ಸಮಸ್ಯೆಗಳು ಪರಿಹಾರ ಕಾಣಲಿ

sampadakiya mar 20
Published on

ಅಂತಾರಾಷ್ಟ್ರೀಯ ಮಹಿಳಾ ದಿನವನ್ನು (ಮಾರ್ಚ್ 8) ಕರ್ನಾಟಕ ಮತ್ತು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಅಸಾಧಾರಣ ಸಾಧನೆ ಮಾಡಿದ ಸಾಧಕಿಯರಿಗೆ ರಾಷ್ಟ್ರಪತಿಗಳು ಸ್ತ್ರೀಶಕ್ತಿ ಪುರಸ್ಕಾರವನ್ನು ನೀಡಿ ಗೌರವಿಸಿದರೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ನಿರ್ವಹಣೆಯನ್ನು ಏಳು ಜನ ಮಹಿಳೆಯರಿಗೇ ಬಿಟ್ಟುಕೊಟ್ಟಿದ್ದು ವಿಶೇಷವಾಗಿತ್ತು. ವಿವಿಧೆಡೆ ಮಹಿಳೆಯರ ಸಾಧನೆಯನ್ನು ಗುರುತಿಸಿ, ಗೌರವಿಸಲಾಗಿದೆ. ಮಹಿಳೆಯರು ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಮತ್ತಷ್ಟು ದೃಢವಾಗಿ ಸಾಧನಾಪಥದಲ್ಲಿ ಸಾಗುವ ಸಂಕಲ್ಪ ಕಂಡುಬಂದಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ ಸೇನೆಯಲ್ಲಿಯೂ ಮಹಿಳೆಯರಿಗೆ ಸಮಾನ ಆದ್ಯತೆ ಸಿಗಲಿದೆ. ಉದ್ಯಮದಿಂದ ಹಿಡಿದು ಗಗನಯಾತ್ರೆಯವರೆಗೂ ಸ್ತ್ರೀಶಕ್ತಿ ವಿಜೃಂಭಿಸುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಂತೂ ಹೆಣ್ಣನ್ನು ಮುಂಚೆಯಿಂದಲೂ ಶಕ್ತಿಯ ಸ್ವರೂಪ ಎಂದೇ ಗೌರವಿಸಿಕೊಂಡು ಬರಲಾಗಿದೆ. ಆದರೆ, ಹಿಂದೆಲ್ಲ ಮಹಿಳೆಯರಿಗೆ ಎಲ್ಲ ರಂಗಗಳಲ್ಲಿ ಅವಕಾಶಗಳು ತುಂಬ ಸೀಮಿತವಾಗಿದ್ದವು. ಕೌಶಲ, ಕಾರ್ಯದಕ್ಷತೆ, ಜಾಣ್ಮೆಯಿಂದ ಮಹಿಳೆ ಆ ಚೌಕಟ್ಟನ್ನು ಮೀರಿ ಎಲ್ಲ ಕ್ಷೇತ್ರಗಳಲ್ಲಿ ಹೆಮ್ಮೆಯಿಂದ ಮುನ್ನುಗ್ಗುತ್ತಿದ್ದಾಳೆ. ಹಾಗಾಗಿ, ಸ್ವಾಭಾವಿಕವಾಗಿಯೇ ಈ ಸಂಭ್ರಮದ ಆಚರಣೆ, ನಡೆದು ಬಂದ ಹಾದಿಯ ಅವಲೋಕನ ಮಹಿಳಾ ದಿನದ ನಿಮಿತ್ತ ನಡೆಯುತ್ತದೆ. ಇಂಥ ಸಂಭ್ರಾಮಚರಣೆಗಳು ವಿಶ್ವಾಸವನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ, ಕಷ್ಟದಲ್ಲಿರುವ ಇತರೆ ಮಹಿಳೆಯರಲ್ಲೂ ಪ್ರೇರಣೆ ತುಂಬುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ಈ ಎಲ್ಲ ಸಕಾರಾತ್ಮಕ ಸಂಗತಿಗಳ ನಡುವೆಯೇ ಇನ್ನೊಂದು ಮುಖವನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ, ಹೆಣ್ಣು ಹಲವು ಸಮಸ್ಯೆಗಳಿಂದ ಪೀಡಿತಳಾಗಿದ್ದಾಳೆ ಎಂಬುದು ಕಹಿಸತ್ಯ. ಇಂದಿನ ಆಧುನಿಕ ಯುಗದಲ್ಲೂ ಬಾಲ್ಯವಿವಾಹ ದೊಡ್ಡ ಪಿಡುಗಾಗಿ ಕಾಡುತ್ತಿದೆ. ಬಾಲ್ಯವಿವಾಹಕ್ಕೆ ಒಳಗಾದ ಹೆಣ್ಣುಮಕ್ಕಳು ಸಣ್ಣ ವಯಸ್ಸಿನಲ್ಲೇ ಗರ್ಭ ಧರಿಸುವುದರಿಂದ ಹಲವು ಬಗೆಯ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಅಲ್ಲದೆ, ಇಂಥ ಪ್ರಕರಣಗಳಲ್ಲಿ ತಾಯಿ ಮತ್ತು ನವಜಾತ ಶಿಶುವಿನ ಸಾವಿನ ಪ್ರಮಾಣವು ಹೆಚ್ಚು ಎಂಬುದನ್ನು ಗಮನಿಸಬೇಕು. ಉತ್ತರದ ರಾಜ್ಯಗಳಲ್ಲಿ, ಉತ್ತರ ಕರ್ನಾಟಕದಲ್ಲಿ ಬಾಲ್ಯವಿವಾಹ ಅಸಂಖ್ಯ ಹೆಣ್ಣುಮಕ್ಕಳ ಜೀವನವನ್ನೇ ಕಷ್ಟಕ್ಕೆ ದೂಡುತ್ತಿದೆ. ಇದಲ್ಲದೆ, ವರದಕ್ಷಿಣೆಗಾಗಿ ಕಿರುಕುಳದಂಥ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ. ವರದಕ್ಷಿಣೆ ಪಡೆಯುವುದು ಅಪರಾಧ ಎಂದು ಗೊತ್ತಿದ್ದರೂ, ಪಿಡುಗು ನಿಂತಿಲ್ಲ. ಇದಲ್ಲದೆ, ಕೌಟುಂಬಿಕ ಹಿಂಸೆ, ಭದ್ರತೆಯ ಕೊರತೆ ಹೀಗೆ ಹಲವು ಸಮಸ್ಯೆಗಳು ಬೆಂಬಿಡದೆ ಕಾಡುತ್ತಿರುವುದು ವಾಸ್ತವ.

ಅತ್ಯಾಚಾರ, ದೌರ್ಜನ್ಯ ಈ ಎಲ್ಲ ಸಮಸ್ಯೆ, ಸಂಕಟಗಳಿಂದ ಮುಕ್ತಿ ಕಾಣದೆ ಮಹಿಳಾ ಸಬಲೀಕರಣದ ಆಶಯ ಈಡೇರಲು ಸಾಧ್ಯವಿಲ್ಲ. ಮತ್ತು ಅಂಥ ಸುರಕ್ಷಿತ, ನಿರ್ಭಿತ ವಾತಾವರಣ ಸೃಷ್ಟಿಸುವುದು ಸರ್ಕಾರದ ಜತೆಗೆ ಸಮಾಜದ ಹೊಣೆಗಾರಿಕೆಯೂ ಹೌದು. ಹೆಣ್ಣು ನಿಜಾರ್ಥದಲ್ಲಿ ತುಂಬ ಶಕ್ತಿವಂತೆ. ಅವಳ ಸಾಧನಾಪಥವನ್ನು ಮತ್ತಷ್ಟು ವಿಸ್ತಾರ ಮಾಡುವ ನೈತಿಕ ಹೊಣೆಗಾರಿಕೆ ಎಲ್ಲರ ಮೇಲೂ ಇದೆ. ಸಮಾಜನಿರ್ವಣ, ರಾಷ್ಟ್ರನಿರ್ವಣ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಮುಂದಿನ ದಿನಗಳಲ್ಲಿ ಆ ಸಹಭಾಗಿತ್ವ ಹೆಚ್ಚಲಿ, ಸಮಸ್ಯೆಗಳು ಪರಿಹಾರ ಕಾಣಲಿ ಎಂಬುದೇ ಆಶಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net