ವಿಶ್ವಾಸಾರ್ಹತೆ ಮುಖ್ಯ

bank mar 2929
Published on

ಬ್ಯಾಂಕಿಂಗ್ ರಂಗದ ಸುಧಾರಣೆ, ಅದರ ಹೆಸರಲ್ಲಿ ಹಲವು ಬ್ಯಾಂಕುಗಳ ವಿಲೀನ ಹೀಗೆ ಸರಣಿ ಬೆಳವಣಿಗೆಗಳ ನಡುವೆಯೇ ಬ್ಯಾಂಕಿಂಗ್ ರಂಗ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವುದು ಹೊಸದೊಂದು ಆತಂಕ ಸೃಷ್ಟಿಸುವ ಜತೆಗೆ, ಜನರಿಗೆ ಮತ್ತೊಂದು ತಲೆನೋವು ಸೃಷ್ಟಿಸಿದೆ. ಸಹಕಾರಿ ಬ್ಯಾಂಕುಗಳಿಗೆ ಸರ್ಕಾರ ಮೂಗುದಾರ ಹಾಕಿದೆ. ಆದರೆ ಅದು ಉಸಿರುಗಟ್ಟಿಸುವಂತಿರಬಾರದು ಎಂಬುದು ಕ್ಷೇತ್ರತಜ್ಞರ ಅಭಿಮತ. ಈ ಮಧ್ಯೆ, ಭಾರತದ ಐದನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಎನಿಸಿದ್ದ ಯೆಸ್ ಬ್ಯಾಂಕ್​ನ ಆಡಳಿತವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಶುಕ್ರವಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಮೂಲಕ, ದೊಡ್ಡ ಸಂಚಲನವೇ ಸೃಷ್ಟಿಯಾಯಿತು. ಹೂಡಿಕೆದಾರರು ತೀವ್ರ ಆತಂಕಗೊಂಡು, ಶುಕ್ರವಾರ ಬೆಳಗ್ಗೆಯಿಂದಲೇ ಎಟಿಎಂಗಳ ಮುಂದೆ ಸರದಿಯಲ್ಲಿ ನಿಂತು, ಖಾತೆಯಿಂದ ಹಣ ಹಿಂಪಡೆದರು. ಆದರೆ, ದೊಡ್ಡಪ್ರಮಾಣದ ಹಣವನ್ನು ಠೇವಣಿಯಾಗಿ ಇಟ್ಟವರು ಆತಂಕಿತರಾಗಿದ್ದಾರೆ. ಷೇರುಪೇಟೆಯಲ್ಲಿ ಯೆಸ್ ಬ್ಯಾಂಕ್ ಷೇರುಗಳು ಪಾತಾಳ ಕಂಡರೆ, ಇದರ ಅಡ್ಡಪರಿಣಾಮದಿಂದ ಎಸ್​ಬಿಐನ ಷೇರುಗಳು ಕೂಡ ಕುಸಿತಗೊಂಡವು.

‘ಹೂಡಿಕೆದಾರರು ಭಯ ಪಡುವ ಅಗತ್ಯವಿಲ್ಲ. ಯೆಸ್ ಬ್ಯಾಂಕಿನ ಯಾವುದೇ ಖಾತೆದಾರರಿಗೆ ತೊಂದರೆ ಆಗುವುದಿಲ್ಲ, ಅವರ ಹಣಕ್ಕೆ ಮೋಸ ಇಲ್ಲ. ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ. ಆದರೆ, ಖಾಸಗಿ ರಂಗದ ಮುಖ್ಯ ಬ್ಯಾಂಕ್​ಗೆ ಈ ಗತಿ ಯಾಕಾಯಿತು, ಬ್ಯಾಂಕ್ ನಿಜಕ್ಕೂ ಉಳಿಯುತ್ತಾ, ಮುಚ್ಚುತ್ತಾ? ಎಂಬ ಅನುಮಾನದ ಪ್ರಶ್ನೆಗಳು ಜನಸಾಮಾನ್ಯರಿಗೆ ಕಾಡುತ್ತಿವೆ. ‘ಬ್ಯಾಂಕ್​ಗಳನ್ನು ಉಳಿಸಲು ಇರುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಆರ್​ಬಿಐ ಹೇಳಿದೆಯಾದರೂ, ಬಂಡವಾಳ ಸಂಚಯಿಸುವಲ್ಲಿನ ವೈಫಲ್ಯ ಮತ್ತು ಗಂಭೀರ ಆಡಳಿತಾತ್ಮಕ ಲೋಪಗಳು, ಅದರ ಜತೆಗೆ ನಿಯಮಗಳನ್ನು ಮೀರಿ ಬೇಕಾಬಿಟ್ಟಿ ಸಾಲ ನೀಡಿದ್ದು ಯೆಸ್ ಬ್ಯಾಂಕ್​ನ ಪತನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಸಾಲ ಮರುಪಾವತಿ ಸಮಸ್ಯೆಯಿಂದ ಕಂಗಾಲಾಗಿದ್ದ ಯೆಸ್ ಬ್ಯಾಂಕ್ ಮೇಲೆ ಇತ್ತೀಚಿನ ವರ್ಷಗಳಲ್ಲಿ ಹೂಡಿಕೆದಾರರ ವಿಶ್ವಾಸ ಕಡಿಮೆಯಾಗಿತ್ತು.

ಶತಕೋಟಿ ಡಾಲರ್ ಬಂಡವಾಳ ಕ್ರೋಡೀಕರಿಸಲು ಬ್ಯಾಂಕ್ ಹಲವು ವಿಧದಲ್ಲಿ ಯತ್ನಿಸಿ, ವಿಫಲವಾಗಿತ್ತು. ಯೆಸ್ ಬ್ಯಾಂಕಿನ ಶೇಕಡ 11.5 ಸಾಲಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಬ್ಯಾಂಕೇತರ ಹಣಕಾಸು ವಹಿವಾಟು ಹೊಂದಿದವರು ಪಡೆದಿದ್ದಾರೆ ಎಂದು 2018ರಲ್ಲಿ ಬ್ಲೂಂಬರ್ಗ್ ವರದಿ ಮಾಡಿತ್ತು. ಇದೊಂದೇ ಪ್ರಕರಣವಲ್ಲ. ಕೆಲ ತಿಂಗಳ ಹಿಂದಷ್ಟೇ ಹಗರಣವೊಂದರ ಹಿನ್ನೆಲೆಯಲ್ಲಿ ಆರ್​ಬಿಐ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ ವಿರುದ್ಧ ಕ್ರಮ ಕೈಗೊಂಡಿತ್ತು. 2010ರಲ್ಲಿ ಬ್ಯಾಂಕ್ ಆಫ್ ರಾಜಸ್ಥಾನ ವಿರುದ್ಧ ಕ್ರಮ ಕೈಗೊಂಡು, ಅದನ್ನು ಐಸಿಐಸಿಐ ಬ್ಯಾಂಕಿಗೆ ವಿಲೀನ ಮಾಡಲಾಗಿತ್ತು. ಇಂಥ ಬೆಳವಣಿಗೆ, ಹಗರಣಗಳ ಪರಿಣಾಮ ಪ್ರಾಮಾಣಿಕ ಹೂಡಿಕೆದಾರರು ತೊಂದರೆ ಅನುಭವಿಸುವಂತಾದರೆ ಅವ್ಯವಹಾರ ಮಾಡುವವರು ಲಾಭ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಅಕ್ರಮ ಮಾಡುವವರಿಗೆ ಅನುಕೂಲವಾಗಿ, ಬ್ಯಾಂಕುಗಳ ವಿಶ್ವಾಸಾರ್ಹತೆಯ ಮೇಲೆ ಪೆಟ್ಟು ಬೀಳುತ್ತಿದೆ. ಈ ರಂಗ ಜನರ ವಿಶ್ವಾಸಾರ್ಹತೆ ಕಳೆದುಕೊಂಡರೆ ಆಗುವ ಹಾನಿ ಅಷ್ಟಿಷ್ಟಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net