

ಇತ್ತೀಚೆಗೆ ಸಂಪುಟ ಸೇರಿದ ಹತ್ತು ಹೊಸ ಸಚಿವರಿಗೆ ಸೋಮವಾರ ಖಾತೆ ಹಂಚಿಕೆಯಾಗಿದೆ. ಈ ಮೂಲಕ ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯ ಪಕ್ರಿಯೆ ಸದ್ಯಕ್ಕಂತೂ ಶಮನವಾಗಿದೆ. ಖಾತೆಗಳ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಹೊಸ ಸಚಿವರು ಸೇರಿ ಇಡೀ ಸರ್ಕಾರ ಹೆಚ್ಚು ಪರಿಣಾಮಕಾರಿಯಾಗಿ, ಜನಮುಖಿಯಾಗಿ ಕೆಲಸ ಮಾಡಬೇಕು. ಉಳಿದ ಮೂರು ವರ್ಷಗಳಲ್ಲಿ ಜನರ ಆಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಯತ್ನಿಸಬೇಕು. ಪೂರ್ಣಪ್ರಮಾಣದ ಸರ್ಕಾರ ಈಗ ಅಸ್ತಿತ್ವಕ್ಕೆ ಬಂದಿರುವುದರಿಂದ ವಿಳಂಬಧೋರಣೆಯನ್ನು ಕೊನೆಗಾಣಿಸಿ, ಅಧಿಕಾರಶಾಹಿಗೂ ಚುರುಕು ಮಟ್ಟಿಸಬೇಕು.
ಈ ಮಧ್ಯೆ ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡನೆ ಆಗಲಿದ್ದು, ಹಣಕಾಸು ಕ್ರೋಡೀಕರಣ ಸೇರಿ ಹಲವು ಸವಾಲು ಸರ್ಕಾರದ ಮುಂದೆ ಇವೆ. ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸುವುದಾಗಿ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ, ಆರ್ಥಿಕ ಹಿಂಜರಿತದ ಕರಿನೆರಳು, ತೆರಿಗೆ ಸಂಗ್ರಹದಲ್ಲಿ ಇಳಿಕೆ, ಕೇಂದ್ರದಿಂದ ಪೂರ್ಣಪ್ರಮಾಣದಲ್ಲಿ ಬರದ ಅನುದಾನ, ಹೂಡಿಕೆಗೆ ಉದ್ಯಮವಲಯದ ನಿರಾಸಕ್ತಿ ಹೀಗೆ ನಿರಾಶಾದಾಯಕ ವಾತಾವರಣದ ಮಧ್ಯೆಯೇ ಈ ಸರ್ಕಾರ ಯಾವ ಬಗೆಯ ಬಜೆಟ್ ಮಂಡಿಸಲಿದೆ ಎಂಬ ಕುತೂಹಲ ಜನಸಾಮಾನ್ಯರಲ್ಲಿ ಮಾತ್ರವಲ್ಲ ಆರ್ಥಿಕ ತಜ್ಞರಲ್ಲೂ ನೆಲೆಸಿದೆ.
15ನೇ ಹಣಕಾಸು ಆಯೋಗ ಅನುದಾನದ ಪ್ರಮಾಣವನ್ನು ತಗ್ಗಿಸಿದೆ. ಬಹುತೇಕ ಇಲಾಖೆಗಳಿಗೆ ಬಿಡುಗಡೆ ಆಗಿರುವ ಕೊನೆಯ ಕಂತಿನ ಅನುದಾನದಲ್ಲೂ ಸರ್ಕಾರ ಕಡಿತ ಮಾಡಿದೆ. ರಾಜ್ಯದ ಬಜೆಟ್ ಗಾತ್ರ -ಠಿ; 2.34 ಲಕ್ಷ ಕೋಟಿಗೆ ತಲುಪಿದೆ. ಪ್ರತಿ ವರ್ಷ ಸರಾಸರಿ ಶೇಕಡ 10ರಿಂದ 15ರಷ್ಟು ಹೆಚ್ಚಳ ಸಾಧಿಸಲಾಗುತ್ತಿದೆ. ಅಂದರೆ, ಈ ವರ್ಷ ಬಜೆಟ್ ಗಾತ್ರ -ಠಿ; 2.50 ಲಕ್ಷ ಕೋಟಿಯ ಗಡಿ ದಾಟಬೇಕು. ಆದರೆ, ಈ ಬಜೆಟ್ ಗಾತ್ರ ಕಾಯ್ದಯಕೊಳ್ಳುವುದು ಕಷ್ಟವೆಂದೇ ಹೇಳಲಾಗುತ್ತಿದೆ. ವಿವಿಧ ಇಲಾಖೆಗಳ ಬಜೆಟ್ಪೂರ್ವ ಸಭೆಗಳಲ್ಲೇ ಅನುದಾನದಲ್ಲಿ ಶೇಕಡ 30ರವರೆಗೆ ಕಡಿಮೆ ಮಾಡಿ ಯೋಜನೆ ರೂಪಿಸುವಂತೆ ಸೂಚನೆ ನೀಡಲಾಗುತ್ತಿದೆ. ಕೇಂದ್ರದಿಂದ -ಠಿ; 16,270 ಕೋಟಿ ಜಿಎಸ್ಟಿ ಪಾಲು ಬರಬೇಕಿಗೆ. ಮುಖ್ಯವಾಗಿ, ನೆರೆ ಪರಿಹಾರಕ್ಕೂ ಹಣ ಹೊಂದಿಸಬೇಕಿದೆ. ಆ ಪ್ರದೇಶಗಳಲ್ಲಿ ಪುನರ್ವಸತಿ ಕೆಲಸಗಳಿಗೆ ವೇಗ ತುಂಬಬೇಕಿದೆ.
ಈ ಎಲ್ಲ ಪರಿಸ್ಥಿತಿಗಳಿಂದ ಬಜೆಟ್ ಗಾತ್ರ ಕುಗ್ಗುವ ಮತ್ತು ಪ್ರಮುಖ ಯೋಜನೆಗಳಿಗೆ ಅನುದಾನ ಕಡಿತಗೊಳ್ಳುವ ಅನುಮಾನವಿದೆ. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳು ವಿತ್ತೀಯ ಶಿಸ್ತು ಮತ್ತು ಸಮತೋಲನದ ಬಗ್ಗೆ ಒಲವು ಹೊಂದಿದ್ದಾರೆ. ಒಂದು ವೇಳೆ ಬಜೆಟ್ ಗಾತ್ರ ತಗ್ಗಿದರೆ ಅದರಿಂದ ಸರ್ಕಾರದ ವರ್ಚಸ್ಸಿಗೂ ಧಕ್ಕೆ ಆಗಿ, ಹಣಕಾಸು ಅಡಚಣೆಗಳಿಗೆ ದಾರಿ ಮಾಡಿಕೊಡುತ್ತದೆ. ಪರಿಹಾರ ಮಾರ್ಗಗಳನ್ನು ಹುಡುಕಲೆಂದೇ ಎಲ್ಲ ಇಲಾಖೆಗಳ ಬಜೆಟ್ಪೂರ್ವ ಸಭೆಗಳನ್ನು ವ್ಯವಸ್ಥಿತ ಚೌಕಟ್ಟಿನಲ್ಲಿ ನಡೆಸಲಾಗುತ್ತಿದೆ. ಬಜೆಟ್ನ ಸವಾಲನ್ನು ಸರ್ಕಾರ ಪರಿಣಾಮಕಾರಿಯಾಗಿ ಎದುರಿಸಲಿ ಎಂಬ ಆಶಯ ಜನಸಾಮಾನ್ಯರದ್ದು.