಿದ್ದರೂ ಅಂಥವರು ಮುಕ್ತವಾಗಿ ಸಂಚರಿಸಿರುವ ಪ್ರಕರಣಗಳು ವರದಿಯಾಗಿವೆ. ಇಂಥ ತಪು್ಪ ಯಾವುದೇ ಕಾರಣಕ್ಕೂ ಮಾಡುವುದು ಬೇಡ. ಇದರಿಂದ ಇತರರ ಪ್ರಾಣಕ್ಕೂ ಅಪಾಯ ತಂದೊಡ್ಡಿದಂತೆ ಆಗುತ್ತದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಸೋಂಕಿನ ಲಕ್ಷಣ ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಧಾವಿಸಿ ವೈದ್ಯರನ್ನು ಕಾಣುವುದು, ಸ್ವಚ್ಛತೆ ಕಾಪಾಡಿಕೊಳ್ಳುವಂಥ ಕ್ರಮಗಳನ್ನು ತಪ್ಪದೆ ಪಾಲಿಸಬೇಕಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಹೋರಾಡುವ ವಿಶ್ವಾಸ ಜಾಗೃತವಾಗಲಿ.