ಸಂಪಾದಕೀಯ| ಸಂಪುಟ ವಿಸ್ತರಣೆಯಿಂದ ಸರ್ಕಾರಕ್ಕೆ ಬಲ, ಆಡಳಿತಕ್ಕೆ ಸಿಗಲಿ ವೇಗ

vidhana soudha 1
Published on
ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬುಧವಾರ ಪೂರ್ಣಗೊಂಡಿದೆ. ಕಳೆದ ಹಲವು ತಿಂಗಳಿಂದ ಸಚಿವ ಆಕಾಂಕ್ಷಿ ಶಾಸಕರು ಸಂಪುಟ ವಿಸ್ತರಣೆಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದರು. ಗ್ರಾಮ ಪಂಚಾಯಿತಿ ಚುನಾವಣೆಗಳು ಬಂದಿದ್ದರಿಂದ ಈ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಈ ನಡುವೆ, ಕೆಲವರು ನಾಯಕತ್ವ ಬದಲಾವಣೆ ಆಗಲಿದೆ ಎಂಬ ಊಹಾಪೋಹವನ್ನೂ ಸೃಷ್ಟಿಸಿದರು. ಈ ಎಲ್ಲ ರಾಜಕೀಯ ಗೊಂದಲಗಳಿಗೆ ಅಂತ್ಯ ಹಾಡುವುದು ಅಗತ್ಯವಾಗಿತ್ತು. ಕೊನೆಗೂ, ಸಂಪುಟಕ್ಕೆ ಏಳು ಜನರು ಸೇರ್ಪಡೆಗೊಂಡಿದ್ದಾರೆ. ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಸ್.ಅಂಗಾರ, ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್, ಆರ್.ಶಂಕರ್, ಸಿ.ಪಿ.ಯೋಗೇಶ್ವರ್ ನೂತನ ಸಚಿವರು. ಸಂಪುಟ ವಿಸ್ತರಣೆ ಬೆನ್ನಲ್ಲೇ ಸಾಮಾಜಿಕ ನ್ಯಾಯ ಸಾಧಿಸಿಲ್ಲ, ಪ್ರಾದೇಶಿಕ ಸಮತೋಲನಕ್ಕೆ ಗಮನ ನೀಡಿಲ್ಲ ಎಂಬ ಅಸಮಾಧಾನಗಳೂ ಎದ್ದಿವೆ. ಕೆಲ ಶಾಸಕರು ಬಹಿರಂಗವಾಗಿಯೇ ಅತೃಪ್ತಿ ಹೊರಹಾಕಿದ್ದಾರೆ. ಸಂಪುಟ ವಿಸ್ತರಣೆಯಂಥ ಪ್ರಮುಖ ರಾಜಕೀಯ ಬೆಳವಣಿಗೆ ವೇಳೆ ಇಂಥ ಘಟನೆಗಳು ಸಹಜವಾದರೂ, ಸರ್ಕಾರ ಅಸಮಾಧಾನದ ಗಂಭೀರತೆಯನ್ನು ಅರ್ಥಮಾಡಿಕೊಂಡು, ಅದಕ್ಕೆ ಸೂಕ್ತವಾಗಿ ಸ್ಪಂದಿಸಬೇಕು.

ಈಗ ಮುಖ್ಯವಾಗಿ ಆಗಬೇಕಿರುವ ಕೆಲಸ ಆಡಳಿತಕ್ಕೆ ವೇಗ ನೀಡುವುದು. ಯಾವುದೇ ಸಬೂಬನ್ನು ಹೇಳದೆ ಅಭಿವೃದ್ಧಿ ಕಾರ್ಯಗಳು, ಹೊಸ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬರಬೇಕು. ಕರೊನಾ ತಂದೊಡ್ಡಿದ ಸಮಸ್ಯೆಯಿಂದ ಒಂದೆಡೆ ಆರ್ಥಿಕ ನಷ್ಟವಾದರೆ, ಮತ್ತೊಂದೆಡೆ ಆಡಳಿಯಂತ್ರ ಸ್ತಬ್ಧಗೊಂಡಿತ್ತು. ಇಂದಿಗೂ ಅದೆಷ್ಟೋ ಸರ್ಕಾರಿ ಕಚೇರಿಗಳಲ್ಲಿ ಎಂದಿನಂತೆ ಕೆಲಸ ನಡೆಯುತ್ತಿಲ್ಲ. ಕರೊನಾವನ್ನು ನೆಪ ಮಾಡಿಕೊಂಡು ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಕರೊನಾಗೆ ಲಸಿಕೆ ಕೂಡ ಬಂದಿದ್ದು, ಜನವರಿ 16ರಿಂದ ಇದರ ವಿತರಣೆ ಕಾರ್ಯ ಆರಂಭವಾಗಲಿದೆ. ಈ ಇಡೀ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕಿದೆ. ಲಸಿಕೆ ವಿತರಣೆ ಸಮರ್ಪಕವಾಗಿ ನಡೆದು ಬಿಟ್ಟರೆ ಕರೊನಾ ವಿರುದ್ಧದ ಯುದ್ಧದಲ್ಲಿ ಮಹತ್ವದ ಜಯ ದಾಖಲಿಸಿದಂತೆ. ಇದಕ್ಕಾಗಿ ಇಲಾಖೆಗಳ ನಡುವೆ ಸಮನ್ವಯ, ಸಹಕಾರ ಅತ್ಯಗತ್ಯ.

ಇನ್ನು, ಎಷ್ಟೋ ಇಲಾಖೆಗಳಲ್ಲಿ ಬೆಟ್ಟದಷ್ಟು ಕೆಲಸಗಳು ಬಾಕಿ ಇವೆ. ಹೊಸ ಸಚಿವರು ಅವರವರ ಖಾತೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕುಂದುಕೊರತೆ, ಸಮಸ್ಯೆಗಳ ನಿವಾರಣೆ ಜತೆಗೆ ಇಲಾಖೆ/ವಿಭಾಗಗಳಿಗೆ ಕಾಯಕಲ್ಪ ನೀಡುವುದು ಸಚಿವರ ಆದ್ಯತೆ ಆಗಬೇಕು. ಪ್ರತೀ ಇಲಾಖೆಯ ಕಾರ್ಯವೈಖರಿಯನ್ನು ಅವಲಂಬಿಸಿಯೇ ಸರ್ಕಾರದ ದಕ್ಷತೆ, ವರ್ಚಸ್ಸು ನಿರ್ಧರಿತವಾಗುತ್ತದೆ. ಹಾಗಾಗಿ, ಕಾಲಮಿತಿ ಹಾಕಿಕೊಂಡು, ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಕೆಲಸ ಮಾಡಬೇಕು. ಅಲ್ಲದೆ, ಸಚಿವರು ಎಲ್ಲ ಜಿಲ್ಲೆಗಳ ಪ್ರವಾಸ ಮಾಡುವುದಿಲ್ಲ, ಹೆಚ್ಚು ಅವಧಿ ಬೆಂಗಳೂರಿನಲ್ಲೇ ಠಿಕಾಣಿ ಹೂಡಿರುತ್ತಾರೆ ಎಂಬ ಆರೋಪ ಜನಸಾಮಾನ್ಯರದ್ದು. ರಾಜ್ಯಾದ್ಯಂತ ಪ್ರವಾಸ ಮಾಡಿ ಇಲಾಖೆಯ ಯೋಜನೆ, ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಚಿವರು ಮುಂದಾಗಬೇಕು. ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲ ಒಂದು ಸವಾಲು ಎದುರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನಾದರೂ ನಿರಾಳವಾಗಿ ಆಡಳಿತಯಂತ್ರಕ್ಕೆ ವೇಗ ನೀಡುವತ್ತ ಗಮನ ನೀಡಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net