

ದೇಶದ ಎಲ್ಲ ವಲಯ, ರಂಗಗಳ ದೃಷ್ಟಿ ಇಂದು (ಫೆ.1) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ನತ್ತ ನೆಟ್ಟಿದೆ. ತೆರಿಗೆ ಸಂಗ್ರಹದ ಕೊರತೆಯನ್ನು ಹೇಗೆ ನಿಭಾಯಿಸಲಿದ್ದಾರೆ, ಆಟೋಮೊಬೈಲ್, ರಿಯಲ್ ಎಸ್ಟೇಟ್ ಸೇರಿ ಸೊರಗಿರುವ ಹಲವು ವಲಯಗಳಿಗೆ ಹೇಗೆ ಚೈತನ್ಯ ತುಂಬಲಿದ್ದಾರೆ, ಈ ಬಜೆಟ್ ಜನಸಾಮಾನ್ಯರಿಗೆ ಹೊರೆಯಾಗಲಿದೆಯೋ ಅಥವಾ ನಿರಾಳವಾಗಿಸಲಿದೆಯೋ ಹೀಗೆ ಹಲವು ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಆದರೆ, ನಿರೀಕ್ಷೆಗಳ ಭಾರ ಹೆಚ್ಚಿರುವ ಜಟಿಲ ಬಜೆಟ್ ಇದಾಗಿದೆ ಎಂಬುದಂತೂ ವಾಸ್ತವ. ಪ್ರತಿ ಬಜೆಟ್ ಹೊತ್ತಲ್ಲೂ ಒಂದಷ್ಟು ನಿರೀಕ್ಷೆಗಳು ಇದ್ದೇ ಇರುತ್ತವೆ. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಭಾರತದ ಮೇಲೂ ಆಗಿದೆ. ದಶಕದಲ್ಲೇ ಅತ್ಯಂತ ಕಡಿಮೆಯಾದ ಜಿಡಿಪಿ (ಶೇ.4.5) ದಾಖಲಾಗಿದೆ. ವಿತ್ತೀಯ ಕೊರತೆ ಶೇ.3.8ಕ್ಕೆ ಏರುವ ಆತಂಕವೂ ಎದುರಾಗಿದೆ. ಹಾಗಾಗಿಯೇ, ಈ ಬಾರಿ ಬಜೆಟ್ನ ಮುನ್ನ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಯಮಿಗಳ ಜತೆ ಸರಣಿ ಸಭೆ ನಡೆಸಿ, ಸಲಹೆಗಳನ್ನು ಪಡೆದಿದ್ದಾರೆ.
ಈ ಮಧ್ಯೆ, ಬಜೆಟ್ ಮುನ್ನಾದಿನ ವಾಡಿಕೆಯಂತೆ ರಾಷ್ಟ್ರಪತಿಗಳ ಭಾಷಣದ ಬಳಿಕ ವಿತ್ತ ಸಚಿವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ (ಜಿಡಿಪಿ) ಶೇಕಡ 5ರಷ್ಟಿರಲಿದೆ. 2021ಕ್ಕೆ ಕೊನೆಯಾಗುವ ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ.6-6.5ರಷ್ಟು ಇರಲಿದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ. ಕಳೆದ ವರ್ಷದ ಆರ್ಥಿಕ ಸಮೀಕ್ಷೆಯಲ್ಲಿ 2019-20 ಹಣಕಾಸು ವರ್ಷದಲ್ಲಿ ಜಿಡಿಪಿ ಶೇಕಡ 7ರಷ್ಟಿರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅದು ಶೇ.4.5ಕ್ಕೆ ಕುಸಿದಿದೆ.
ಮುಖ್ಯವಾಗಿ, ಕಳವಳ ಮೂಡಿಸಿರುವ ಮತ್ತೊಂದು ಸಂಗತಿ ಎಂದರೆ ಉದ್ಯೋಗ ನಷ್ಟ. ಆರ್ಥಿಕ ಹಿಂಜರಿತದ ಪರಿಣಾಮ ನಿರುದ್ಯೋಗ ಪ್ರಮಾಣವೂ ಹೆಚ್ಚುತ್ತಿದೆ. ಹಲವು ವಲಯಗಳಲ್ಲಿ ಉದ್ಯೋಗ ಕಡಿತ ಸಾಮಾನ್ಯ ಎಂಬಂತಾಗಿದೆ. ಈ ಸಮಸ್ಯೆ ಬಗೆಹರಿಸಲು ನಿರ್ಮಲಾ ಸೀತಾರಾಮನ್ ಚೀನಾ ಮಾದರಿ ಸೂತ್ರವನ್ನು ಮುಂದಿಟ್ಟಿದ್ದು, ಐದು ವರ್ಷಗಳಲ್ಲಿ ನಾಲ್ಕು ಕೋಟಿ ಉದ್ಯೋಗಸೃಷ್ಟಿಯ ಬಗ್ಗೆ ಮಾತನಾಡಿದ್ದಾರೆ. ‘ಮೇಕ್ ಇನ್ ಇಂಡಿಯಾ’ ಅಭಿಯಾನದಲ್ಲಿ ‘ಅಸೆಂಬ್ಲಿಂಗ್ ಇನ್ ಇಂಡಿಯಾ ಫಾರ್ ವರ್ಲ್ಡ್’ನ್ನು ಸೇರಿಸಿ ಉದ್ಯೋಗಸೃಷ್ಟಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ. 2025ರ ಹೊತ್ತಿಗೆ 4 ಕೋಟಿ, 2030ರ ಹೊತ್ತಿಗೆ 8 ಕೋಟಿ ಉದ್ಯೋಗಸೃಷ್ಟಿಯ ಗುರಿ ಹೊಂದಲಾಗಿದೆ.
ಹಾಗೆಯೇ, 2019ರ ಚುನಾವಣೆ ವೇಳೆ ಬಿಜೆಪಿ ದೇಶದ ಆರ್ಥಿಕತೆಯನ್ನು 2025ರ ವೆಳೆಗೆ 5 ಟ್ರಿಲಿಯನ್ ಡಾಲರ್ಗೆ ತಲುಪಿಸುವ ಆಶ್ವಾಸನೆ ನೀಡಿದೆ. ಈ ನಿಟ್ಟಿನಲ್ಲಿ ಮೂಲಸೌಕರ್ಯ ಸೃಷ್ಟಿ ಮತ್ತು ಅಭಿವೃದ್ಧಿಗಾಗಿ 1.4 ಟ್ರಿಲಿಯನ್ ಡಾಲರ್ ವಿನಿಯೋಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಉತ್ತಮ ನಿರ್ಧಾರ. ಎಲ್ಲ ರಂಗಗಳ ಮೂಲಸೌಕರ್ಯ ವೃದ್ಧಿಯಾಗದೆ ಆರ್ಥಿಕತೆ ಬಲಗೊಳ್ಳಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಮನಗಾಣಲಾಗಿದೆ. ಉಳಿದ ನಿರೀಕ್ಷೆ, ಸವಾಲುಗಳಿಗೆ ಬಜೆಟ್ ಹೇಗೆ ಸ್ಪಂದಿಸಲಿದೆ ಎಂಬುದು ಕುತೂಹಲಕರ.