ವಿಜಯವಾಣಿ ಸಂಪಾದಕೀಯ; ಮತದಾರರ ಗುರುತಿನ ಚೀಟಿಯಲ್ಲಿ ಕ್ರಾಂತಿಕಾರಿ ಸುಧಾರಣೆ

EDITORIAL
Published on

ಎಲ್ಲ ರಂಗಗಳಲ್ಲೂ ತಂತ್ರಜ್ಞಾನದ ಬಳಕೆ ವ್ಯಾಪಕವಾಗಿದೆ. ಪ್ಲಾಸ್ಟಿಕ್ ಮನಿ, ಡಿಜಿಟಲ್ ವಹಿವಾಟಿನ ಹೆಚ್ಚಳ ಹೀಗೆ ಹಲವು ಬದಲಾವಣೆಗಳು ಶ್ರಮ ಮತ್ತು ಸಮಯವನ್ನು ಉಳಿಸುವಲ್ಲಿ ಸಹಾಯಕವಾಗಿವೆ. ಹಲವುಬಗೆಯ ಆಪ್​ಗಳು ತಂತ್ರಜ್ಞಾನ ಅನ್ವೇಷಣೆಯ ಲಾಭವನ್ನು ದೊರಕಿಸಿ ಕೊಡುತ್ತಿವೆ.

ಹಾಗೆಯೇ, ಭಾರತದ ಚುನಾವಣಾ ಆಯೋಗ ಕೂಡ ಕಾಲಕಾಲಕ್ಕೆ ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಂಡು, ಇಡೀ ಚುನಾವಣೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಿಸಿದೆ. ಈಗ, ಇವಿಎಂಗಳ ಬಳಕೆಯಿಂದ ಫಲಿತಾಂಶವನ್ನು ಸ್ವಲ್ಪ ಸಮಯದಲ್ಲೇ ಪಡೆಯಲು ಸಾಧ್ಯವಾಗುತ್ತಿದೆ. ಆದರೆ, ಮತದಾರರ ಗುರುತಿನ ಚೀಟಿ ಸೇರಿ ಹಲವು ಆಯಾಮಗಳಲ್ಲಿ ಕ್ರಾಂತಿಕಾರಿ ಸುಧಾರಣೆಗಳು ಆಗಬೇಕಿದೆ ಎಂಬುದು ಅಷ್ಟೇ ವಾಸ್ತವ. ಈ ನಿಟ್ಟಿನಲ್ಲಿ ಸಮಿತಿಯೊಂದು ಒಲವು ತೋರಿಸಿದ್ದು, ಹಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಈ ಮೂಲಕ ಮತ್ತಷ್ಟು ಜನಸ್ನೇಹಿಯಾಗುವ, ತಂತ್ರಜ್ಞಾನಸ್ನೇಹಿಯಾಗುವ ಆಶಾವಾದ ಮೂಡಿಸಿದೆ.

ಮತದಾರರ ಡಿಜಿಟಲ್ ಗುರುತು ಚೀಟಿ (ಎಪಿಕ್ ಕಾರ್ಡ್), ನಾಮಪತ್ರಗಳ ಸಲ್ಲಿಕೆ (ಇ-ಫೈಲಿಂಗ್) ಸೇರಿ ಮತದಾನ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಿಸುವ ಬಗ್ಗೆ ಚುನಾವಣಾ ಆಯೋಗದ ತಜ್ಞರ ವಿವಿಧ ಸಮಿತಿಗಳು ಶಿಫಾರಸು ಮಾಡಿವೆ. ಭಾವೀ ಮತದಾರರನ್ನು 17ನೇ ವಯಸ್ಸಿನಲ್ಲೇ ಶಾಲಾ-ಕಾಲೇಜುಗಳಲ್ಲಿ ಆನ್​ಲೈನ್ ಮೂಲಕ ನೋಂದಣಿ ಮಾಡುವುದು, ಮತದಾರರಾಗಿ ನೋಂದಾಯಿಸುವ ಅವಧಿಯನ್ನು ಸದ್ಯ ವರ್ಷದಲ್ಲಿ ನಾಲ್ಕು ಬಾರಿ ನೀಡಲಾಗುತ್ತಿದ್ದು, ಇದನ್ನು ಎರಡು ಬಾರಿಗೆ ಇಳಿಸುವುದು (ಜನವರಿ 1 ಮತ್ತು ಜುಲೈ 1), ಮತದಾರರ ನೋಂದಣಿ, ವಿಳಾಸ ಬದಲಾವಣೆ, ಹೆಸರು ತೆಗೆದು ಹಾಕುವುದು, ಮೊದಲಾದವುಗಳಿಗೆ ಈಗ ಬೇರೆ ಬೇರೆ ಅರ್ಜಿಗಳು ಸಲ್ಲಿಸಬೇಕಿದೆ. ಅದರ ಬದಲಿಗೆ ಒಂದೇ ಸರಳೀಕೃತ ಅರ್ಜಿಯನ್ನು ಜಾರಿಗೆ ತರುವುದು ಸೇರಿ ಹಲವು ಸುಧಾರಣೆಗಳ ಬಗ್ಗೆ ಶಿಫಾರಸು ಮಾಡಲಾಗಿದ್ದು, ಉತ್ತಮ ಹೆಜ್ಜೆ ಎಂದೇ ಹೇಳಬಹುದು.

ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಸಲಹೆ ನೀಡುವಂತೆ ಆಯೋಗ 2019ರ ಲೋಕಸಭಾ ಚುನಾವಣೆಗಳ ನಂತರ ಒಂಬತ್ತು ಸಮಿತಿಗಳನ್ನು ರಚಿಸಿತ್ತು ಎಂಬುದು ಗಮನಾರ್ಹ. 25 ಪ್ರಮುಖ ಶಿಫಾರಸುಗಳನ್ನು ಆಯೋಗದ ವೆಬ್​ಸೈಟಿನಲ್ಲಿ ಪ್ರಕಟಿಸಲಾಗಿದೆ. ಮುಖ್ಯವಾಗಿ, ಆನ್​ಲೈನ್ ಮೂಲಕ ಮತ ಚಲಾಯಿಸುವಂತಾಗಬೇಕು. ಈ ವ್ಯವಸ್ಥೆ ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಇದೆ.

ಇದರಿಂದ ಮತದಾನದ ಪ್ರಮಾಣವೂ ಹೆಚ್ಚಿ, ಪ್ರಜಾತಂತ್ರದ ಮೌಲ್ಯಗಳು ಶಕ್ತಿಶಾಲಿ ಆಗುತ್ತವೆ ಎಂಬ ಬೇಡಿಕೆ ಕಳೆದ ಲೋಕಸಭಾ ಚುನಾವಣೆ ಹೊತ್ತಲ್ಲೇ ಮಾರ್ದನಿಸಿತ್ತು. ಅಲ್ಲದೆ, ಈಗಿರುವ ಮತದಾರರ ಗುರುತಿನ ಚೀಟಿ ಮಾದರಿ ಹಲವು ಬಗೆಯ ದೋಷಗಳನ್ನು (ಹೆಸರು, ಊರು, ವಿಳಾಸದಲ್ಲಿ ತಪು್ಪ) ಹೊಂದಿರುವುದು ಕೂಡ ವಾಸ್ತವ. ಇದನ್ನು ಡಿಜಿಟಲ್​ಗೊಳಿಸಿದರೆ ಅನುಕೂಲ ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು.

ಈ ನಿಟ್ಟಿನಲ್ಲಿ ಆಯೋಗವೂ ಚಿಂತನೆ ನಡೆಸಿದ್ದು, ಒಳ್ಳೆಯದೇ. ಆದರೆ, ಭಾರತದಂಥ ಬೃಹತ್ ದೇಶದಲ್ಲಿ ಹೊಸ ವ್ಯವಸ್ಥೆಗಳನ್ನು ಪರಿಚಯಿಸುವಾಗ ಸಾಕಷ್ಟು ಪೂರ್ವತಯಾರಿ ಮಾಡಿಕೊಳ್ಳಬೇಕಾಗುತ್ತದೆ, ಅದರ ಸಾಧಕ-ಬಾಧಕಗಳನ್ನೂ ಗಮನಿಸಬೇಕಾಗುತ್ತದೆ. ಆಧಾರ್ ಕಾರ್ಡ್​ನ ವಿಷಯದಲ್ಲಿ ಮಾಹಿತಿ ಸೋರಿಕೆಯ ವಿಷಯ ಮುನ್ನೆಲೆಗೆ ಬಂದಿದ್ದು ಗೊತ್ತೇ ಇದೆ. ಮತದಾರರ ಗುರುತಿನ ಚೀಟಿಗಳನ್ನು ಡಿಜಿಟಲ್ ರೂಪಕ್ಕೆ ತರುವಾಗ ಇಂಥ ಅಪಸವ್ಯಗಳು ನುಸುಳಬಾರದು ಮತ್ತು ಆ ಮಾಹಿತಿ ಭದ್ರವಾಗಿರುವಂತೆ ನೋಡಿಕೊಳ್ಳುವ ಅಗತ್ಯವೂ ಇದೆ. ತಜ್ಞರು ಈ ಬಗ್ಗೆ ಕೂಲಂಕಷವಾಗಿ ರ್ಚಚಿಸಿ, ನಿರ್ಧಾರಕ್ಕೆ ಬರುವಂತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net