

ವಿಜಯವಾಣಿ ‘ದೀಪಾವಳಿ ಕಥಾ ಸ್ಪರ್ಧೆ ( Story writing Competition ) -2024’ರಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು.
ಶಂಭಜ್ಜನಿಗೆ ಹುಷಾರಿಲ್ವಂತೆ….
ಶಂಭಜ್ಜನಿಗೆ ಹುಷಾರಿಲ್ವಂತೆ….
ಶಂಭು ಮಾವಂಗೆ ಆರೋಗ್ಯ ಕೆಟ್ಟಿದೆಯಂತೆ..
ಶಂಭಣ್ಣಂಗೆ ಏನೋ ಅನಾರೋಗ್ಯವಂತೆ…
ಊರಲ್ಲೆಲ್ಲಾ ಇದೇ ಮಾತು..
ಆ ಊರಿನ ಮನೆ ಮನೆಗಳ ಚಾವಡಿಯಿಂದ ಹಿಡಿದು ನಡುಮನೆ ದಾಟಿ ಅಡುಗೆ ಮನೆಯವರೆಗೂ ಇದೇ ಮಾತು. ಅಷ್ಟಲ್ಲದೇ ಊರ ದೇವಸ್ಥಾನ, ಊರಾಚೆಯ ಕುಟ್ಟಪ್ಪನ ಬೀಡಾ ಅಂಗಡಿ.. ಕಾಕನ ಹೋಟೆಲ್.. ರಾಮಣ್ಣನ ಚಹಾ ಅಂಗಡಿ .. ಶಾಲೆ, ಪೋಸ್ಟ್ ಆಫೀಸ್.. ಆಟದ ಮೈದಾನ ಹೆಲ್ತ್ ಸೆಂಟರ್.. ಊರ ಧರ್ಮಾಸ್ಪತ್ರೆ..ಎಲ್ಲಾ ಕಡೆಯೂ ಶಂಭಜ್ಜನ ಬಗ್ಗೆಯೇ ಮಾತು.
ಗುಡಿಯಲ್ಲಿ ಶಂಭಜ್ಜನ ಆರೋಗ್ಯ ಸುಧಾರಿಸಲು ಪೂಜಾಕೈಂಕರ್ಯ ನಡೆಸುವವರೂ, ಮನೆಮನೆಗಳಲ್ಲಿ ಮುಡಿಪು ಕಟ್ಟಿಡುವ ಮಹಿಳೆಯರೂ, ಇನ್ನೊಂದಷ್ಟು ಮಂದಿ ತಮ್ಮ ಪರಿಚಯದವರಲ್ಲಿ ನುರಿತ ವೈದ್ಯರುಗಳ ಬಗ್ಗೆ ವಿಚಾರಿಸುವುದೂ, ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಜ್ಯೋತಿಷಿಗಳ ಭೇಟಿಯನ್ನೂ ಮಾಡಿ ಬಂದರು. ಎಲ್ಲರ ಮನದಲ್ಲಿರುವುದು ಒಂದೇ ಶಂಭಜ್ಜ ಆರೋಗ್ಯವಂತರಾದರೆ ಸಾಕು ಎಂಬುದಾಗಿ. ಒಟ್ಟಿನಲ್ಲಿ ಇಡೀ ಊರಿಗೆ ಊರೇ ಶಂಭಜ್ಜನಿಗಾಗಿ ಮಿಡಿಯುತ್ತಿತ್ತು.
ಸೀತಾಪುರವು ಮಲೆನಾಡಿನ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಒಂದು ಸುಂದರವಾದ ಊರು. ಎಲ್ಲಾ ಸೌಕರ್ಯಗಳನ್ನೂ ಹೊಂದಿದ್ದ ಆ ಊರು ಒಂದು ಮಾದರಿ ಗ್ರಾಮವೆಂಬ ಬಿರುದನ್ನೂ ಪಡೆದಿದೆ. ಕೆಲವರಿಂದ ಮಾವ, ಕೆಲವರಿಂದ ಅಣ್ಣ, ಹಲವರಿಂದ ಶಂಭಜ್ಜ ಎಂದೇ ಸಂಬೋಧಿಸಲ್ಪಡುವ ಈ ವ್ಯಕ್ತಿಯ ನಿಜನಾಮಧೇಯ ಶಂಭಯ್ಯ. ಅವರ ಹಿರಿಯರು ಅಲ್ಲಿನ ಸ್ಥಳೀಯರೇ. ಆದರೆ ಅವರದ್ದು ಬಹಳ ಬಡತನದ ಕಾಲವಾಗಿತ್ತು. ಆದ್ದರಿಂದ ಪೂರ್ವಿಕರಿಂದ ಶಂಭಜ್ಜನಿಗೆ ಬಳುವಳಿಯಾಗಿ ಏನೂ ಸಿಕ್ಕಿರಲಿಲ್ಲ. ಶಂಭಜ್ಜ ಚಿಕ್ಕಂದಿನಿಂದಲೇ ಮೈಬಗ್ಗಿಸಿ ದುಡಿದು ಸ್ವಂತ ಪರಿಶ್ರಮದಿಂದ ಒಂದಷ್ಟು ಜಮೀನು ಖರೀದಿಸಿ ಭತ್ತ, ಕಂಗು, ತೆಂಗು, ಬಾಳೆ, ಕರಿಮೆಣಸು, ಗೇರುಬೀಜ ಮೊದಲಾದುವುಗಳನ್ನು ಬೆಳೆದು ಉತ್ತಮ ಕೃಷಿಕರಾದರು. ಮುಂದೆ ಆರ್ಥಿಕವಾಗಿ ಸಬಲರಾಗುತ್ತಿದ್ದಂತೆಅಚ್ಚುಕಟ್ಟಾದ ನಾಲ್ಕು ಸೂತ್ರದ ಎರಡು ಮಹಡಿಗಳ ತೊಟ್ಟಿಮನೆಯನ್ನೂ ಕಟ್ಟಿಸಿದರು. ದೊಡ್ಡದಾದ ಹಜಾರದ ಸುತ್ತಲೂ ಸುಂದರವಾದ ಕೆತ್ತನೆಯ ಕಂಬಗಳು, ಮರದ ಮುಚ್ಚಿಗೆ, ವಿಶಾಲವಾದ ದೇವರ ಮನೆ ಹತ್ತು ಹದಿನೈದು ದೊಡ್ಡದಾದ ಕೋಣೆಗಳೂ, ಅಡುಗೆ ಮನೆ, ಉಗ್ರಾಣ, ಬಚ್ಚಲು ಮನೆ ಎಲ್ಲವೂ ಸುವ್ಯವಸ್ಥಿತವಾಗಿತ್ತು. ಒಟ್ಟಿನಲ್ಲಿ ಇಂದಿಗೆ ಎಲ್ಲಾ ಅಧುನಿಕ ಸೌಕರ್ಯಗಳನ್ನೊಳಗೊಂಡ ಅರಮನೆಯಂತಿತ್ತು. ಮನೆಗೆ ಆಗಮಿಸುವವರ ಸಂಖ್ಯೆಯೂ ಕಡಿಮೆಯೇನಲ್ಲ. ನೆಂಟರಿಷ್ಟರೂ ಕಷ್ಟಗಳನ್ನು ತೋಡಿಕೊಳ್ಳುವವರೂ ದಿನಂಪ್ರತಿಯೆನ್ನುವಂತೆ ಇರುತ್ತಿದ್ದರು. ಇದರಿಂದಾಗಿ ಊರು ಮಾತ್ರವಲ್ಲ ಪರವೂರಿನಲ್ಲೂ ಶಂಭಜ್ಜ ಮನೆಮಾತಾಗಿದ್ದರು.
ಶಂಭಜ್ಜ ಊರಿನ ಅತ್ಯಂತ ಹಿರಿಯರು. ಕುಗ್ರಾಮವಾಗಿದ್ದಂತಹ ಊರು ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಕಾಣಲು ಕಾರಣ ಈ ಶಂಭಜ್ಜ. ಎಳೇ ಮಗುವಿನಿಂದ ಹಿಡಿದು ವೃದ್ಧರ ವರೆಗೂ ಎಲ್ಲರನ್ನೂ ಮಗಾ, ಮಗಳೇ ಅಣ್ಣಾ, ತಮ್ಮ ಎಂದು ಸಂಬೋಧಿಸಿ ವಿಶ್ವಾಸದಿಂದ ಮಾತನಾಡಿಸುವ ಪರಿಯೇ ಒಂದು ಆಕರ್ಷಣೆ. ಒಂದು ರೀತಿಯಲ್ಲಿ ಸಮಾಜ ಸೇವಕ ಅಜಾತಶತ್ರು. ಇಡೀ ಊರಿನ ಕಲ್ಲು ಕಲ್ಲೂ ಶಂಭಜ್ಜನಿಗೆ ಆಪ್ತ. ತನ್ನ ಸಂಪಾದನೆಯಲ್ಲಿ ಬಹಳಷ್ತು ಭಾಗವನ್ನು ಊರವರ ಕಷ್ಟಕ್ಕಾಗಿಯೇ ಮೀಸಲಿಡುತ್ತಿದ್ದರು. ಊರಲ್ಲಿ ಯಾರಿಗೆ ಏನೇ ಆಗಲಿ ಮರುಕ್ಷಣದಲ್ಲಿ ಶಂಭಜ್ಜನ ಅಭಯಹಸ್ತ ಸಿಕ್ಕಿತೆಂದೇ ಅರ್ಥ.
ಊರಿಗೆ ಪಟೇಲರಾದ ಶಂಭಜ್ಜ ಸೀತಾಪುರಕ್ಕೆ ರಾಮನಂತೆಯೇ. ಮುಂಜಾನೆ ನಾಲ್ಕಕ್ಕೆ ಎದ್ದು ಸುಮಾರು ಒಂದೂವರೆ - ಎರಡು ಘಂಟೆಗಳ ಕಾಲ ನಿತ್ಯ ವಿಧಿಗಳಾದ ಸ್ನಾನ ಪ್ರಾಣಾಯಾಮ ಧ್ಯಾನ, ಪೂಜಾಕಾರ್ಯಗಳನ್ನು ಪೂರೈಸಿ ಬೆಳಗ್ಗಿನ ಉಪಾಹಾರವನ್ನು ತೀರಿಸಿ, ಶುಭ್ರವಾದ ಬಿಳಿ ಪಂಚೆ , ಅಂಗಿ ,ಶಲ್ಯ, ಹಣೆಯಲ್ಲಿ ಶ್ರೀಗಂಧದ ನಾಮ ಧರಿಸಿ, ಮನೆಯಿಂದ ಹೊರಟರೆ ಎಲ್ಲರ ಕ್ಷೇಮ ಸಮಾಚಾರ ವಿಚಾರಿಸುತ್ತಾ, ತೋಟದ ಕೆಲಸಗಳನ್ನು ನೋಡಿಕೊಂಡು ಕೆಲಸದಾಳುಗಳಿಗೆ ಸೂಚನೆಗಳನ್ನು ಕೊಡುತ್ತಾ ಮಧ್ಯಾಹ್ನ ಒಂದು ಘಂಟೆಗೆ ಸರಿಯಾಗಿ ಊಟವನ್ನು ಸೇವಿಸಿ, ಮತ್ತೆ ದಿನದ ಕೆಲಸಗಳಲ್ಲಿ ತೊಡಗಿಕೊಂಡು ಮನೆಗೆ ಮರಳುತ್ತಿದ್ದುದು ಸೂರ್ಯ ಕಂತಿದ ಮೇಲೆಯೇ. ನಂತರ ಯಥಾಪ್ರಕಾರ ಸ್ನಾನ ಪೂಜೆ ಮಿತಾಹಾರ ವಿಶ್ರಾಂತಿ.
ಇವುಗಳ ಮಧ್ಯೆ ಊರಿನ ಅಭಿವೃದ್ಧಿಗಾಗಿ ಸರಕಾರಿ ಕಚೇರಿಗಳಿಗೆ ಅಲೆದಾಟ. ಕೈಲಾಗದವರಿಗೆ ಸಹಾಯ ಎಂದು ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಶಂಭಜ್ಜನದು ಎಲ್ಲಾ ರೀತಿಯಿಂದಲೂ ಪರಿಪೂರ್ಣ ವ್ಯಕ್ತಿತ್ವ. ಮೊದಲ ಬಾರಿಗೆ ನೋಡುವವರೂ ಎರಡು ಕೈಯೆತ್ತಿ ಮುಗಿಯ ಬೇಕೆಂದು ಮನಸ್ಸಾಗುವಂಥಹ ಗಾಂಭೀರ್ಯ.ಊರಿನಲ್ಲಿ ಒಂದು ಸಾಂಸ್ಕೃತಿಕ ಸಂಘವನ್ನು ಕಟ್ಟಿಕೊಂಡು ಅಲ್ಲಿ ಎಲ್ಲಾ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಊರ ಮೈದಾನದಲ್ಲಿ ಕ್ರೀಡಾ ಚಟುವಟಿಕೆಗಳಿಗೂ ಉತ್ತೇಜನವನ್ನು ಕೊಡುತ್ತಾ ಒಟ್ಟಿನಲ್ಲಿ ಅ ಊರಿನ ಸರ್ವತೋಮುಖವಾದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಂಭಜ್ಜ ಇಂದು ಅನಾರೋಗ್ಯಕ್ಕೆ ಈಡಾಗಿದ್ದಾರೆನ್ನುವುದು ಆ ಊರಿನ ಜನತೆಗೆ ಅರಗಿಸಿಕೊಳ್ಳಲಾರದ ತುತ್ತಾಯಿತು.
ಶಂಭಜ್ಜನಿಗೆ ನಾಲ್ಕು ಜನ ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳು. ಮಕ್ಕಳೆಲ್ಲಾ ಉನ್ನತ ವಿದ್ಯಾಭ್ಯಾಸವನ್ನು ಪೂರೈಸಿ ಉತ್ತಮ ಹುದ್ದೆಯಲ್ಲಿದ್ದು ವಿವಾಹಿತರಾಗಿ ದೂರದ ಊರುಗಳಲ್ಲಿಯೂ ವಿದೇಶಗಳಲ್ಲಿಯೂ ನೆಲೆಸಿದ್ದರು. ವರ್ಷದಲ್ಲಿ ಎರಡು ಮೂರು ಬಾರಿ ಎಲ್ಲರೂ ಜೊತೆಯಲ್ಲಿ ಊರಿನಲ್ಲಿ ಸೇರುವುದನ್ನು ಇತ್ತೀಚೆಗೆ ಎರಡು ವರ್ಷಗಳಿಂದ ರೂಢಿಸಿಕೊಂಡಿದ್ದರು. ಆಗ ಮನೆಯಲ್ಲಿ ಹಬ್ಬದ ವಾತಾವರಣವಿರುತ್ತಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲರೂ ಸೇರಿ ಖುಷಿ ಖುಷಿಯಿಂದಿದ್ದಾಗಲೇ ಅಜ್ಜನಿಗೆ ಈ ಅನಾರೋಗ್ಯ ಸಮಸ್ಯೆ ಅಮರಿಕೊಂಡಿತ್ತು. ಪ್ರೀತಿಯ ಮಡದಿ ತೀರಿಕೊಂಡಾಗಲೂ ವಿಚಲಿತರಾಗದ ಶಂಭಜ್ಜ , ಜೀವಮಾನದಲ್ಲಿ ಒಮ್ಮೆಯೂ ಖಾಯಿಲೆಯೆಂದು ಮಲಗಿದವರಲ್ಲ, ಔಷಧಿ ಸೇವಿಸಿದವರಲ್ಲ. ಮಡದಿ ಶಾರದಮ್ಮನವರ ನಿಧನಾನಂತರ ಮಕ್ಕಳ ಜೊತೆ ಹೋಗದೆ ಹಳ್ಳಿಯಲ್ಲಿದ್ದುಕೊಂಡೇ ತನ್ನ ಕೆಲಸವನ್ನು ತಾನೇ ಮಾಡುತ್ತಾ ಸಮಾಜ ಸೇವೆಯನ್ನು ಮಾಡುತ್ತಾ ನಾಲ್ಕು ಜನರಿಗೆ ಉಪಕಾರಿಯಾಗಿ ಜೀವಿಸುತ್ತಾ ಗಟ್ಟಿಯಾಗಿಯೇ ಇದ್ದರು. ಮಕ್ಕಳು ಮೊಮ್ಮಕ್ಕಳು ಬಂದಾಗ ತನ್ನ ವಯಸ್ಸನ್ನು ಮರೆತು ಅವರ ಜೊತೆ ಒಂದಾಗಿ ಸಮಯವನ್ನು ಕಳೆಯುತ್ತಿದ್ದರು.
ಇಂತಿಪ್ಪ ಶಂಭಜ್ಜ ಏಕಾಏಕಿ ಈ ರೀತಿಯಾದುದು ಎಲ್ಲರಿಗೂ ಆಘಾತವಾಗಿತ್ತು. ಶೂನ್ಯವನ್ನು ದಿಟ್ಟಿಸಿ ಕೂತಲ್ಲೇ ಕೂತು ಕಾಲ ಕಳೆಯತೊಡಗಿದರು, ಕಾಲಿಗೆ ಚಕ್ರವನ್ನು ಕಟ್ಟಿಕೊಂಡಂತೆ ಊರೆಲ್ಲಾ ಓಡಾಡಿ ಜನಸೇವೆ ಮಾಡುತ್ತಿದ್ದಂತಹ ವ್ಯಕ್ತಿಗೆ ಇಂದು ಯಾವುದರಲ್ಲಿಯೂ ಆಸಕ್ತಿಯೇ ಇಲ್ಲವಾಯಿತು. ಮಂಚಕ್ಕೆ ಒರಗಿದಾಕ್ಷಣವೇ ನಿದ್ರೆಗೆ ಜಾರುತ್ತಿದ್ದ ಶಂಭಜ್ಜನಿಗೆ ಈ ನಡುವೆ ನಿದ್ರೆ ಎನ್ನುವುದು ಕನಸಿನ ಮಾತಾಯಿತು. ಈಬದಿಯಿಂದ ಆಬದಿಗೆ ಆಬದಿಯಿಂದ ಈಬದಿಗೆ ಹೊರಳಾಡುವುದರಲ್ಲಿಯೇ ಬೆಳಗು ಮಾಡಬೇಕಾಗುತ್ತಿತ್ತು. ಶಿಸ್ತು ಮಾಯವಾಯಿತು. ಹಸಿವು ಇಲ್ಲದಾಯಿತು. ದಿನದಿಂದ ದಿನಕ್ಕೆ ಸೊರಗುತ್ತಲೇ ಹೋದರು ಶಂಭಜ್ಜ. ಶಂಭಜ್ಜನ, ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಮುತುವರ್ಜಿಯಿಂದ ನೋಡಿಕೊಂಡರೂ, ಪೇಟೆಯ ಮಲ್ಟಿಸ್ಪೆಷ್ಯಾಲಿಟೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಆರೋಗ್ಯದಲ್ಲಿ ಒಂದಿನಿತು ಬದಲಾವಣೆ ಕಾಣಿಸಲೇ ಇಲ್ಲ, ಕೊನೆಗೆ ತನ್ನ ಕೋಣೆಯ ಒಳಗೇ ಕಾಲವನ್ನು ಕಳೆಯತೊಡಗಿದರು.
ಶ್ರಾವಣಿ ಆ ಊರಿನ ಚಿಗರೆಯಂಥಹ ಮುದ್ದು ಹುಡುಗಿ. ಶನಿವಾರ, ಭಾನುವಾರ, ರಜಾದಿನಗಳು ಬಂತೆಂದರೆ ಸಾಕು, ಶಂಭಜ್ಜನಿಗೆ ಜೊತೆಯಾಗುತ್ತಿದ್ದಳು. ಶಂಭಜ್ಜನಿಗೆ ಅಡುಗೆ ಹಾಗೂ ಮನೆಕೆಲಸ ಮಾಡಿಕೊಡುತ್ತಿದ್ದ ಶಾಮಣ್ಣ- ಶಾಂತಮ್ಮರ ಮಗಳೇ ಶ್ರಾವಣಿ. ಬಹಳ ಚೂಟಿ. ಊರಿನಲ್ಲಿ ಪದವಿಪೂರ್ವ ವಿದ್ಯಾಭ್ಯಾಸವನ್ನು ಮುಗಿಸಿ ಪಟ್ಟಣದಲ್ಲಿ ಪದವಿಗೆ ಸೇರಿದ್ದಳು. ದಿನಾ ಓಡಾಡಲು ಕಷ್ಟವೆಂದು ಅಲ್ಲಿಯೇ ಹಾಸ್ಟೆಲಲ್ಲಿದ್ದಳು. ಅಜ್ಜನಿಗೆ ಖಾಯಿಲೆ ಎಂಬ ಸುದ್ದಿ ತಿಳಿದಿದ್ದೇ ತಡ ಬಿಟ್ಟ ಬಾಣದಂತೆ ಓಡಿ ಬಂದಳು. ಅಜ್ಜಾ ಏನಾಯ್ತು? ನೋಡಿ ಮನೇಗೆ ಮಕ್ಳು ಮೊಮ್ಮಕ್ಳೆಲ್ಲಾ ಬಂದಿದ್ದಾರೆ.. ನೀವು ಈ ರೀತಿ ಮಲ್ಗಿದ್ರೆ ಹೆಂಗಜ್ಜಾ”? ಕಕ್ಕುಲಾತಿಯಿಂದ ವಿಚಾರಿಸುತ್ತಾ ಅಜ್ಜಾ ಅಜ್ಜಾ ಎಂದು ಮುಖವನ್ನು ತನ್ನತ್ತ ಹೊರಳಿಸಿ ಮಾತನಾಡಿಸಿದಳು. ಆದರೆ ಶಂಭಜ್ಜ ಮಾತ್ರ ಮುಖದಲ್ಲಿ ಒಂದಿನಿತು ನಗುವನ್ನು ಸೂಸದೆ ಶೂನ್ಯವನ್ನೇ ದಿಟ್ಟಿಸುತ್ತಾ ನಿಸ್ತೇಜವಾಗಿ ಮಲಗಿದ್ದರು. ಏನೇ ಮಾತಾಡಿಸಿದರೂ ಪ್ರತಿಕ್ರಿಯೆ ಶೂನ್ಯವಾಗಿತ್ತು. ಅಬ್ಬಾ.. ಅಜ್ಜ ಈ ರೀತಿ ಮಲಗಿದ್ದುದನ್ನು ಅವಳು ನೋಡಿರಲೇ ಇಲ್ಲ. ಯಾಕೆ ಹೀಗಾಯಿತು? ಎಂದು ಯೋಚಿಸಿಯೇ ಯೋಚಿಸಿದಳು.
ಒಂದಷ್ಟು ದಿನ ಅವರ ಆರೋಗ್ಯದ ಬಗ್ಗೆ ಚಿಂತಿಸಿದ ಮನೆಯವರು ಈಗ ಅವರ ಬಗ್ಗೆ ಯೋಚಿಸುವುದನ್ನೇ ಬಿಟ್ಟಿದ್ದರು. ವಯಸ್ಸಾದ್ಮೇಲೆ ಹಂಗೇನೇ ಎನ್ನುತ್ತಾ ಅವರ ಪಾಡಿಗೆ ಅವರಿದ್ದರು. ಆದರೆ ತನ್ನನ್ನು ಕಂಡಾಗಲೆಲ್ಲಾ ಪ್ರೀತಿಯಿಂದ ಮಾತನಾಡುತ್ತಿದ್ದ ಶಂಭಜ್ಜ, ಬಾಲ್ಯದಿಂದಲೇ ಪ್ರೀತಿಯ ಧಾರೆಯನ್ನೇ ಎರೆದು ಎತ್ತಿ ಆಡಿಸಿದ್ದ ಅಜ್ಜ, ಇಂದು ಈ ರೀತಿ ಮಲಗಿರುವುದು ಶ್ರಾವಣಿಗೆ ಅರಗಿಸಿಕೊಳ್ಳಲಾಗಲೇ ಇಲ್ಲ. ಇದಕ್ಕೇನಾದರೂ ಔಷಧಿ ಮಾಡಲೇ ಬೇಕು ಎಂದು ನಿರ್ಧರಿಸಿದಳು.
“ಸರ್.. ನನ್ನ ಅಜ್ಜನ ಹೆಸರು ಶಂಭಯ್ಯ , ವಯಸ್ಸು ಸುಮಾರು ತೊಂಭತ್ತರ ಹತ್ತಿರ.. ಯಾಕೋ ಕೆಲದಿನಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಸರ್.” ತನ್ನ ಸೈಕಾಲಜಿ ಪ್ರೊಫೆಸರರ ಬಳಿ ದು:ಖವನ್ನು ತೋಡಿಕೊಂಡಳು ಶ್ರಾವಣಿ.
ಡಾಕ್ಟರ್ಗೆ ತೋರ್ಸಿಲ್ವೇನಮ್ಮಾ.. ಪ್ರೊಫೆಸರ್ ಷಣ್ಮುಗಂ ವಿಚಾರಿಸಿದರು.
“ಎಲ್ಲಾ ರೀತಿಯ ಚೆಕ್ಅಪ್ ಆಯ್ತು ಸರ್.. ಆದ್ರೆ ಯಾವ್ದೇ ಪ್ರಯೋಜ್ನಾ ಇಲ್ಲ ಎಲ್ಲಾ ನಾರ್ಮಲ್ ಇದೆ. ನನ್ಗೇನೋ ಸಂಶಯ.. ಅವ್ರು ಮನಸ್ನಲ್ಲಿ ಏನೋ ಇಟ್ಕೊಂಡು ಕೊರಗ್ತಾರೇಂತಾ” ಶಂಭಜ್ಜನ ವ್ಯಕ್ತಿತ್ವವನ್ನು ಪ್ರೊಫೆಸರರ ಬಳಿ ವಿಶದವಾಗಿ ತೆರೆದಿಟ್ಟಳು.
“ಭೇಷ್ ಸರಿಯಾಗೇ ಹೇಳ್ದೆ.. ಎಲ್ಲಾ ನಾರ್ಮಲ್ ಇದೇ ಆದ್ರೂ ಖಾಯಿಲೆ.. ಚಿಂತೆಯೇ ಚಿತೆಗೆ ಕಾರಣ ಅಂತಾರಲ್ಲಾ .. ಅವ್ರು ಯಾವ್ದೋ ವಿಷ್ಯಕ್ಕೆ ನೊಂದ್ಕೊಂಡಿರ್ತಾರೆ. ಅವ್ರ ಮನಸ್ಸಿಂದ ಅದನ್ನ ಆಚೆ ತರೋ ಪ್ರಯತ್ನ ಮಾಡ್ಬೇಕು. ನೋಡೋಣ ನಮ್ಮ ಪ್ರಯತ್ನ ಮಾಡೋಣ” ಷಣ್ಮುಗಂ ಭರವಸೆಯನ್ನಿತ್ತರು. ಪ್ರೊಫೆಸರ್ ಷಣ್ಮುಗಂ ಅದೆಷ್ಟೋ ಜನರಿಗೆ ಆಪ್ತ ಸಲಹೆಯನ್ನಿತ್ತು ನೊಂದವರಿಗೆ ಆಸರೆಯಾಗಿ ಹೆಸರುವಾಸಿಯಾಗಿದ್ದರು.
“ ನೋಡಮ್ಮಾ ಶ್ರಾವಣಿ ನಾಳೇನೇ ನಿಮ್ಮೂರಿಗೆ ಹೋಗೋಣ, ನಾಳೆ ಬೆಳಗ್ಗೆ ಆರು ಘಂಟೆಗೆ ಸರಿಯಾಗಿ ನನ್ ಮನೇ ಹತ್ರ ಬಾ”. ಎಂದರು. ಶ್ರಾವಣಿಯ ಮುಖದಲ್ಲಿ ಮಿಂಚು ಸಂಚಾರವಾದಂತಾಯಿತು. ಬೆಳಗ್ಗೆ ಆರು ಘಂಟೆಗೆ ಪ್ರೊಫೆಸರ್ ಷಣ್ಮುಗಂ ಕಾರು ಸೀತಾಪುರದತ್ತ ಹೊರಳಿತು. ಪ್ರೊಫೆಸರರ ಪರಿಚಯವನ್ನು ಮನೆಯವರಿಗೆ ಶಾವಣಿ ಮಾಡಿಸುತ್ತಲೇ ಅವರೆಲ್ಲಾ “ಅಯ್ಯೋ ಸಾರ್ ಇವ್ಳೇನೋ ಹೇಳಿದ್ಲೂಂತಾ ನೀವು ಬರೋದೇ? ಅವ್ರಿಗೆ ವಯಸ್ಸಾಯ್ತು. ಅದ್ಕೆ ಹಂಗಾಗಿದ್ದಾರಷ್ಟೇ ನೀವು ಸುಮ್ನೇ ತೊಂದ್ರೆ ತಗೋಬೇಡಿ”. ಮನೆಯವರ ಪ್ರತಿಕ್ರಿಯೆಗೆ ಷಣ್ಮುಗಂ ತುಟಿಯಂಚಿನಲ್ಲಿ ನಗು ಸೂಸಿದರು.
“ ನನ್ಗೆ ಇದ್ರಲ್ಲೇನೂ ತೊಂದ್ರೆ ಇಲ್ಲಾ ನಾ ಅವ್ರನ್ನ ಒಂದ್ಸಲ ನೋಡ್ಬಹುದೇ?” ಅವರುಗಳ ಅನುಮತಿಯನ್ನು ಕೇಳಿದರು. ಅವರ ವಿನೀತಭಾವಕ್ಕೆ ಇಲ್ಲವೆನ್ನಲಾಗದೇ ಸರಿ ಎಂದಿದ್ದೇ ತಡ ಶ್ರಾವಣಿ ಪ್ರೊಫೆಸರರನ್ನ ಶಂಭಜ್ಜನ ಕೋಣೆಗೆ ಕರೆದೊಯ್ಡಳು. ಶಂಭಜ್ಜನನ್ನು ನೋಡುತ್ತಲೇ “ಯಜಮಾನ್ರೇ ಹೇಂಗಿದ್ದೀರಾ”? ಎನ್ನುತ್ತಾ ತನ್ನೆರಡು ಕೈಗಳನ್ನೆತ್ತಿ ಮುಗಿದರು ಪ್ರೊಫೆಸರ್ ಷಣ್ಮುಗಂ.
ಪ್ರೊಫೆಸರವರ ಮುಖ ನೋಡುತ್ತಲೇ ಯಾರೋ ಅತಿಥಿಗಳ ಆಗಮನವೆಂದರಿತ ಶಂಭಜ್ಜ ಯಾಂತ್ರಿಕವಾಗಿ ಎದ್ದು ಕುಳಿತರು. ಸೊರಗಿದ ಕೈಗಳಿಂದ ಕುಳಿತುಕೊಳ್ಳಿ ಎನ್ನುವಂತೆ ಪಕ್ಕದಲ್ಲಿದ್ದ ಕುರ್ಚಿಯನ್ನು ತೋರಿಸಿದರು. ಶ್ರಾವಣಿಯ ಕಡೆ ಹೊರಳಿ ಕುಡಿಯಲು ಪಾನೀಯವನ್ನು ತರುವಂತೆ ಸೂಚಿಸಿದರು. ಆ ಪರಿಸ್ಥಿತಿಯಲ್ಲೂ ಅವರು ಮನೆಗೆ ಬಂದವರಿಗೆ ಕೊಡುವ ಗೌರವವು ಅವರ ವ್ಯಕ್ತಿತ್ವವನ್ನು ತೋರಿಸಿತು.
ತಾನು ಯಾರೆಂಬುದನ್ನು ಸಂಕ್ಷಿಪ್ತವಾಗಿ ತಿಳಿಸಿದ ಷಣ್ಮುಗಂ ಶ್ರಾವಣಿ ತಂದಿತ್ತ ತಣ್ಣಗಿನ ಪಾನಕವನ್ನು ಕುಡಿದಾದ ಬಳಿಕ ಆಕೆಗೆ ಹೊರ ಹೋಗುವಂತೆ ಸೂಚನೆಯನ್ನಿತ್ತರು.
“ಈಗ ಹೇಳಿ ಯಜಮಾನ್ರೇ ಏನಾಗ್ತಿದೆ ನಿಮ್ಗೇ? ನಾ ಬಂದಿರುವುದೇ ನಿಮ್ಗೆ ಸಹಾಯಮಾಡುವುದಕ್ಕಾಗಿ.. ಏನೇ ಸಮಸ್ಯೆ ಇದ್ರೂ ನನ್ನಲ್ಲಿ ಹೇಳ್ಕೊಳ್ಳಿ .. ಯಾವ್ದೇ ಸಂಕೋಚ ಬೇಡ.. ಮನ ಬಿಚ್ಚಿ ಮಾತಾಡಿದಷ್ಟು ಮನಸ್ಸು ಹಗುರಾಗತ್ತೆ. ಯಾವ್ದನ್ನೂ ಮನಸ್ಸಲ್ಲಿಟ್ಟು ಕೊರಗ್ಬಾರ್ದು. ಎಲ್ಲದಕ್ಕೂ ಪರಿಹಾರ ಇದ್ದೇ ಇರತ್ತೆ. “ ಎನ್ನುತ್ತಾ ಷಣ್ಮುಗಂ ಶಂಭಜ್ಜನವರ ಮನಸ್ಸಿನ ಒಳಹೋಗುವ ಪ್ರಯತ್ನ ಪಟ್ಟರು. ಸುಮಾರು ಒಂದು ಘಂಟೆಗಳ ಕಾಲ ಅವರ ಜೊತೆಯಲ್ಲಿದ್ದ ಪ್ರೊಫೆಸರ್ ಹೊರ ಬಂದು ಶ್ರಾವಣಿಯಲ್ಲಿ “ ನೋಡಮ್ಮಾ ಶಂಭಜ್ಜ ಯಾವುದೋ ಆಘಾತಕ್ಕೊಳಗಾಗಿದ್ದಾರೆ. ಈಗ ಸ್ವಲ್ಪ ಸ್ವಲ್ಪವೇ ತೆರೆದುಕೊಳ್ಳುತ್ತಿದ್ದಾರೆ. ಇನ್ನೊಂದೆರಡು ಸಲ ಅವರ ಜೊತೆ ಕುಳಿತು ಮಾತನಾಡಿದರೆ ಪೂರ್ತಿಯಾಗಿ ಸರಿಹೋಗುತ್ತಾರೆ. ಅವರ ಮನದಲ್ಲಿರುವುದನ್ನೆಲ್ಲಾ ಒಂದು ಪತ್ರದಲ್ಲಿ ಬರೆಯಲು ಹೇಳಿದ್ದೀನಿ, ಎರಡು ದಿನ ಬಿಟ್ಟು ಅವ್ರನ್ನ ಭೇಟಿಯಾಗ್ತೀನಿ” ಎಂದು ಹೊರಟರು. ಶ್ರಾವಣಿ ಕೋಣೆಗೆ ಬಂದು ನೋಡಿದಾಗ ಶಂಭಜ್ಜ ಸ್ವಲ್ಪ ಗೆಲುವಾದಂತೆ ಕಂಡುಬಂದರು.
ಮಾರನೆಯ ದಿನ ಎಂದಿನಂತೆ ಶಾಂತಮ್ಮ ಶಂಭಜ್ಜನನ್ನೆಬ್ಬಿಸಲು ಅವರ ಕೋಣೆಗೆ ಹೋಗಿ ನೋಡಿದರೆ , ಶಂಭಜ್ಜ ಚಿರನಿದ್ರೆಯಲ್ಲಿದ್ದರು. ಹಾಗೆಯೇ ಅವರ ಕೈಯಲ್ಲಿ ಪತ್ರವೊಂದಿತ್ತು.
ಪ್ರೀತಿಯ ಮಕ್ಕಳೇ.. ಚಿಕ್ಕವರಿದ್ದಾಗಿನಿಂದಲೂ ನಿಮಗೆ ಬಹಳಷ್ಟು ಪ್ರೀತಿಯ ಧಾರೆಯನ್ನೇ ಎರೆದೆ. ಎಲ್ಲಾ ರೀತಿಯ ಸಂಸ್ಕಾರಗಳನ್ನೂ ಕೊಟ್ಟೆ. ನೀವು ಇಷ್ಟ ಪಟ್ಟ ವಿದ್ಯೆಯನ್ನೂ ಕೊಡಿಸಿದೆ. ಆದರೆ ದೂರದೂರುಗಳಲ್ಲಿ ನೆಲೆಸಿರುವ ನಿಮಗೆ ನಾನೂ ಬೇಡವಾದೆ. ತಾಯಿ ನೆಲವೂ ಬೇಡವಾಯಿತು. ಇಷ್ಟು ವರ್ಷ ಎಷ್ಟೇ ಕೇಳಿಕೊಂಡರೂ ಕೆಲಸದ ನೆಪವೊಡ್ಡಿ ಊರಕಡೆ ಮುಖ ಮಾಡದ ನೀವು ಕಳೆದ ಎರಡು ವರ್ಷಗಳಿಂದ ವರ್ಷಕ್ಕೊಮ್ಮೆ ಊರಿಗೆ ಬರುವುದನ್ನು ನೋಡಿ ನೀವು ಬದಲಾಗಿದ್ದೀರಿ ಅಂದುಕೊಂಡಿದ್ದೆ. ಆದರೆ ಅದು ಸುಳ್ಳು ಎನ್ನುವುದು ಕೆಲವು ದಿವಸಗಳ ಹಿಂದೆ ನೀವು ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡಾಗ ನನಗೆ ತಿಳಿಯಿತು. ಈ ಜಮೀನನ್ನು ನೆಲಸಮ ಮಾಡಿ ಅದ್ಯಾವುದೋ ಕೆಮಿಕಲ್ ಫ್ಯಾಕ್ಟರಿ ತೆರೆಯುವ ಯೋಜನೆ ನಿಮ್ಮಲ್ಲಿದೆಯೆಂದು ಅಚಾನಕ್ಕಾಗಿ ಕೇಳಿಸಿಕೊಂಡೆ. ಈ ಮಾಲಿನ್ಯರಹಿತ ಊರು, ಶುಭ್ರವಾದ ಸೀತಾನದಿ ಕಲುಷಿತವಾಗುವುದನ್ನೂ ಇಲ್ಲಿನ ಮುಗ್ಧ ಜನರಿಗೆ ಮೋಸವಾಗುವುದನ್ನೂ ನಾನು ಸಹಿಸಲಾರೆ. ಎಂದಿಗೂ ಉಂಡ ನೆಲಕ್ಕೆ ದ್ರೋಹ ಬಗೆಯಲಾರೆ. ಇಷ್ಟು ವರುಷವೂ ಈ ಜನರಿಗಾಗಿ ಮಿಡಿದೆ. ಅವರ ಸಂತೋಷದಲ್ಲಿ ನನ್ನ ಸಂತೋಷವನ್ನು ಕಂಡೆ. ಅವರಲ್ಲೊಬ್ಬನಾಗಿ ಬದುಕಿದೆ. ಅವರಿಗೆ ಅನ್ಯಾಯವಾಗುವುದನ್ನು ನನಗೆ ಕಲ್ಪಿಸಿಕೊಳ್ಳುವುದೂ ಅಸಾಧ್ಯ. ಪ್ರೊಫೆಸರ್ ಷಣ್ಮುಗಂ ಬಂದು, ನಿಮ್ಮ ನೋವನ್ನು ಪತ್ರದಲ್ಲಿ ಬರೆದು ಮನಸ್ಸು ಹಗುರ ಮಾಡಿಕೊಳ್ಳಿ ಎಂದಾಗ ನನಗೆ ಒಂದು ಆಸರೆ ಸಿಕ್ಕಂತಾಯಿತು. ನಾನು ಮಡಿದರೆ ನನ್ನ ಸಮಸ್ತ ಆಸ್ತಿಯೂ ಶ್ರಾವಣಿ ಹಾಗೂ ಶಾಮಣ್ಣ – ಶಾಂತಮ್ಮ ದಂಪತಿಗಳಿಗೆ ಸಲ್ಲಬೇಕು. ಬಹಳ ವರ್ಷಗಳಿಂದ ಅವರನ್ನು ನಾನು ಬಲ್ಲೆ. ಬಹಳ ವಿಶ್ವಾಸಾರ್ಹರು. ಅವರೂ ನನ್ನಂತೆ ಜನಸೇವೆ ಮಾಡುವರೆಂಬ ಭರವಸೆ ನನಗಿದೆ. - ಇಂತೀ ಶಂಭಯ್ಯ..
ಊರ ಜನರು ಶಂಭಜ್ಜನ ಮನೆಗೆ ಧಾವಿಸತೊಡಗಿದರು..
ಶಂಭಜ್ಜ ಹೊಗ್ಬಿಟ್ಟ್ರಂತೆ……