

ಪಳೆಯುಳಿಕೆ ಇಂಧನಗಳಾದ ಪೆಟ್ರೋಲ್ ಇತ್ಯಾದಿಗಳಿಂದ ಪರಿಸರದ ಮೇಲೆ ಹೆಚ್ಚು ಹಾನಿ ಉಂಟಾಗುವುದಲ್ಲದೆ, ಮಾನವನ ಆರೋಗ್ಯದ ಮೇಲೂ ದುಷ್ಪರಿಣಾಮ ಆಗುತ್ತದೆ ಎಂಬುದು ಗೊತ್ತಿರುವಂಥದೇ. ಆದರೆ, ಸಂಪರ್ಕ ಸಾಧನಗಳಲ್ಲಿ ಸದ್ಯ ವ್ಯಾಪಕವಾಗಿ ಬಳಕೆಯಲ್ಲಿರುವ ಈ ಇಂಧನಗಳನ್ನು ಏಕ್ದಂ ಆಗಿ ನಿಲ್ಲಿಸಲು ಸಾಧ್ಯವಿಲ್ಲ. ಇದರ ಬಳಕೆಯನ್ನು ಕ್ರಮೇಣ ತಗ್ಗಿಸುತ್ತ ಬರಬೇಕಾದುದು ಅನಿವಾರ್ಯ. ಇಂಥ ಹೊತ್ತಿನಲ್ಲಿ ಪರ್ಯಾಯ ಅಥವಾ ನವೀಕರಿಸಬಹುದಾದ ಇಂಧನ ಮೂಲಗಳತ್ತ ಒತ್ತು ಅನಿವಾರ್ಯ. ಈಗಿನ ಪೀಳಿಗೆ ಮಾತ್ರವಲ್ಲ ನಾಳಿನ ಜಗತ್ತಿನ ಆರೋಗ್ಯದ ಹಿನ್ನೆಲೆಯಲ್ಲಿ ಸಹ ಇದು ಅಗತ್ಯ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೀತಿಗಳು ಪ್ರಮುಖ ಪಾತ್ರ ವಹಿಸುತ್ತವೆ.
ಈಚಿನ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಆಡಳಿತಾತ್ಮಕವಾಗಿ ಕೆಲ ನೀತಿನಿರ್ಣಯಗಳಾಗುತ್ತಿರುವುದು ಗಮನಾರ್ಹ. ಹಾಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಸರ್ಕಾರವು ಎಥೆನಾಲ್, ಹಸಿರು ಜಲಜನಕ ಮತ್ತು ಬಯೋಮಾಸ್ ಸೇರಿ ಪಳೆಯುಳಿಕೆಯೇತರ ಇಂಧನಗಳ ಬಳಕೆಯನ್ನು ಉತ್ತೇಜಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿರುವುದು ಉಲ್ಲೇಖಾರ್ಹ (ಲೋಕಸಭೆ ಕಳೆದ ಆಗಸ್ಟ್ನಲ್ಲಿ ಈ ಮಸೂದೆಯನ್ನು ಅನುಮೋದಿಸಿದೆ) ಜಾಗತಿಕ ಹವಾಮಾನ ಬದಲಾವಣೆ ಕುರಿತಾದ ವಿಷಯವೂ ಇದರಲ್ಲಿ ಅಡಕವಾಗಿರುವುದು ವಿಶೇಷ. ಜಾಗತಿಕ ತಾಪಮಾನದ ಹೆಚ್ಚಳದಿಂದಾಗುತ್ತಿರುವ ದುಷ್ಪ ರಿಣಾಮಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವ ದೇಶಗಳ ನಡುವೆ ಪ್ಯಾರಿಸ್ ಒಡಂಬಡಿಕೆ ಏರ್ಪಟ್ಟಿದ್ದು, ಈ ಒಪ್ಪಂದಕ್ಕೆ ಸಹಿಹಾಕಿದ ಪ್ರತಿ ದೇಶವೂ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಬಾಧ್ಯಸ್ಥವಾಗಿದ್ದು, ಈ ದಿಕ್ಕಿನಲ್ಲಿ ಕೈಗೊಂಡ ಕ್ರಮಗಳನ್ನು ಬಹಿರಂಗಪಡಿಸಬೇಕಾಗುತ್ತದೆ.
ಭಾರತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಹಲವು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗ ಮಂಡನೆಯಾದ ಹಸಿರು ಇಂಧನ ಉತ್ತೇಜನ ಮಸೂದೆ ಸಹ ಈ ಬಗ್ಗೆ ಗಮನಹರಿಸಿದೆ. ‘ನಮ್ಮ ಜನಸಂಖ್ಯೆಯು ಜಾಗತಿಕ ಜನಸಂಖ್ಯೆಯ ಶೇ.17ರಷ್ಟಿದ್ದರೂ, ಇಂಗಾಲದ ಡೈ ಆಕ್ಸಯಡ್ ಹೊರಸೂಸುವಿಕೆಯಲ್ಲಿ ಕೇವಲ ಶೇ.3.4 ಪಾಲು ನಮ್ಮದಿದೆ’ ಎಂದು ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ. ಕೆಲ ಅಭಿವೃದ್ಧಿ ಹೊಂದಿದ ದೇಶಗಳು ಜಾಗತಿಕ ತಾಪಮಾನ ವಿಷಯದಲ್ಲಿ ಕ್ರಮಕ್ಕೆ ಮೀನಮೇಷ ಎಣಿಸುವುದನ್ನು ಕಂಡಾಗ, ಬೇರೆ ದೇಶದ ಮೇಲೆ ಗೂಬೆ ಕೂರಿಸುವುದನ್ನು ಕಂಡಾಗ, ಭಾರತದ ಬದ್ಧತೆಯ ಅರಿವಾಗುತ್ತದೆ.
ಭಾರತವು ತೈಲಕ್ಕಾಗಿ ಬಹುತೇಕವಾಗಿ ವಿದೇಶಗಳನ್ನು ಅವಲಂಬಿಸಿದ್ದು, ದೇಶದ ವಾರ್ಷಿಕ ಇಂಧನ ಆಮದು ವೆಚ್ಚು ಐದಾರು ಲಕ್ಷ ಕೋಟಿ ರೂಪಾಯಿಯಷ್ಟಿದೆ. ಈ ಬೃಹತ್ ಮೊತ್ತ ತಗ್ಗಿದಷ್ಟು ದೇಶಕ್ಕೆ ಹಾಗೂ ಜನರಿಗೇ ಅನುಕೂಲ. ಈ ಹಿನ್ನೆಲೆಯಲ್ಲಿ ಹಸಿರು ಇಂಧನ ಬಳಕೆ ಹೆಚ್ಚಳವಾಗುವುದು ಅಪೇಕ್ಷಣೀಯ. ಅಲ್ಲದೆ, ಇದರಿಂದ ದೇಶೀಯವಾಗಿ ಉದ್ಯೋಗಸೃಷ್ಟಿಗೂ ನೆರವಾಗುತ್ತದೆ. ಹೀಗಾಗಿಯೇ ಕೆಲ ರಾಜ್ಯಗಳು ಎಲೆಕ್ಟ್ರಿಕ್ ವಾಹನ ಖರೀದಿಗೆ ಸಹಾಯಧನ ನೀಡುತ್ತಿವೆ. ಹಾಗೇ, ಇ-ವಾಹನಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನೀತಿಗಳನ್ನು ಪ್ರಕಟಿಸುತ್ತಿವೆ. ಸರ್ಕಾರದ ಯೋಜನೆಗಳು, ಒತ್ತಾಸೆ ಹಾಗೂ ಸಾರ್ವಜನಿಕರ ವಿವೇಚನಾಯುಕ್ತ ಇಂಧನ ಬಳಕೆಯಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಹಣದ ಉಳಿತಾಯ ಹಾಗೂ ಪರಿಸರ ಸಂರಕ್ಷಣೆ ಎರಡೂ ಆಯಾಮ ಇದಕ್ಕಿದೆ. ಈಗ ಮಂಡನೆಯಾಗಿರುವ ಹಸಿರು ಇಂಧನ ಬಳಕೆ ಉತ್ತೇಜನ ಮಸೂದೆಯಿಂದ ಇನ್ನಷ್ಟು ಪುಷ್ಟಿ ಸಾಧ್ಯತೆ ಇದೆ.