ಸಂಪಾದಕೀಯ| ಗೋಹತ್ಯೆ ನಿಷೇಧ ಕಾಯ್ದೆ: ಸವಾಲುಗಳನ್ನು ಬಗೆಹರಿಸಿ

cow-slaughter-ban-bill-pass
Published on

ಸಮಾಜದ ಕೆಲ ಸಮಸ್ಯೆಗಳ ಪರಿಹಾರಕ್ಕೆ ಅಥವಾ ಹಳೆಯ ಜಾಡ್ಯಗಳ ನಿವಾರಣೆಗೆ ಹೊಸ ಕಾಯ್ದೆಯನ್ನು ಜಾರಿಗೆ ತರುವುದುಂಟು. ಸುತ್ತಲೂ ನಡೆಯುವ ಸ್ಥಿತ್ಯಂತರ ಮತ್ತು ಅದಕ್ಕೆ ಉತ್ತರವಾಗಿ ಕಾಯ್ದೆಗಳನ್ನು ರೂಪಿಸುವುದೇನೋ ನಿಜ. ಆದರೆ, ಇವು ಪರಿಣಾಮಕಾರಿಯಾಗಿ ಜಾರಿಗೆ ತರುವ ಜತೆಗೆ, ಸಮಸ್ಯೆಯ ಮೂಲವನ್ನು ನಿವಾರಿಸುವಂತಿತಬೇಕು. ಇಂಥ ಜಿಜ್ಞಾಸೆ, ಚಿಂತನೆಯನ್ನು ಮುಂದಿರಿಸಿಕೊಂಡೇ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ರೂಪದಲ್ಲಿ ಅನುಷ್ಠಾನಕ್ಕೆ ತರಲು ಸಿದ್ಧವಾಗಿದೆ. ಈ ಸಂಬಂಧ ಸಾಧಕ-ಬಾಧಕಗಳ ಕುರಿತಂತೆ ಕ್ರಿಯಾಯೋಜನೆ ರೂಪಿಸಲು ಮುಂದಾಗಿದೆ.

ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬರಬೇಕು ಎಂಬ ಬೇಡಿಕೆ ಹಲವು ದಶಕಗಳಿಂದಲೂ ಇದೆ. ಆದರೆ, ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ರಾಜಕೀಯ ಪಕ್ಷಗಳು/ಸರ್ಕಾರಗಳು ‘ಕಾದುನೋಡುವ’ ತಂತ್ರವನ್ನೇ ಅನುಸರಿಸುತ್ತಿದ್ದವು. ಹಿಂದೊಮ್ಮೆ ಬಿಜೆಪಿ ಸರ್ಕಾರ ಈ ಸಂಬಂಧ ಕಾಯ್ದೆ ತರಲು ಹೊರಟಿತ್ತಾದರೂ, ಸಾಧ್ಯವಾಗಿರಲಿಲ್ಲ. ಈ ಬಾರಿ ವಿಧಾನ ಪರಿಷತ್ತಿನ ಗಲಾಟೆಯಿಂದ ಮತ್ತೆ ಇಕ್ಕಟ್ಟಿನ ಸ್ಥಿತಿ ಸೃಷ್ಟಿಯಾಗಿರುವುದರಿಂದ ಸುಗ್ರೀವಾಜ್ಞೆಯ ಅಸ್ತ್ರ ಪ್ರಯೋಗಿಸಲು ಹೊರಟಿದೆ.

ಈ ಕಾಯ್ದೆ ಬರೀ ಭಾವನಾತ್ಮಕವಾಗಿ ರೂಪಿಸಿದರೆ ಪ್ರಯೋಜನವಿಲ್ಲ ಎಂಬ ವಾಸ್ತವ ಅರ್ಥಮಾಡಿಕೊಂಡಿರುವ ಸರ್ಕಾರ ಗೋವುಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ 3-4 ಗೋಶಾಲೆ ಆರಂಭಿಸಲು ಉದ್ದೇಶಿಸಿದೆ. ಕರ್ನಾಟಕದಲ್ಲಿ 145 ಗೋಶಾಲೆಗಳಿದ್ದರೆ, ಉತ್ತರ ಪ್ರದೇಶದಲ್ಲಿ 1500ಕ್ಕೂ ಅಧಿಕ ಗೋಶಾಲೆ, 2500 ಗೋವು ಶೆಲ್ಟರ್​ಗಳಿವೆ. ಅಂದರೆ, ರಾಜ್ಯದಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಬೇಕಿದ್ದು. ಅದಕ್ಕೆ ಪೂರಕ ವ್ಯವಸ್ಥೆ ರೂಪಿಸಬೇಕಾಗಿದೆ. ಗೋಹತ್ಯೆ ನಿಷೇಧ ಜಾರಿಯ ಬಳಿಕ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಳವಾಗುವ ಮತ್ತು ಗೋಶಾಲೆಗಳ ಸ್ಥಾಪನೆಯಿಂದ ಉದ್ಯೋಗಾವಕಾಶಗಳು ಜಾಸ್ತಿಯಾಗುವ ಸಾಧ್ಯತೆ ಇದೆ. ದೇಸೀ ತಳಿಗಳ ಸಂವರ್ಧನೆ ಅನುಕೂಲವಾಗಲಿದ್ದು, ಗೋವು ಉತ್ಪನ್ನಗಳ ಮಾರಾಟವೂ ಹೆಚ್ಚಲಿದೆ. ಆದರೆ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಲವು ಸವಾಲುಗಳೂ ಇವೆ. ಈ ಕುರಿತಂತೆ ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಮುಂದಡಿ ಇಡುವುದು ಅಗತ್ಯ. ಮಾಂಸ ಮತ್ತು ಚಮೋದ್ಯಮಕ್ಕೆ ಪ್ರತಿಕೂಲ ಪರಿಣಾಮವಾಗುತ್ತದೆ ಎಂಬ ಕೂಗು ಈಗಾಗಲೇ ಒಂದು ವಲಯದಿಂದ ಕೇಳಿಬರುತ್ತಿದ್ದು, ಅಂಥ ಕಳವಳಗಳ ಬಗ್ಗೆಯೂ ಗಮನ ಹರಿಸುವುದು ಅಗತ್ಯ. ಪಶು ಸಂಗೋಪನೆ ಸಚಿವರು ರಾಜ್ಯಾದ್ಯಂತ ಪ್ರವಾಸ ಮಾಡಿ, ಗೋಹತ್ಯೆ ನಿಷೇಧದ ಸಾಧಕ-ಬಾಧಕಗಳನ್ನು ಅರಿಯಲು ಮುಂದಾಗಿರುವುದು ಸಕಾಲಿಕ ನಡೆ. ಕಾಯ್ದೆಯ ಸಮರ್ಪಕ ಅನುಷ್ಠಾನದ ಮೂಲಕ ಗೋವಂಶದ ರಕ್ಷಣೆಯಾಗಬೇಕೆ ಹೊರತು, ಅನಗತ್ಯ ಹೊಸ ಸಮಸ್ಯೆಗಳನ್ನು ಸೃಷ್ಟಿಸಬಾರದು. ಈ ಕಾಳಜಿಯಿಂದ ಮುಂದಿನ ಹೆಜ್ಜೆಗಳನ್ನು ಇರಿಸುವುದು ಸೂಕ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net