ವಿಜಯವಾಣಿ ಸಂಪಾದಕೀಯ: ಅನಗತ್ಯ ಭಯ ಬೇಡ

Corona
Published on

ಕರೊನಾ ವೈರಸ್​ನ ಅಟ್ಟಹಾಸ ಮುಂದುವರಿದಿದೆ. ಚೀನಾದಲ್ಲಿ ಸಾವಿನ ಸಂಖ್ಯೆ ನಾಲ್ಕು ಸಾವಿರದ ಗಡಿಯನ್ನು ದಾಟಿದ್ದರೆ, ಇಟಲಿಯಲ್ಲಿ ಸಾವಿರಾರು ಹೊಸ ಪ್ರಕರಣಗಳು ಪತ್ತೆಯಾಗಿವೆ. 109ಕ್ಕೂ ಅಧಿಕ ದೇಶಗಳಿಗೆ ಕರೊನಾ ವೈರಸ್ ಹರಡಿದೆ. ಭಾರತದಲ್ಲಿ ಈವರೆಗೆ 56 ಮತ್ತು ಕರ್ನಾಟಕದಲ್ಲಿ 4 ಪ್ರಕರಣಗಳು ದೃಢಪಟ್ಟಿವೆ. ದೇಶದಲ್ಲಿರುವ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಲಾಗಿದ್ದು, ವೈದ್ಯರ ತಂಡಗಳನ್ನು ನಿಯೋಜಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ. ಈ ಮಧ್ಯೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ 1-5ನೇ ತರಗತಿ ಶಾಲೆಗಳಿಗೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಬೆಂಗಳೂರು ಆಟೋ ಚಾಲಕರಿಗೆ ಮಾಸ್ಕ್ ವಿತರಣೆ ಮಾಡಲಾಗಿದೆ.

ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಕರೊನಾ ವೈರಸ್ ಹರಡದಂತೆ ತಡೆಯಲು ಸಾಧ್ಯವಿದೆ. ಹಾಗಾಗಿ, ಯಾರೂ ಆತಂಕಕ್ಕೆ ಒಳಪಡಬೇಕಿಲ್ಲ. ಜನಸಾಮಾನ್ಯರು ಅನಗತ್ಯ ಭೀತಿ ತಳೆಯುವ ಬದಲಾಗಿ, ಮುನ್ನೆಚ್ಚರಿಕೆ ವಹಿಸಿದರೆ ಸಾಕು. ಮಾಸ್ಕ್ ವಿಷಯದಲ್ಲೂ ಗೊಂದಲ ಮೂಡಿಸಲಾಗುತ್ತಿದೆ. ಹಾಗಾಗಿಯೇ, ಮಾಸ್ಕ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ‘ಕಾಳಸಂತೆಯಲ್ಲಿ ಮುಖಗವಸು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂಬ ಸರ್ಕಾರದ ಎಚ್ಚರಿಕೆಯೂ ಹೇಳಿಕೊಳ್ಳುವಂಥ ಪರಿಣಾಮ ಉಂಟು ಮಾಡಿಲ್ಲ. ಅಷ್ಟಕ್ಕೂ, ಎಲ್ಲರೂ ಮುಖಗವಸು ಧರಿಸುವ ಅವಶ್ಯಕತೆಯೇ ಇಲ್ಲ ಎಂದು ತಜ್ಞವೈದ್ಯರೇ ಸ್ಪಷ್ಟಪಡಿಸಿದ್ದಾರೆ. ಸೊಂಕು ಬಾಧಿತರು ಮಾತ್ರ ಮಾಸ್ಕ್ ಧರಿಸುವುದು ಅನಿವಾರ್ಯ. ಮುಖ್ಯವಾಗಿ, ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸುವಾಗ ಜಾಗ್ರತೆ ವಹಿಸಬೇಕು. ಈ ಹಿನ್ನೆಲೆಯಲ್ಲೇ ಈ ಬಾರಿ ಹೋಳಿ ಹಬ್ಬದ ಸೀಮಿತ ಆಚರಣೆ ನಡೆದಿದೆ. ಸೀನುವಾಗ, ಕೆಮ್ಮುವಾಗ ಅಂತರ ಕಾಯ್ದುಕೊಳ್ಳಬೇಕು. ಮೇಲಿಂದ ಮೇಲೆ ಕೈ ತೊಳೆದುಕೊಳ್ಳುವುದು, ಮೂಗು, ಬಾಯಿಯನ್ನು ಆಗಾಗ ರ್ಸ³ಸದಿರುವುದು ಸರಳ ಮತ್ತು ಉತ್ತಮ ಪರಿಹಾರ.

ಸರ್ಕಾರ ಮತ್ತು ಸಮಾಜ ಇನ್ನೊಂದು ಸಂಗತಿಯನ್ನು ಗಮನಿಸಬೇಕು. ಯುಗಾದಿ ಸಮೀಪಿಸುತ್ತಿರುವ ಹೊತ್ತಿನಲ್ಲಿ ಕರ್ನಾಟಕ ಸೇರಿ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಜಾತ್ರೆಗಳು ಏರ್ಪಾಡಾಗುತ್ತವೆ. ಜಾತ್ರೆ ಎಂದ ಮೇಲೆ ದೊಡ್ಡ ಜನಜಂಗುಳಿ ಸೇರುವುದು ಸ್ವಾಭಾವಿಕವೇ. ಈಗಿನ ಬೆಳವಣಿಗೆಗಳನ್ನು ಗಮನಿಸಿ, ಜನದಟ್ಟಣೆಯನ್ನು ತಪ್ಪಿಸಬೇಕು. ಧಾರ್ವಿುಕ, ಆಧ್ಯಾತ್ಮಿಕ ಆಚರಣೆಗಳು ನಡೆಯಲೇ ಬೇಕು. ಆದರೆ, ಅವು ಸದ್ಯದ ಮಟ್ಟಿಗೆ ನಿಯಂತ್ರಿತ ಚೌಕಟ್ಟಿನಲ್ಲಿ ಸರಳವಾಗಿ ನಡೆಯಲಿ. ಆಗ, ಜನ ಒಟ್ಟಿಗೆ ಸೇರುವುದು, ಅದರಿಂದ ಸಂಭಾವ್ಯ ಸಮಸ್ಯೆ ಸೃಷ್ಟಿಯಾಗುವುದನ್ನು ತಪ್ಪಿಸಬಹುದು.

ಬೆಂಗಳೂರಿನಲ್ಲಿ ಕಾಲರಾದ ಪ್ರಕರಣಗಳೂ ಪತ್ತೆಯಾಗಿವೆ. ಒಟ್ಟಾರೆ ಪರಿಸ್ಥಿತಿ ಸೂಕ್ಷ್ಮ ಇದೆ ಎಂಬುದು ನಿಜ. ಇದೆಲ್ಲ ನಿಯಂತ್ರಣಕ್ಕೆ ಬರಲು ಎಷ್ಟು ಸಮಯ ಬೇಕಾಗಲಿದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಹಾಗಾಗಿ, ಭಯವನ್ನು ದೂರಕ್ಕೆ ತಳ್ಳಿ, ದೈನಂದಿನ ಜೀವನಶೈಲಿಯಲ್ಲಿ ಕೆಲ ಮಾರ್ಪಾಡು ಮಾಡಿಕೊಂಡರೆ ಸೂಕ್ತ. ಇಂಥ ಹೊತ್ತಿನಲ್ಲಿ ಸರ್ಕಾರವೇ ಎಲ್ಲ ಮಾಡಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಮನಗಾಣಬೇಕು. ಸಮುದಾಯ ಮತ್ತು ಸರ್ಕಾರದ ಒಟ್ಟು ಪ್ರಯತ್ನದಿಂದ ಸಂಕಷ್ಟವನ್ನು ಮೀರಿ ನಿಲ್ಲುವ ಸಂಕಲ್ಪಶಕ್ತಿ ಒಡಮೂಡಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net