ಸಂ ಪಾ ದ ಕೀ ಯ: ಆರ್ಥಿಕತೆಯ ಆಶಾಭಾವ

edit
Published on

ಕರೊನಾ ಮೂರನೆಯ ಅಲೆ ಸಾಧ್ಯತೆ ಹಾಗೂ ಒಮಿಕ್ರಾನ್ ಪ್ರಕರಣಗಳ ಏರಿಕೆ ನಡುವೆಯೇ, ಸ್ವಲ್ಪ ಆಶಾಭಾವನೆ ಮೂಡಿಸುವ ಸುದ್ದಿ ಬಂದಿದೆ. ಕರೊನಾ ನಿಯಂತ್ರಣಕ್ಕೆಂದು ವಿಧಿಸಲಾದ ಲಾಕ್ ಡೌನ್ ಕಾರಣದಿಂದಾಗಿ ಬಹುತೇಕ ಎಲ್ಲ ವಲಯಗಳು ಸ್ತಬ್ಧವಾಗಿದ್ದರಿಂದಾಗಿ ಆರ್ಥಿಕತೆ ಮೇಲೆ ಇನ್ನಿಲ್ಲದ ಹೊಡೆತ ಬಿದ್ದಿತ್ತು. ಲಕ್ಷಾಂತರ ಉದ್ಯೋಗನಷ್ಟಗಳಾಗಿದ್ದವು. ಖಾಸಗಿ ಕೈಗಾರಿಕೆಗಳು ಹಾನಿ ಅನುಭವಿಸಿದರೆ ಸರ್ಕಾರಗಳಿಗೆ ತೆರಿಗೆ ಸಂಗ್ರಹಣೆಯಲ್ಲಿ ಅಪಾರ ಕುಸಿತ ಉಂಟಾಗಿತ್ತು. ಈಗೇನೊ ನಿಧಾನಕ್ಕೆ ವಾತಾವರಣ ಚೇತರಿಕೆ ಕಾಣುತ್ತಿದೆ ಎನ್ನುವಾಗಲೆ ಮತ್ತೆ ಕರೊನಾ ಪ್ರಮಾಣ ಹೆಚ್ಚುತ್ತಿರುವುದು ಕಳವಳ ಉಂಟುಮಾಡಿದೆ. ಹೀಗಿದ್ದರೂ, ಆರ್ಥಿಕತೆ ವಿಚಾರದಲ್ಲಿ ಸ್ವಲ್ಪ ಆಶಾಭಾವನೆ ಮೂಡಿಸುವ ಸುದ್ದಿ ಬಂದಿದೆ. ದೇಶದ ರಫ್ತು ಪ್ರಮಾಣ ಡಿಸೆಂಬರ್​ನಲ್ಲಿ ವಾರ್ಷಿಕ ಆಧಾರದ ಮೇಲೆ ಶೇ. 37 ಬೆಳವಣಿಗೆಯಾಗಿರುವುದು ಗಮನಾರ್ಹ. ತಿಂಗಳ ಲೆಕ್ಕದಲ್ಲಿಯೂ ಇದು ಹೆಚ್ಚಿನ ಪ್ರಮಾಣದ್ದಾಗಿದ್ದು, 37 ಶತಕೋಟಿ ಡಾಲರ್ ಮೀರಿದೆ. 2021ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ 300 ಶತಕೋಟಿ ಡಾಲರ್ ಮೌಲ್ಯದ ಸರಕುಗಳು ದೇಶದಿಂದ ವಿವಿಧ ದೇಶಗಳಿಗೆ ರಫ್ತಾಗಿರುವುದು ವಿಶೇಷ. ಒಟ್ಟಾರೆಯಾಗಿ ನೋಡಿದಾಗ ಈ ಆರ್ಥಿಕ ವರ್ಷದಲ್ಲಿ ರಫ್ತು ಪ್ರಮಾಣ 400 ಶತಕೋಟಿ ಡಾಲರ್ ತಲುಪಬಹುದೆಂದು ಅಂದಾಜಿಸಲಾಗಿದೆ.

ದೇಶದ ರಫ್ತು ವಲಯ ಚೇತರಿಕೆ ಕಂಡರೆ ಅದರಿಂದ ಅನೇಕ ಲಾಭಗಳಿವೆ. ಆರ್ಥಿಕತೆ ಚಿಗುರುವುದರ ಲಕ್ಷಣವೂ ಹೌದು. ಚೀನಾದ ಜತೆಗೆ ಗಡಿತಂಟೆಗಳು ನಿರಂತರವಾಗಿ ಇದ್ದರೂ ಎರಡೂ ದೇಶಗಳ ನಡುವೆ ವ್ಯಾಪಾರವ್ಯವಹಾರ ಬೃಹತ್ ಪ್ರಮಾಣದಲ್ಲಿಯೇ ಇದೆ. ಆದರೆ ಚೀನಾದಿಂದ ನಮ್ಮಲ್ಲಿ ಆಮದಾಗುವ ಪ್ರಮಾಣ ಹೆಚ್ಚಿದ್ದು, ನಮ್ಮಲ್ಲಿಂದ ಅಲ್ಲಿಗೆ ರಫ್ತು ಕಡಿಮೆ ಇದೆ. ಆಂದರೆ ವ್ಯಾಪಾರ ಕೊರತೆ ಇದೆ. ಈ ಹಿಂದೆ 2003-2014ರ ಅವಧಿಯಲ್ಲಿ ಯುಪಿಎ ಸರ್ಕಾರದ ಕಾಲದಲ್ಲಿ ಚೀನಾದಿಂದ ಆಮದು ಪ್ರಮಣ ಶೇ.1160ರಷ್ಟು ಭಾರಿ ಗಾತ್ರಕ್ಕೆ ಹೆಚ್ಚಿತ್ತು. ಈಗ ಎನ್​ಡಿಎ ಆಡಳಿತಾವಧಿಯಲ್ಲಿ ಅಂದರೆ, 2014-2021 ಅವಧಿಯಲ್ಲಿ ಈ ಪ್ರಮಾಣ ಶೇ. 8ಕ್ಕೆ ಇಳಿದಿದೆ. ವ್ಯಾಪಾರ ಕೊರತೆ ಸಹ ಕಡಿಮೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ತಿಳಿಸಿದ್ದಾರೆ.

ಈ ನಡುವೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹ ಕೂಡ ಮಾಸಿಕ ಸರಾಸರಿ ಒಂದು ಲಕ್ಷ ಕೋಟಿ ರೂ.ಗಳನ್ನು ಮೀರಿ ಮುನ್ನಡೆದಿರುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸ್ವಲ್ಪ ಸಮಾಧಾನ ತಂದಿದೆ. ಆರ್ಥಿಕತೆಯ ಚಕ್ರ ತಿರುಗುತ್ತಲೇ ಇರಬೇಕೆಂದರೆ, ಜನರಲ್ಲಿ ಕೊಳ್ಳುವ ಶಕ್ತಿ ಇರಬೇಕಾಗುತ್ತದೆ. ಜಿಎಸ್​ಟಿ ಸಂಗ್ರಹವು ಕೆಲಮಟ್ಟಿಗೆ ಇದನ್ನು ಸಂಕೇತಿಸುತ್ತದೆಯಾದರೂ, ಅಕ್ಕಿ, ಬೇಳೆಕಾಳು ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಯೇ ಇರುವದನ್ನೂ ಗಮನಿಸಬೇಕು. ಸುಂಕ ತಗ್ಗಿಸಿದ್ದರಿಂದಾಗಿ ಇಂಧನ ಬೆಲೆಗಳು ಸ್ವಲ್ಪ ಇಳಿಕೆ ಕಂಡಿವೆಯಾದರೂ, ಇತರ ದೈನಂದಿನ ವಸ್ತುಗಳ ಬೆಲೆ ಸಹ ಇನ್ನಷ್ಟು ಕಡಿಮೆಯಾಗಬೇಕಾದ ಅಗತ್ಯ ಇದೆ. ಇಲ್ಲವಾದಲ್ಲಿ ಜನಸಾಮಾನ್ಯರ ಬದುಕು ಮತ್ತಷ್ಟು ಅಸಹನೀಯವಾಗುತ್ತದೆ. ಜೀವನಮಟ್ಟ ಏರಿದಲ್ಲಿ ಜನರ ಖರೀದಿ ಶಕ್ತಿ ಕಡಿಮೆಯಾಗುತ್ತದೆ ಅಥವಾ ಜನರು ಖರೀದಿಯನ್ನು ಆದಷ್ಟು ಕಡಿಮೆ ಮಾಡುತ್ತಾರೆ. ಕರೊನಾ ತಂದಿಟ್ಟ ಪರಿಸ್ಥಿತಿ ಯಿಂದಾಗಿ ಬಹಳ ಜನರ ಆದಾಯ ಇಳಿಕೆಯಾಗಿದ್ದು, ಮೊದಲಿನ ಸ್ಥಿತಿಗೆ ಬರಲು ಎಷ್ಟು ಕಾಲ ಬೇಕಾಗುತ್ತದೆಂಬ ಸ್ಪಷ್ಟತೆ ಇಲ್ಲ. ಸರ್ಕಾರಗಳು ಈ ದಿಕ್ಕಿನಲ್ಲಿ ಸಹ ಚಿಂತನೆ ನಡೆಸಿ, ಬೆಲೆ ಇಳಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂಬುದು ಜನರ ನಿರೀಕ್ಷೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net