ವಿಜಯವಾಣಿ ಸಂಪಾದಕೀಯ: ತೊಂದರೆಗಳು ತಪ್ಪಲಿ

Editorial
Published on

ಶಿಕ್ಷಕರ ಹಲವು ಸಮಸ್ಯೆಗಳ ಪೈಕಿ ಮೇಲ್ಪಂಕ್ತಿಯಲ್ಲಿರುವುದು ವರ್ಗಾವಣೆ ಸಮಸ್ಯೆ. ಕಳೆದ ಶೈಕ್ಷಣಿಕ ವರ್ಷದಲ್ಲಂತೂ ಕೌನ್ಸೆಲಿಂಗ್ ಹಲವು ಬಾರಿ ಮುಂದೂಡಿ, ಗೊಂದಲಕ್ಕೆ ಕಾರಣವಾಗಿತ್ತು. ಯಾವುದೇ ಸರ್ಕಾರ ಬಂದರೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಗೋಜಲಿನಲ್ಲೇ ಮುಳುಗಿರುತ್ತಿತ್ತೆ ಹೊರತು ರ್ತಾಕ ಪರಿಹಾರ ಕಲ್ಪಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಶೈಕ್ಷಣಿಕ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ. ಶಿಕ್ಷಕರು ವರ್ಗಾವಣೆ ಪಡೆದುಕೊಳ್ಳಲೇಬೇಕು ಎಂಬ ಧಾವಂತದಲ್ಲಿ ಇಲಾಖೆಯ ಕಚೇರಿಗಳನ್ನು ಸುತ್ತುವುದು, ಕೌನ್ಸೆಲಿಂಗ್ ಪ್ರಕ್ರಿಯೆಗಾಗಿ ಚಾತಕ ಪಕ್ಷಿಯಂತೆ ಕಾಯುವುದು ಸಾಮಾನ್ಯ ಚಿತ್ರಣ. ಬೇರೆಲ್ಲ ಇಲಾಖೆಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೂ, ಕಾಲಕಾಲಕ್ಕೆ ವರ್ಗಾವಣೆ ಪ್ರಕ್ರಿಯೆ ಸರಾಗವಾಗಿ ಆಗುತ್ತದೆ. ಆದರೆ, ಶಿಕ್ಷಕರ ವರ್ಗಾವಣೆ ಹಾಗಲ್ಲ. ದೀರ್ಘ ಪ್ರಕ್ರಿಯೆ, ಈ ಪ್ರಕ್ರಿಯೆಯಲ್ಲೇ ನುಸುಳುವ ಹಲವು ತಪು್ಪಗಳು, ಗೊಂದಲಗಳು, ವ್ಯವಸ್ಥೆಯ ಲೋಪ ಇವೆಲ್ಲ ಢಾಳಾಗಿ ಕಂಡುಬರುತ್ತವೆ. ತಂತ್ರಜ್ಞಾನ ಇಷ್ಟೊಂದು ಮುಂದುವರಿದು, ಹಲವು ರಂಗಗಳಿಗೆ ಅನ್ವಯ ಆಗಿರುವಾಗ ಪರಿಣಾಮಕಾರಿ ವ್ಯವಸ್ಥೆಯೊಂದು ರೂಪಿಸಿ, ಶಿಕ್ಷಕರ ವರ್ಗಾವಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಾರದೆ ಎಂಬ ಬಗ್ಗೆಯೂ ಆಗಾಗ ಚರ್ಚೆಗಳು ನಡೆದಿದ್ದವು.

ರಾಜ್ಯ ಸರ್ಕಾರ ಕೊನೆಗೂ ಶಿಕ್ಷಕಸ್ನೇಹಿ ಕ್ರಮಕ್ಕೆ ಮುನ್ನುಡಿ ಬರೆದಿದ್ದು, ‘ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ-2020 ವಿಧಾನಸಭೆಯಲ್ಲಿ ಮಂಗಳವಾರ ಮಂಡನೆ ಮಾಡಿದೆ. ಬಜೆಟ್ ಅಧಿವೇಶನದಲ್ಲಿ ಈ ವಿಧೇಯಕದ ಬಗ್ಗೆ ವಿವರವಾದ ಚರ್ಚೆ ನಡೆದು, ಆ ಬಳಿಕ ಅಂಗೀಕಾರಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ, ಮುಂದಿನ ವರ್ಗಾವಣೆಗೆ ಹೊಸ ಕಾನೂನು ಜಾರಿಯಾಗುವ ದಿನಗಳು ಸಮೀಪಿಸಿವೆ ಎನ್ನಬಹುದು. ವರ್ಗಾವಣೆಗೆ ನಿಯಮಗಳನ್ನು ಸಡಿಲಗೊಳಿಸುವ ಜತೆಗೆ, ಸ್ಪಷ್ಟತೆಗೂ ಬರಲಾಗಿದೆ. ಒಂದು ಶಾಲೆಯಲ್ಲಿ ಕನಿಷ್ಠ ಮೂರು ವರ್ಷ ಸೇವಾವಧಿ ಪೂರ್ಣಗೊಳಿಸಿದರೆ ಮಾತ್ರ ವರ್ಗಾವಣೆ ಕೋರಲು ಅವಕಾಶವಿದ್ದು, ಅಂಗವಿಕಲ ಶಿಕ್ಷಕರಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೆ, 50 ವರ್ಷ ದಾಟಿದ ಶಿಕ್ಷಕಿಯರು ಮತ್ತು 55 ವರ್ಷ ದಾಟಿದ ಶಿಕ್ಷಕರಿಗೆ ವಲಯವಾರು ವರ್ಗಾವಣೆಗಳಿಂದ ವಿನಾಯತಿ ಕಲ್ಪಿಸಲಾಗಿದೆ. ಹೊಸ ವಿಧೇಯಕ ಶಿಕ್ಷಕರ ಪ್ರಾಯೋಗಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸಿರುವುದು ವಿಶೇಷ. ಏಪ್ರಿಲ್ ಮತ್ತು ಮೇನಲ್ಲಿ ಸಾರ್ವತ್ರಿಕ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಡೆಸಲಾಗುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ವಿಶೇಷ ಸನ್ನಿವೇಶದಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಮಾಡುವ ಅಂಶವನ್ನೂ ವಿಧೇಯಕ ಒಳಗೊಂಡಿದೆ. ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಶಿಕ್ಷಕರ ಲಭ್ಯತೆ, ಪಾರದರ್ಶಕತೆ ಖಚಿತಪಡಿಸಿಕೊಳ್ಳಲು ಮತ್ತು ಬದಲಾದ ಸ್ವರೂಪದಲ್ಲಿ ಶಿಕ್ಷಕರ ವರ್ಗಾವಣೆ ನಿಯಂತ್ರಿಸುವುದು ವಿಧೇಯಕದ ಉದ್ದೇಶವಾಗಿದೆ. ಈ ಬಗ್ಗೆ ಸದನದಲ್ಲಿ ಶಾಸಕರು ವಿಸõತವಾಗಿ ಚರ್ಚೆ ನಡೆಸಲಿ. ಹೊಸ ಕಾನೂನಿನಲ್ಲಿ ಹಳೆ ಸಮಸ್ಯೆಗಳು ನುಸುಳದಂತೆ ಮತ್ತು ಹೊಸ ಅಪಸವ್ಯಗಳು ಸೃಷ್ಟಿ ಆಗದಂತೆ ಕಾಳಜಿ ವಹಿಸಲಿ. ಆಗಲೇ, ಈ ಪ್ರಯತ್ನಗಳು ಸಾರ್ಥಕಗೊಂಡು, ಶಿಕ್ಷಕ ಸಮುದಾಯ ನಿರಾಳವಾಗಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net