ಜಾಗತಿಕ ಹಿತ ಮುಖ್ಯ

tramp jan 08 2020
Published on

ಇರಾನ್ ಇರಾಕ್​ನಲ್ಲಿನ ಸೇನಾನೆಲೆಯೊಂದರ ಮೇಲೆ ದಾಳಿ ಮಾಡಿ, ಅದರಲ್ಲಿ ಅಮೆರಿಕ ನಾಗರಿಕ ಹತನಾಗಿದ್ದು, ಬಳಿಕ ಅಮೆರಿಕ ಪ್ರತೀಕಾರದ ಕ್ರಮವಾಗಿ ಇರಾನಿ ಸೇನೆಯ ಖುದ್ಸ್​ ಪಡೆಯ ಮುಖ್ಯಸ್ಥ ಖಾಸಿಂ ಸುಲೆಮಾನಿಯನ್ನು ಹತ್ಯೆ ಮಾಡಿದ ಬಳಿಕ ಇರಾನ್-ಅಮೆರಿಕ ನಡುವಿನ ಸ್ಥಿತಿ ಉದ್ವಿಗ್ನವಾಗಿದೆ. ಅಮೆರಿಕ ಸೇನೆಯನ್ನೇ ‘ಭಯೋತ್ಪಾದಕ’ ಎಂದು ಇರಾನ್ ಘೋಷಿಸಿದ್ದು, ರಕ್ತಸಿಕ್ತ ಪ್ರತೀಕಾರ ತೆಗೆದುಕೊಳ್ಳುವುದಾಗಿ ಹೂಂಕರಿಸಿದೆ. ಇರಾಕ್​ನಲ್ಲೂ ಪರಿಸ್ಥಿತಿ ತ್ವೇಷಮಯವಾಗಿದ್ದು, ಜರ್ಮನಿ ತನ್ನ ಸೇನೆಗೆ ಅಲ್ಲಿಂದ ವಾಪಸ್ ಆಗಲು ಸೂಚಿಸಿದೆ. ಬುಧವಾರ ಬೆಳಗ್ಗೆ ಮತ್ತೆ ಇರಾಕ್​ನ ಅಮೆರಿಕ ಸೇನಾನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದೆ. 22 ಕ್ಷಿಪಣಿಗಳ ಮೂಲಕ ನಡೆಸಿದ ದಾಳಿಯಲ್ಲಿ ಅಮೆರಿಕದ 80 ಸೈನಿಕರು ಮೃತಪಟ್ಟಿದ್ದಾರೆ ಎಂದು ಇರಾನ್ ಹೇಳಿಕೊಂಡಿದೆ. ಈ ಎಲ್ಲ ಬೆಳವಣಿಗೆಗಳು ಮೂರನೇ ವಿಶ್ವಯುದ್ಧಕ್ಕೆ ಕಾರಣವಾಗಲಿವೆ ಎಂದು ಹೇಳಲಾಗುತ್ತಿದೆಯಾದರೂ, ಆ ವಿಪರೀತಕ್ಕೆ ಹೋಗಲಿಕ್ಕಿಲ್ಲ. ಆದರೆ, ಆತಂಕ ತಲೆದೋರಿರುವುದಂತೂ ಹೌದು.

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ವಿದೇಶಾಂಗ ಸಚಿವ ಜೈಶಂಕರ್ ಅಮೆರಿಕ ಮತ್ತು ಇರಾನ್ ವಿದೇಶಾಂಗ ಸಚಿವರ ಜತೆ ಮಾತನಾಡಿ ಸಂಯಮ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಮೊದಲೇ ಜಾಗತಿಕ ಆರ್ಥಿಕ ಹಿಂಜರಿತದ ಕಾಮೋಡ ಹತ್ತಾರು ದೇಶಗಳನ್ನು ಕಂಗೆಡಿಸಿದೆ. ಉದ್ಯಮವಲಯ ನಷ್ಟದಲ್ಲಿದ್ದು, ನಿರುದ್ಯೋಗದ ಪ್ರಮಾಣ ಏರುತ್ತಲೇ ಸಾಗಿದೆ. ಷೇರುಪೇಟೆಗಳು ಕುಸಿತ ದಾಖಲಿಸುತ್ತಿರುವ ಪರಿಣಾಮ ಲಕ್ಷಾಂತರ ಕೋಟಿ ರೂ. ನಷ್ಟವಾಗುತ್ತಿದೆ. ಇತ್ತೀಚೆಗೆ ಭಾರತೀಯ ಷೇರುಪೇಟೆ ಒಂದೇ ದಿನದಲ್ಲಿ ಮೂರು ಲಕ್ಷ ಕೋಟಿ ರೂ. ಗಿಂತಲೂ ಅಧಿಕ ನಷ್ಟ ಅನುಭವಿಸಿದ್ದು ತಾಜಾ ನಿದರ್ಶನ. ಕಚ್ಚಾ ತೈಲ ಬೆಲೆಯ ಮೇಲೂ ಇದರ ವ್ಯತಿರಿಕ್ತ ಪರಿಣಾಮವಾಗಿದೆ. ಅಲ್ಲದೆ, ಈ ಬಾರಿ ಭಾರತದ ಜಿಡಿಪಿ 5ಕ್ಕೆ ಕುಸಿಯುವ ಆತಂಕ ಎದುರಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಆರ್ಥಿಕ ಪುನಶ್ಚೇತನ ಸಾಧಿಸುವ ಮಾರ್ಗ ಹೇಗೆ ಎಂದು ವಿಶ್ವದ ಹಲವು ರಾಷ್ಟ್ರಗಳು ತಲೆಕೆಡಿಸಿಕೊಂಡಿವೆ. ಮತ್ತು ಈ ಪರಿಸ್ಥಿತಿಯಿಂದ ಮೇಲೇದ್ದು ಬರಲು ಒಂದಿಷ್ಟು ಕಾಲಾವಕಾಶ ಬೇಕು ಎಂಬುದನ್ನು ಆರ್ಥಿಕ ತಜ್ಞರೇ ಸ್ಪಷ್ಟಪಡಿಸಿದ್ದಾರೆ.

ಇಂಥ ಹೊತ್ತಲ್ಲಿ ಯುದ್ಧ ಸಂಭವಿಸಿದ್ದಲ್ಲಿ ಅಥವಾ ಈ ಬಗೆಯ ಉದ್ವಿಗ್ನತೆ ದೀರ್ಘಕಾಲ ಮುಂದುವರಿದಲ್ಲಿ ಅದರಿಂದ ಬರೀ ಅಮೆರಿಕ, ಇರಾನ್​ಗೆ ಮಾತ್ರವಲ್ಲ ಜಾಗತಿಕ ಹಿತಕ್ಕೇ ಕಂಟಕ ಎಂಬುದನ್ನು ಮರೆಯಬಾರದು. ಆ ಎರಡು ರಾಷ್ಟ್ರಗಳ ನಡುವಿನ ವೈಷಮ್ಯ, ದ್ವೇಷ ಹಳೆಯದ್ದೇ ಆಗಿರಬಹುದು. ಆದರೆ, ಈ ಹೊತ್ತಲ್ಲಿ ವೈಯಕ್ತಿಕ ಪ್ರತಿಷ್ಠೆ ಮುಖ್ಯವಾಗಬಾರದು. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯೂ ಸಮೀಪಿಸಿರುವುದರಿಂದ ಟ್ರಂಪ್ ಇರಾನ್ ವಿವಾದವನ್ನು ಮುನ್ನೆಲೆಗೆ ತಂದಿದ್ದಾರೆ ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿದೆ. ಆದರೆ, ಅಭಿವೃದ್ಧಿಯತ್ತ ಸಾಗಬೇಕಾದರೆ ಶಾಂತಿ ನೆಲೆಸಲೇಬೇಕು. ಜಾಗತಿಕ ಹಿತ ಮುಖ್ಯವಾಗಿ, ಉಭಯ ರಾಷ್ಟ್ರಗಳು ಪಟ್ಟನ್ನು ಸಡಲಿಸಬೇಕು. ಇಲ್ಲದಿದ್ದಲ್ಲಿ ಭವಿಷ್ಯದ ದಿನಗಳು ತುಂಬ ಶೋಚನೀಯವಾಗಿರಲಿವೆ. ಆ ಪರಿಸ್ಥಿತಿ ಬರುವ ಮುನ್ನವೇ ಜಾಗತಿಕ ನಾಯಕರು ಎಚ್ಚೆತ್ತುಕೊಳ್ಳಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net