

ಬಾಡಿಗೆ ತಾಯ್ತನ ಸಮಾಜದಲ್ಲಿ ಸದ್ಯ ಚಾಲ್ತಿಯಲ್ಲಿರುವ ದೊಡ್ಡ ವ್ಯವಸ್ಥೆಯಾಗಿಯೇ ಮಾರ್ಪಟ್ಟಿದೆ. ಮಕ್ಕಳಿಲ್ಲದವರು, ಇತರೆ ಸಮಸ್ಯೆ ಅನುಭವಿಸುತ್ತಿರುವವರು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಸಾಧ್ಯವಿದೆ. ಆದರೆ, ಇದು ಉದ್ಯಮವಾಗಿ ಬದಲಾಗಿ, ಹಣಗಳಿಕೆಯ ಉದ್ದೇಶವೇ ಪ್ರಧಾನವಾಗತೊಡಗಿದಾಗ ‘ನಿಕಟ ಸಂಬಂಧಿ ಮಹಿಳೆಯರಿಗೆ ಮಾತ್ರ ಬಾಡಿಗೆ ತಾಯ್ತನದ ಅವಕಾಶ ನೀಡಬೇಕು’ ಎಂದು ಈ ಸಂಬಂಧದ ಕಾಯ್ದೆಯಲ್ಲಿ ಬದಲಾವಣೆ ತರಲಾಗಿತ್ತು. ಆದರೆ, ಅದಕ್ಕೆ ವಿರೋಧ, ಆಕ್ಷೇಪದ ದನಿಗಳು ಕೇಳಿಬಂದಿದ್ದರಿಂದ ಬಾಡಿಗೆ ತಾಯ್ತನ ಕುರಿತ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯ 23 ಸದಸ್ಯರ ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು. ತಿದ್ದುಪಡಿಗೆ ಮಾರ್ಪಾಡು ಸೂಚಿಸಿದ ಆಯ್ಕೆ ಸಮಿತಿ, ಇಚ್ಛೆ ಪಡುವ ಎಲ್ಲ ಮಹಿಳೆಯರಿಗೂ ಬಾಡಿಗೆ ತಾಯ್ತನ ಹೊಂದಲು ಅವಕಾಶ ನೀಡಬೇಕು ಎಂದು ಶಿಫಾರಸು ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವಸಂಪುಟವು ಬುಧವಾರ ಈ ಶಿಫಾರಸಿಗೆ ಅಂಗೀಕಾರ ನೀಡಿದೆ. ಈ ಮೂಲಕ ಬಾಡಿಗೆ ತಾಯ್ತನ ಬಯಸುವ ಎಲ್ಲ ಮಹಿಳೆಯರಿಗೂ ಆ ಹಕ್ಕು ದೊರೆಯಲಿರುವುದು ಮಹತ್ವದ ಬೆಳವಣಿಗೆ.
ಇಂದಿನ ದಿನಗಳಲ್ಲಿ ಇಂಥದ್ದೊಂದು ವ್ಯವಸ್ಥೆ ಅವಶ್ಯವೂ ಅನಿವಾರ್ಯವೂ ಆಗಿರುವುದು ಹೌದು. ಮತ್ತು ಇದನ್ನು ವೈಯಕ್ತಿಕ ಸ್ವಾತಂತ್ರ್ಯದ ಆಯ್ಕೆಯಾಗಿಯೂ ನೋಡಲಾಗುತ್ತದೆ. ಆದರೆ, ಆಧುನಿಕ ಯುಗದಲ್ಲಿ ಇಂಥ ಸವಲತ್ತನ್ನು ಒದಗಿಸುವಾಗ ಸ್ವಾತಂತ್ರ್ಯ ಮತ್ತು ನೈತಿಕತೆ ನಡುವೆ ಸಮತೋಲನವನ್ನೂ ಸಾಧಿಸಬೇಕಾಗುತ್ತದೆ. ಈ ಬಗ್ಗೆ ಗಮನ ನೀಡದಿದ್ದಲ್ಲಿ ವಾಣಿಜ್ಯ/ಹಣಗಳಿಕೆಯ ಉದ್ದೇಶವೇ ಪ್ರಧಾನವಾಗಿ ಮಾರ್ಪಟ್ಟು ನೈತಿಕತೆ ಮರೆಗೆ ಸರಿಯುವ, ಆ ಮೂಲಕ ಸಾಮಾಜಿಕ ಸ್ವಾಸ್ಥ್ಯಕ್ಕೆ ಪೆಟ್ಟುಬೀಳುವ ಆತಂಕವಿದೆ. ತಿದ್ದುಪಡಿ ಮಸೂದೆ ಜಾರಿ ಮಾಡುವಾಗ ಹಾಗಾಗಬಾರದು ಎಂಬ ಕಳಕಳಿ ಅವಶ್ಯ.
ದೇಶದ ಬಾಡಿಗೆ ತಾಯ್ತನದ ಉದ್ಯಮ 28.4 ಶತಕೋಟಿ ರೂಪಾಯಿ ಮೌಲ್ಯವನ್ನು ಮೀರಿದೆ ಎಂಬ ಅಂದಾಜಿದೆ. ಅಲ್ಲದೆ, ಈ ಉದ್ಯಮ ಮಧ್ಯವರ್ತಿಗಳ ಹಿಡಿತದಲ್ಲಿದ್ದು, ಬಾಡಿಗೆ ತಾಯಂದಿರ ಹಾಗೂ ಮಕ್ಕಳ ಶೋಷಣೆ ನಿರಂತರವಾಗಿದೆ. ಅನೇಕ ಸಂದರ್ಭಗಳಲ್ಲಿ ತಾಯಂದಿರ ಪ್ರಾಣಕ್ಕೆ ಕುತ್ತುಂಟಾಗಿದ್ದೂ ಇದೆ. ಕೆಲವು ವಿದೇಶಿಯರು ಮಗುವನ್ನು ಬೇಡ ಎಂದ ಉದಾಹರಣೆಗಳೂ ಇವೆ. ಭಾರತದ ಬಾಡಿಗೆ ತಾಯಂದಿರು ಬಹುತೇಕ ಬಡ ಕುಟುಂಬದ ಹಿನ್ನೆಲೆಯವರು ಅಥವಾ ಅಂಥ ಸನ್ನಿವೇಶಕ್ಕೆ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿಗೆ ಸಿಲುಕಿದವರು. ನಿರುದ್ಯೋಗ ಸಮಸ್ಯೆ, ಮನೆಯ ಆರ್ಥಿಕತೆಯ ಒತ್ತಡಗಳಿರುವುದರಿಂದ ಬಾಡಿಗೆ ತಾಯಂದಿರಾಗಲು ಒಪ್ಪಿಕೊಂಡುಬಿಡುತ್ತಾರೆ. ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಜಪಾನ್ ಮತ್ತು ಸ್ವಿಜರ್ಲೆಂಡ್ಗಳಲ್ಲಿ ಬಾಡಿಗೆ ತಾಯ್ತನದ ಉದ್ಯಮವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಸ್ತುತ 7,000- 8,000 ಸರೋಗಸಿ ಕ್ಲಿನಿಕ್ಗಳು ದೆಹಲಿಯೊಂದರಲ್ಲೇ ಇವೆ. ಬಹುತೇಕ ಎಲ್ಲವೂ ಅನಧಿಕೃತವಾಗಿದ್ದು, ಗುಟ್ಟಾಗಿ ಬಾಡಿಗೆ ತಾಯ್ತನದ ಮನೆಗಳನ್ನು ನಿರ್ವಹಿಸುತ್ತಿವೆ. ಕರ್ನಾಟಕದಲ್ಲಾದರೆ, ಇಂತಹ ಬಾಡಿಗೆ ತಾಯ್ತನಕ್ಕೆ ಒಳಗಾಗುವವರಿಗೆ ಕನಿಷ್ಠ 40 ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿ ತನಕ ಆದಾಯ ಸಿಗುತ್ತಿದೆ ಎನ್ನಲಾಗಿದೆ. ಆದರೆ, ಬಾಡಿಗೆ ತಾಯ್ತನ ಒಪ್ಪಿಕೊಳ್ಳುವ ಮಹಿಳೆಯರ ಶಾರೀರಿಕ, ಮಾನಸಿಕ ಆರೋಗ್ಯಗಳು ಏರುಪೇರಾಗುತ್ತವೆ. ಅವರ ದಾಂಪತ್ಯ ಜೀವನದ ಮೇಲೂ ಅದು ಪರಿಣಾಮ ಬೀರುತ್ತದೆ. ಆ ಕ್ಷಣಕ್ಕೆ ಅವರಿಗೆ ಹಣ ಸಿಗಬಹುದು. ಬಳಿಕ ಆಗುವ ಮಾನಸಿಕ ಆಘಾತ ಅದಕ್ಕಿಂತಲೂ ಹೆಚ್ಚಿನದು. ಈ ಎಲ್ಲ ಅಂಶಗಳನ್ನು ಅವಲೋಕಿಸಿಕೊಂಡು, ಸಮರ್ಪಕವಾದ ಮಾರ್ಗದಲ್ಲಿ ಸಾಗುವುದು ಈಗಿನ ಅಗತ್ಯ.